ನವದೆಹಲಿ: ಇಸ್ಕಾನ್ ಮೇಲೆ ಗಂಭೀರ ಆರೋಪ ಮಾಡಿರುವ ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.
“ಇಸ್ಕಾನ್ ಅವರು ಕಟುಕರಿಗೆ ಮಾರಿದಷ್ಟು ಗೋವುಗಳನ್ನು ಖಂಡಿತವಾಗಿಯೂ ಬೇರೆ ಯಾರೂ ಕೂಡ ಮಾರಿರಲು ಸಾಧ್ಯವೇ ಇಲ್ಲವೇನೋ?! ಇವರೇ ಹೀಗೆ ಮಾಡಿರುವಾಗ ಬೇರೆಯವರ ಕಥೆಯೇನು?” ಎಂದು ಬಿಜೆಪಿ ಸಂಸದೆ ಮೇನಕಾ ಹೇಳಿರುವ ವೀಡಿಯೋ ವೈರಲ್ ಆಗಿದೆ.
ರಾಷ್ಟ್ರೀಯ ಲೋಕ ದಳ ರಾಷ್ಟ್ರೀಯ ಪ್ರಚಾರ ಉಸ್ತುವಾರಿ ಪ್ರಶಾಂತ್ ಕನೋಜಿಯಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮೇನಕಾ ಗಾಂಧಿ ಹೇಳಿರುವ ಒಂದು ನಿಮಿಷದ ವೀಡಿಯೋ ಹಂಚಿಕೊಂಡಿದ್ದಾರೆ.
ಆರೋಪ ಸುಳ್ಳು ಮತ್ತು ಆಧಾರ ರಹಿತ:
ಬಿಜೆಪಿ ಸಂಸದೆ ಮೇನಕಾ ಗಾಂಧಿ ಆರೋಪಗಳನ್ನು ಇಸ್ಕಾನ್ ರಾಷ್ಟ್ರೀಯ ವಕ್ತಾರ ಯುಧಿಷ್ಟಿರ ಗೋವಿಂದ ದಾಸ್ ತಳ್ಳಿಹಾಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ʻಇಸ್ಕಾನ್ ಹಸು ಮತ್ತು ಗೂಳಿಗಳ ರಕ್ಷಣೆ ಮತ್ತು ಆರೈಕೆಯಲ್ಲಿ ಭಾರತ ಮಾತ್ರವಲ್ಲದೆ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಹಸುಗಳು ಮತ್ತು ಎತ್ತುಗಳನ್ನು ನೋಡಿಕೊಳ್ಳಲಾಗುತ್ತದೆ ಹೊರತು ಕಸಾಯಿಖಾನೆಗೆ ಮಾರಾಟ ಮಾಡಲಾಗುವುದಿಲ್ಲ’ ಎಂದಿದ್ದಾರೆ.
ಮನೇಕಾ ಗಾಂಧಿ ಅವರ ಈ ಆರೋಪ ಸುಳ್ಳು ಮತ್ತು ಆಧಾರ ರಹಿತವಾಗಿದೆ. ಅವರ ಇಂತಹ ಹೇಳಿಕೆ ಅಚ್ಚರಿ ಮೂಡಿಸಿದೆ. ಎಲ್ಲಿ ದನದ ಮಾಂಸವೇ ಪ್ರಮುಖ ಆಹಾರವಾಗಿದೆಯೋ ಅಂತಹ ರಾಷ್ಟ್ರಗಳಲ್ಲಿ ಕೂಡ ಇಸ್ಕಾನ್ ಗೋ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದೆ. ಅನಾಥವಾಗಿರುವ, ಗಾಯಗೊಂಡಿರುವ ಮತ್ತು ರಕ್ಷಿಸಲಾದ ಗೋವುಗಳನ್ನು ಇಸ್ಕಾನ್‌ನ ಗೋಶಾಲೆಗೆ ಸೇರಿಸುವ ಪದ್ಧತಿ ಈಗಲೂ ಇದೆ ಎಂದಿದ್ದಾರೆ.