ವಿಶ್ವನ ಮನೆಗೆ ನಾನು ಬಂದಾಗ್ಲೆಲ್ಲಾ ಟೀ.ವಿ. ಓಡುತ್ತಿರುತ್ತೆ. ತಿಂಡಿ ತಿಂದಿದ್ದಕ್ಕೆ, ಊಟ ಮಾಡಿದ್ದಕ್ಕೆ, ವಿತಂಡ ವಾದಕ್ಕೆ ಟೀವಿಯೇ ಸಾಕ್ಷಿಯಾಗ್ತಿತ್ತು. ನ್ಯೂಸ್ ಚ್ಯಾನಲ್ ಹಾಕಿದ್ದರೆ ಮಾತಾಡಲು ಕಷ್ಟ ಎಂದಿದ್ದೆ. ಆದರೆ ಇಂದು ಟೀವಿ ತಣ್ಣಗಿತ್ತು.
“ಯಾಕೆ ಡಲ್ ಹೊಡೀತಿದ್ದೀರಾ ?” ಎಂದು ವಿಶಾಲುನ ಕೇಳಿದೆ.
“ಮುನ್ನೂರು ಬರಬೇಕಿತ್ತು, ಸ್ಪೀಡು ಸಾಲ್ದೆ ಮುಗ್ಗರಿಸಿ ಬಿತ್ತು”
“ಯಾವ ಗಾಡಿ” ಎಂದೆ.
“ದುನಿಯಾ ಗಾಡಿ”
“ಫೋರ್ ವ್ಹೀರ‍್ರಾ?”
“ಫೋರ್ ವ್ಹೀಲರ್ ಈಗ ತ್ರೀವ್ಹೀಲರ್ ಆಗಿದೆ”
ನನಗೆ ಅರ್ಥ ಆಗಲಿಲ್ಲ. ವಿಶ್ವ ಮುಗುಳ್ನಕ್ಕ, ನಾನು ಟೀವಿಯತ್ತ ನೋಡಿ ಕೇಳಿದೆ.
“ಟೀವಿ ಕೆಟ್ಟಿದೆಯಾ?”
ವಿಶಾಲು ನನ್ನ ಮುಖ ನೋಡಿ ಸುಮ್ಮನಾದಳು, ವಿಶ್ವ ಕಾರಣ ಹೇಳಿದ.
“ಕೆಟ್ಟಿರೋದು ನನ್ಹೆಂಡ್ತಿ ತಲೆ”.
“ಗಂಡನ ಮೇಲೆ ಸಿಟ್ಟು ಇದೆಯಾ?”.
“ಹಳೇ ಗಂಡನ ಮೇಲೆ ಸಿಟ್ಟು ಮಾಡ್ಕೋಬರ‍್ದು ಅಂತ ಸತಿಶಿರೋಮಣಿ ಗ್ರಂಥದಲ್ಲಿ ಹೇಳಿದ್ದಾರೆ”
“ಹಾಗಿದ್ರೆ ಸಿಟ್ಯಾಕೆ?”
“ನನಗೆ ಟೀವಿ ಮೇಲೆ ಸಿಟ್ಟು, ಇತ್ತೀಚಿಗೆ ರ‍್ತಿರೋ ನ್ಯೂಸಲ್ಲಿ ಉಪ್ಪಿಲ್ಲ, ಹುಳಿ ಇಲ್ಲ, ಖಾರ ಇಲ್ಲ. ಒಗ್ಗರಣೆ ಮೊದಲೇ ಇಲ್ಲ, ನ್ಯೂಸು ತನ್ನ ಮೊದಲಿನ ಆಕರ್ಷಣೆ ಕಳ್ಕೊಂಡಿದೆ, ಕಳೆದ ಎರಡು ತಿಂಗಳ ಕಾಲ ಹಗಲು ರಾತ್ರಿ ಎಂಥ ಥ್ರಿಲ್ಲಿಂಗ್ ಸುದ್ದಿಗಳು ರ‍್ತಿದ್ದವು!” ಎಂದಳು ವಿಶಾಲು.
“ಪಾರ್ಟಿಗಳ ಕಚ್ಚಾಟ ಅನಿಮಲ್ ಕಿಂಗ್‌ಡಮ್ ಇಂಗ್ಲೀಷ್ ಚಾನಲ್‌ನಲ್ಲಿ ಬರೋ ಸಿಂಹ ಕಾಡೆಮ್ಮೆ ಫೈಟಿಂಗ್‌ಗಿಂತ ಥ್ರಿಲ್ಲಿಂಗ್ ಅಂತಿದ್ಲು ನನ್ನ ಹೆಂಡ್ತಿ. ಮಧ್ಯರಾತ್ರೀವರೆಗೆ ಟೀವಿ ನ್ಯೂಸ್ ನೋಡಿ ತಲೆ ಕೆಟ್ಟವಳಂತೆ ಚಪ್ಪಾಳೆ ಹೊಡೀತಿದ್ಲು” ಎಂದ ವಿಶ್ವ.
“ಜೈಲ್ ಕಂಡ ರಾಜಕಾರಣಿಗಳು, ಹಣ ಗುಳುಂ ಸ್ವಾಹ ಮಾಡಿದ ನೇತಾರರು, ತಮ್ಮ ಪೂರ್ವಾಶ್ರಮದ ಅವ್ಯವಹಾರ ಮರೆತು ಸಭ್ಯರಂತೆ ಭಾಷಣ ಮಾಡೋ ಅಭ್ಯರ್ಥಿಗಳ ಉಪನ್ಯಾಸ ನಂಗೆ ಆನಂದ ಕೊಡ್ತಿತ್ತು” ಎಂದಳು ವಿಶಾಲು.
“ನಮಗೆ ಗೊತ್ತಿಲ್ಲದ ವಿಷಯಗಳೆಲ್ಲಾ ಅವರೇ ಜಗಳದಲ್ಲಿ ಹೇಳ್ತಾರೆ” ಎಂದ ವಿಶ್ವ.
“ಉತ್ತರ ಭಾರತದಲ್ಲಿ ನಡೀತಿದ್ದ ಲೈಂಗಿಕ ಹಗರಣಗಳು ಇತ್ತೀಚೆಗೆ ದಕ್ಷಿಣಕ್ಕೂ ಬಂದಿದೆ, ಕೆಲವು ಸಂನ್ಯಾಸಿಗಳು ಸಹ ಮನ್ಮಥ ಲೀಲೆ ಕತೇನ ಸ್ವಾನುಭವದಿಂದ ಹೇಳ್ತಿದ್ರು, ನಾಯಕರಾಗಿ ಶಾಸನ ಮಾಡೋವ್ರೇ ದುಶ್ಶಾಸನ ಆಗಿದ್ದು ಸಹ ಟೀವಿನಲ್ಲಿ ಕಂಡೆ” ಎಂದಳು.
“ದಿನ ಬೆಳಗಾದ್ರೆ ಇನ್ನೊಬ್ಬ ನಾಯಕರ ಹುಳುಕುಗಳನ್ನು ಹುಡುಕಿ ಮಸಾಲೆ ಹಚ್ಚಿ ವಿರೋಧಿಗಳು ಹೇಳ್ತಿದ್ರು ಯಾರು ಎಷ್ಟೆಷ್ಟು ಅಕ್ರಮ ಆಸ್ತಿಗಳನ್ನ ಮಾಡಿದ್ದಾರೆ, ಎಷ್ಟು ಸುಳ್ಳು ಆಶ್ವಾಸನೆ ಕೊಟ್ಟಿದ್ದಾರೆ, ಎಷ್ಟು ಮಹಿಳೆಯರಿಗೆ ಮೋಸ ಮಾಡಿದ್ದಾರೆ, ಎಲ್ಲ ವಿಷಯ ನ್ಯೂಸಲ್ಲಿ ರ‍್ತಿತ್ತು. ನಾಯಕ – ಪ್ರತಿನಾಯಕ ಜಗಳ ಮಾಡಿ ಒಬ್ಬರಿಗೊಬ್ಬರು ಬಟ್ಟೆ ರ‍್ಕೊಂಡು ಜನಗಳ ಮುಂದೆ ನ್ಯೂಡ್ ಆಗ್ತಿದ್ರು. ಈ ನ್ಯೂಸು ನನ್ನ ಹೆಂಡ್ತಿಗೆ ಮಜಾ ಕೊಡ್ತಾ ಇತ್ತು” ಎಂದು ವಿಶ್ವ ವಿವರಿಸಿದ.
“ನೋಡು ವಿಶ್ವ, ಭ್ರಷ್ಟಾಚಾರದ ವಿರುದ್ಧ ಹೋರಾಡ್ತೀವಿ ಅಂತ ಓಟು ಪಡೆದು ಸೂಪರ್ ಭ್ರಷ್ಟಾಚಾರಕ್ಕೆ ಇಳಿದು ಕೋಟಿ ಕೋಟಿ ನುಂಗಿ ಜೈಲು ಸೇರಿದವರೂ ಲಿಸ್ಟಲ್ಲಿ ಇದ್ದಾರೆ, ಡಾಕು ರಾಣಿ ಪೂಲನ್‌ದೇವೀನ ಆ ಕಾಲದಲ್ಲೇ ಎಂ.ಪಿ. ಮಾಡಿದವರು ನಾವು, ಸತ್ಯವಂತರಿಗಿದು ಕಾಲವಲ್ಲ ಬಿಡು” ಎಂದು ಸಮಾಧಾನ ಹೇಳಿದೆ.
“ಈ ಸಲದ ಚುನಾವಣೇಲಿ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಬರೋ ದೇವರಂಥ ಸ್ಕೀಂ ಇತ್ತು. ಆದರೆ ನನ್ನ ಗಂಡನೇ ಅದನ್ನ ತಪ್ಪಿಸಿದ” ಎಂದು ವಿಶ್ವನ ತಲೆ ಮೇಲೆ ಗೂಬೆ ಕೂರಿಸಿದಳು.
“ಭಾರತದಲ್ಲಿ ೭ ಲಕ್ಷ ಬಿ.ಪಿ.ಎಲ್ ಕುಟುಂಬಗಳಿವೆ, ಕುಟುಂಬಕ್ಕೆ ಒಂದು ಲಕ್ಷ ಅಂದರೆ ವಾರ್ಷಿಕ ಬಜೆಟ್ ೭ ಸಾವಿರ ಕೋಟಿ! ಎಲ್ಲಿದೆ ಅಷ್ಟೊಂದು ಹಣ” ಎಂದೆ.
“ಟ್ಯಾಕ್ಸ್ ರೇಟ್ ಜಾಸ್ತಿ ಮಾಡಿ ಜನಗಳಿಗೆ ಹಂಚಿದ್ರಾಯ್ತು. ಓಟು ಕೊಳ್ಳೋದು ತಾನೇ ಮುಖ್ಯ”
“ಈ ಸಲ ನಾನು ಅಂದುಕೊಂಡಷ್ಟು ಸೀಟುಗಳು ಬರಲಿಲ್ಲ, ಇನ್ನೊಬ್ಬರ ಸೀಟು ಕಮ್ಮಿ ಮಾಡೋ ಥರ ವಿರೋಧಿಗಳ ಮಾತುಗಳು, ಹಳೆಯ ಘಟನೆಗಳ ಫ್ಲಾö್ಯಷ್‌ಬ್ಯಾಕುಗಳು ಇದ್ದವು! ಜನರಿಗೆ ಬಿಟ್ಟಿ ಮನರಂಜನೆ” ಎಂದ ವಿಶ್ವ.
“ನಮ್ಮ ಮತದಾರರಿಗೆ ನೆನಪಿನ ಶಕ್ತಿ ಕಡಿಮೆ, ಮುಂದಿನ ಚುನಾವಣೆ ಹೊತ್ತಿಗೆ ಹಳೇದೆಲ್ಲ ಮರೆತು ಬಿಡ್ತಾರೆ, ಜೈಲಲ್ಲಿರೋರ‍್ನೇ ಮತ್ತೆ ಮಂತ್ರಿ ಮಾಡ್ತಾರೆ” ಎಂದೆ.
“ನೆಮ್ಮದಿಯಿಂದ ರಾಜ್ಯಭಾರ ನಡೆಸೋಕೆ ಯಾರು ಬಂದ್ರೂ ನಮ್ಮಲ್ಲಿ ಅವಕಾಶ ಇಲ್ಲ” ಎಂದು ನಿರಾಶೆಯಿಂದ ವಿಶ್ವ ಹೇಳಿದ.
“ಹಾಗಾದ್ರೆ ನಮ್ಮನ್ನ ಆಳೋಕೆ ಯಾರನ್ನ ತರಬೇಕು ಹೇಳಿ?”
“ಮರ‍್ನೇ ಪಾರ್ಟಿನೇ ಬರಬೇಕು, ಇಂಗ್ಲಿಷ್‌ನವರು ಇದ್ದಾಗ ಇಷ್ಟು ಲಂಚ, ಇಷ್ಟು ಹಗರಣ ಇರಲಿಲ್ಲ” ಎಂದ ವಿಶಾಲು ಹೇಳಿದಾಗ ವಿಶ್ವನಿಗೆ ಸಿಟ್ಟು ಬಂತು.
“ನಮ್ಮ ದೇಶ ನಾವೇ ಆಳಬೇಕು, ನಮ್ಮ ರಾಜರುಗಳ ಒಳ ಜಗಳದಲ್ಲಿ ಮೂರನೆಯವರಾಗಿ ಬಂದು ಲಾಭ ಮಾಡಿಕೊಂಡವರು ಇಂಗ್ಲೀಷ್‌ನವರು, ಈಗ ಹಂಗ್ ಆಗ್ತಿಲ್ಲ, ನಮ್ಮ ಲೀರ‍್ನ ನಾವೇ ಚುನಾಯಿಸ್ತಿದ್ದೀವಿ” ಎಂದೆ.
ವಿಶಾಲು ಕಾಫಿ ತಂದಿಟ್ಟಳು.
“ವಿವಿಧ ಪಕ್ಷಗಳ ಜಗಳ ಒಳ್ಳೆ ಮನರಂಜನೆ ಕೊಡ್ತಿತ್ತು, ನ್ಯೂಸ್ ಚಾನಲ್ ಸದಾ ಬಿಸಿ ಬಿಸಿಯಾಗರ‍್ತಿತ್ತು, ಹೊಸ ಹೊಸ ಬೈಗಳು ಕಲಿಯೋಕೆ ಅವಕಾಶ ಇತ್ತು” ಎಂದಳು ವಿಶಾಲು.
“ಇತ್ತೀಚೆಗೆ ಯಾವ ನ್ಯೂಸ್ ನಿಮಗೆ ಆಸಕ್ತಿ ತಂತು?”.
“ಸೆರಗೆಳೆದು ತಲೆ ತಪ್ಪಿಸಿಕೊಂಡ ಮಹಾನೀಯನ್ನ ಹುಡುಕೋ ಸುದ್ದಿ! ಅದಂತೂ ದಿನದಿಂದ ದಿನಕ್ಕೆ ಪತ್ತೇದಾರಿ ಕಾದಂಬರಿ ಥರ ಕುತೂಹಲ ಕೊಡ್ತಾ ಇತ್ತು. ಒಂದು ತಿಂಗಳು ಕಾಲ ರಿಮೋಟ್ ತುದೀಲಿ ನ್ಯೂಸ್ ನೋಡ್ತಿದ್ದೆ. ಆದರೆ ಈಗ ಬರೀ ಸಪ್ಪೆ ನ್ಯೂಸು!”
“ಅಂದ್ರೆ ಈಗಿನ ನ್ಯೂಸಲ್ಲಿ ಗಮ್ಮತ್ತು ಇಲ್ಲ ಅಂತಾನಾ?” ಎಂದೆ.
“ಹೌದು ಮತ್ತೆ, ನಲ್ಲಿ ಕಟ್ಟೆ ಜಗಳ ಅಂದ್ರೆ ಇಡೀ ಊರು ಜನ ಸೇರಿ ಆನಂದ ಪಡ್ತಿದ್ರು, ರಿಸಲ್ಟ್ ಸೊನ್ನೆ ಅಂತ ಎಲ್ಲರಿಗೂ ಗೊತ್ತಿರೋದು. ಆದರೆ ಬಿಟ್ಟಿ ಮನರಂಜನೆ ಸಿಕ್ತಿತ್ತಾ?” ಎಂದಳು ವಿಶಾಲು.
“ಆಯ್ತಮ್ಮ, ಈಗ ಏನ್ ಮಾಡೋಣ ಹಾಗಿದ್ರೆ?” ಎಂದೆ.
“ಹಿಂದಿ ಧಾರಾವಾಹಿ ಖ್ಯಾತಿಯ ರಮಾನಂದ್ ಸಾಗರ್‌ಗೆ ನೀವು ಹೇಳಿ, ಅವರು ೧೯೮೭ರಲ್ಲಿ ರಾಮಾಯಣ ತೆಗೆದು ೫ ವರ್ಷ ಓಡಿಸಿದ್ರು, ಅದೇ ರೀತಿ ನಮ್ಮಲ್ಲಿರೋ ಕೆಲವು ಕೆಟ್ಟ ರಾಜಕಾರಣಿಗಳ ಬಗ್ಗೆ ಸೀರಿಯಲ್ ತೆಗೆದು ಐದು ವರ್ಷ ಓಡಿಸಲಿ” ಎಂದಳು.
“ಐದು ವರ್ಷ ಆದ್ಮೇಲೆ?” ಎಂದ ವಿಶ್ವ.
“ಅಷ್ಟರಲ್ಲಿ ಮತ್ತೆ ಎಲೆಕ್ಷನ್ ಬರುತ್ತಲ್ಲ! ಮತ್ತೆ ಒಬ್ಬರನ್ನೊಬ್ಬರು ಬೈಯ್ಯೋದಕ್ಕೆ ಶುರು ಮಾಡ್ತಾರಲ್ಲ, ಒಬ್ಬರ ಮೇಲೆ ಒಬ್ಬರು ಕೆಸರು ಎರಚ್ತಾರಲ್ಲ, ಆಗ ಟೀವಿ ನ್ಯೂಸಲ್ಲಿ ಮಜಾ ಇದ್ದೇ ಇರುತ್ತೆ” ಎಂದಳು.