ವಾರಕ್ಕೆ ೭೦ ಗಂಟೆ ದುಡಿಮೆ ಕಷ್ಟ ಸಾಧ್ಯವೇನಲ್ಲ. ಆರೋಗ್ಯವನ್ನೂ ಪರಿಗಣಿಸಿ ದುಡಿಯುವವರಿಗೆ ಸೂಕ್ತ ವಾತಾವರಣ ಕಲ್ಪಿಸಿಕೊಡಬೇಕು.
ಇನ್ಫೋಸಿಸ್ ನಾರಾಯಣಮೂರ್ತಿ ೩೦ ವರ್ಷ ವಯೋಮಾನದವರು ವಾರಕ್ಕೆ ೭೦ ಗಂಟೆ ದುಡಿಯಬೇಕೆಂದು ಸಲಹೆ ನೀಡಿರುವುದು ಪರಿಶೀಲನೆಗೆ ಅರ್ಹ. ದೇಶದ ಆರ್ಥಿಕ ಬೆಳವಣಿಗೆ ವೇಗ ಹೆಚ್ಚಿಸಬೇಕು ಎಂದರೆ ಯುವ ಪೀಳಿಗೆ ಹೆಚ್ಚು ಕಾಲ ದುಡಿಯಬೇಕು. ಎರಡನೇ ಮಹಾಯುದ್ಧವಾದ ಮೇಲೆ ಜಪಾನ್ ಮತ್ತು ಜರ್ಮನಿಯಲ್ಲಿ ಯುವ ಪೀಳಿಗೆ ಈ ಕೆಲಸ ಕೈಗೊಂಡಿತ್ತು. ನಮ್ಮ ದೇಶದಲ್ಲಿ ಶೇ.೫೨ ರಷ್ಟು ಯುವ ಜನಾಂಗ ೩೦ ವರ್ಷದ ಒಳಗೆ ಇದೆ. ಇವರಿಗೆ ವಾರಕ್ಕೆ ೭೦ ಗಂಟೆ ಕೆಲಸ ಮಾಡುವುದು ಕಷ್ಟವಾಗದು. ಪ್ರತಿದಿನ ೧೪ ಗಂಟೆ ದುಡಿಯಬೇಕು. ವಾರಕ್ಕೊಮ್ಮೆ ರಜೆ ಪಡೆಯಬೇಕು. ಎಂಬುದು ನಾರಾಯಣಮೂರ್ತಿ ಅವರ ಸಲಹೆ. ಇದರ ಪರ-ವಿರೋಧ ಹಾಗೂ ತೀವ್ರ ಟೀಕೆಗಳು ಕೇಳಿಬಂದಿವೆ. ನಮ್ಮಲ್ಲಿ ಈಗ ಪ್ರತಿದಿನ ೮ ಗಂಟೆ ದುಡಿಯುವ ಪರಿಪಾಠ ಇದೆ. ಶನಿವಾರ ಅರ್ಧದಿನ ರಜೆ ನೀಡಲಾಗಿದೆ. ಖಾಸಗಿ ಕಂಪನಿ ಮತ್ತು ಕೈಗಾರಿಕೆಗಳಲ್ಲಿ ವಾರಕ್ಕೊಂದು ದಿನ ರಜೆ ನೀಡುವ ನಿಯಮ ಜಾರಿಯಲ್ಲಿದೆ. ಇದನ್ನು ಬದಲಿಸಬೇಕು ಎಂದರೆ ಮುಕ್ತ ಚರ್ಚೆ ನಡೆಯಬೇಕು. ಸರ್ಕಾರದ ದುಡಿಮೆ ಅವಧಿಯನ್ನು ಎಲ್ಲ ಕಡೆ ಅನ್ವಯಿಸಲು ಬರುವುದಿಲ್ಲ. ಸರ್ಕಾರ ನೇಮಕಾತಿ ಮಾಡಿಕೊಳ್ಳುವಾಗ ಹೆಚ್ಚು ಉದಾರ ನಿಲುವು ತೋರುತ್ತದೆ. ಸರ್ಕಾರದ ರೀತಿಯಲ್ಲಿ ಖಾಸಗಿ ಕಂಪನಿಗಳು ಕೆಲಸ ಮಾಡುವುದಿಲ್ಲ. ಕೊರೊನಾ ಬಂದ ಮೇಲೆ ಖಾಸಗಿ ಕಂಪನಿಗಳಲ್ಲಿ ಕೆಲಸದ ಸಮಯ ಇಳಿಮುಖಗೊಂಡಿದೆ. ಮೂರು ಪಾಳಿ ಇರುತ್ತಿದ್ದ ಕೆಲಸ ಈಗ ಎರಡು ಪಾಳಿಗೆ ಇಳಿದಿದೆ. ರಾತ್ರಿಪಾಳಿ ಕೆಲಸ ಮಾಡುತ್ತಿದ್ದ ಕಾರ್ಖಾನೆಗಳು ಈಗ ಹಗಲು ಹೊತ್ತು ಮಾತ್ರ ಕಾರ್ಯ ನಿರ್ವಹಣೆ ಕೈಗೊಂಡಿದೆ.
೩೦ ವರ್ಷದೊಳಗೆ ಇರುವ ವಯೋಮಾನದವರಿಗ ದೈಹಿಕ ಮತ್ತು ಮಾನಸಿಕ ಶಕ್ತಿ ಇರುತ್ತದೆ. ವಾರದಲ್ಲಿ ಎರಡು ದಿನ ವಿಶ್ರಾಂತಿ ಪಡೆದು ಮತ್ತೆ ಕೆಲಸಕ್ಕೆ ಹಾಜರಾಗಬಹುದು. ಅದಕ್ಕೆ ತಕ್ಕಂತೆ ಶೇಕಡ ೫೦ ರಷ್ಟು ಸಂಬಳ ಅಧಿಕಗೊಳ್ಳಬೇಕು. ವಿದೇಶಗಳಲ್ಲಿ ನಮ್ಮ ಯುವಕರೇ ಹೆಚ್ಚು ಗಂಟೆಗಳ ಕಾಲ ದುಡಿಯುತ್ತಿದ್ದಾರೆ.
ಯುಎಇಯಲ್ಲಿ ವಾರಕ್ಕೆ ೫೨.೬ ಗಂಟೆ ದುಡಿಮೆ ಇದೆ. ಅದಕ್ಕೆ ತಕ್ಕಂತೆ ಸಂಬಳವೂ ಇದೆ. ಐಟಿ ಕಂಪನಿಗಳು ಈ ನಿಯಮ ಅನುಸರಿಸುವುದರಿಂದ ಹೆಚ್ಚು ಸಮಯ ಮತ್ತು ಹಣ ಉಳಿತಾಯವಾಗುತ್ತದೆ. ಎರಡೇ ಪಾಳಿ ಇರುತ್ತದೆ. ಇದಕ್ಕೆ ಬೇಕಿರುವುದು ಕಠಿಣ ಪರಿಶ್ರಮ, ಕಾಯಕ ನಿಷ್ಠೆ. ನಮ್ಮ ಯುವಕ- ಯುವತಿಯರು ವಿದೇಶಿ ಆಹಾರ ಪದ್ಧತಿ, ವೇಷಭೂಷಣ ಅಳವಡಿಸಿಕೊಂಡಿದ್ದಾರೆ. ಅದೇರೀತಿ ಕಾಯಕ ಸಂಸ್ಕೃತಿ ಅಳವಡಿಸಿಕೊಳ್ಳುವುದು ಕಷ್ಟವಾಗುವುದಿಲ್ಲ. ಕೆಲಸ ಮುಗಿದ ಮೇಲೆ ಬಹುತೇಕರು ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುವುದಿಲ್ಲ. ಮೋಜಿನ ತಾಣಗಳನ್ನು ಹುಡುಕಿಕೊಳ್ಳುತ್ತಾರೆ. ಅದಕ್ಕಿಂತ ದುಡಿಮೆ ಅವಧಿಯನ್ನು ಹೆಚ್ಚಿಸುವುದು ಸೂಕ್ತ. ಇದರಿಂದ ಅವರು ನಿಯಮಿತ ಆಹಾರ ಮತ್ತು ಶಿಸ್ತಿನ ಜೀವನಕ್ಕೆ ಹೊಂದಿಕೊಳ್ಳುತ್ತಾರೆ. ಅನಿವಾಸಿ ಭಾರತೀಯರೊಬ್ಬರು ಅಮೆರಿಕದಲ್ಲಿ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಿಸಿಕೊಂಡು ಈಗಲೂ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕೆಲಸ ಮಾಡುವುದು ಕಷ್ಟವಾಗಿಲ್ಲ. ನಮ್ಮಲ್ಲೂ ಎಂ. ವಿಶ್ವೇಶ್ವರಯ್ಯ ಎಲ್ಲರಿಗೂ ಆದರ್ಶವಾಗುವಂತೆ ಕಾಯಕನಿಷ್ಠೆ ಬೆಳೆಸಿಕೊಂಡವರು. ಅವರು ೧೦೨ ವರ್ಷ ಬದುಕಿದ್ದರು. ಅದೇರೀತಿ ಅಬ್ದುಲ್ ಕಲಾಂ ಕೊನೆಯವರೆಗೂ ಪಾದರಸದಂತೆ ಓಡಾಡಿ ಕೆಲಸ ಮಾಡುತ್ತಿದ್ದರು. ನಾರಾಯಣ ಮೂರ್ತಿ ಅವರ ಹೇಳಿಕೆಯನ್ನು ಅಕ್ಷರಶಃ ಪರಿಗಣಿಸುವ ಅಗತ್ಯವಿಲ್ಲ. ವಾರಕ್ಕೆ ೭೦ ಗಂಟೆ ದುಡಿಮೆ ಎಂಬುದನ್ನು ಯುವ ಜನಾಂಗ ತಮ್ಮ ಅನುಭವದ ಮೇಲೆ ನಿರ್ಧರಿಸಬೇಕು. ಹೃದ್ರೋಗ ತಜ್ಞರು ಹೇಳಿದಂತೆ ಕಾರ್ಯದ ಒತ್ತಡದಿಂದ ಯುವಕರಲ್ಲಿ ಹೆಚ್ಚು ಹೃದ್ರೋಗ ಕಂಡು ಬಂದಿರಬಹುದು. ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಅಗತ್ಯ. ಹೃದ್ರೋಗ ಬರುವುದಕ್ಕೂ ನಮ್ಮ ಜೀವನಶೈಲಿ ಬದಲಿಸಿವುದೂ ಪ್ರಮುಖ ಎಂಬುದನ್ನು ಮರೆಯುವಂತಿಲ್ಲ. ನಾರಾಯಣ ಮೂರ್ತಿ ತಮ್ಮ ಅನುಭವದ ಮೇಲೆ ಹೇಳಿಕೆ ನೀಡಿದ್ದಾರೆ. ಅವರನ್ನು ಉದ್ಯಮಿ ಎನ್ನುವುದಕ್ಕಿಂತ ನಿಷ್ಠಾವಂತ ಕೆಲಸಗಾರ ಎಂದು ಪರಿಗಣಿಸುವುದು ಸೂಕ್ತ. ನಮ್ಮ ದೇಶದಲ್ಲಿ ಈಗ ಸರಾಸರಿ ದುಡಿಮೆ ಕಾಲ ವಾರಕ್ಕೆ ೬೧.೬ ಗಂಟೆಯವರೆಗೂ ಇದೆ. ದ್ವೀಪಗಳಲ್ಲಿ ವಾರಕ್ಕೆ ೭೮. ೬ ಗಂಟೆ ದುಡಿಯುವವರೂ ಇದ್ದಾರೆ. ಉದ್ಯಮಿಗಳು ಕಾರ್ಮಿಕರನ್ನು ಹೆಚ್ಚು ದುಡಿಸಲು ಪ್ರಯತ್ನಿಸುವುದು ಸಹಜ. ಅದಕ್ಕೆ ತಕ್ಕಂತೆ ಸಂಬಳ ಹೆಚ್ಚಿಸುವುದು ಅಗತ್ಯ. ಅದರಲ್ಲಿ ಚೌಕಾಶಿ ಇರಬಾರದು. ದುಡಿಮೆ ಅವಧಿಯ ಬಗ್ಗೆ ದೇಶಾದ್ಯಂತ ಮುಕ್ತ ಚರ್ಚೆ ನಡೆಯಬೇಕು. ಯಾವ ಯಾವ ಉದ್ದಿಮೆಗಳಿಗೆ ಹೊಸ ನಿಯಮ ಅನ್ವಯಿಸಬೇಕು ಎಂಬುದನ್ನು ತೀರ್ಮಾನಿಸಬೇಕು.