ಹುಬ್ಬಳ್ಳಿ : ಪಕ್ಷದ ವರಿಷ್ಠರು ವಿಧಾನಸಭಾ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂದು ತಿಳಿಸಿದ್ದು ಬೇಸರ ತರಿಸಿದೆ. ನನಗೆ ಕಾರಣ ಕೊಡಿ ಎಂದು ವರಿಷ್ಠರಿಗೆ ಕೇಳಿದ್ದೇನೆ. ಮರು ಪರಿಶೀಲನೆ ಮಾಡಿ ಎಂದು ಹೇಳಿದ್ದೇನೆ. ಏನೂ ಪ್ರತಿಕ್ರಿಯೆ ಬರದೇ ಇದ್ದರೆ ಮುಂದಿನ ತೀರ್ಮಾನ ತಿಳಿಸುತ್ತೇನೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೇನೂ ವಯಸ್ಸಾಗಿಲ್ಲ. ಗಟ್ಟಿಯಾಗಿದ್ದೇನೆ. ಇನ್ನೂ ಹದಿನೈದು ವರ್ಷ ರಾಜಕೀಯದಲ್ಲಿ ಸಕ್ರಿಯವಾಗಿರುತ್ತೇನೆ. ಪಕ್ಷದ ತೀರ್ಮಾನ ಏನೇ ಆಗಿರಲಿ ಎಂದು ಹೇಳಿದರು.
ಯಾವ ಕಾರಣಕ್ಕೆ ಸ್ಪರ್ಧೆ ಬೇಡ ಎಂದು ಹೇಳಿದ್ದಾರೆ ಗೊತ್ತಿಲ್ಲ. ನಾನು ಅದನ್ನೇ ಪಕ್ಷದ ವರಿಷ್ಠರಿಗೆ ಕೇಳುತ್ತಿದ್ದೇನೆ. ಏನೂ ಹೇಳಿಲ್ಲ ಎಂದರು.
ಇದಕ್ಕೆ ಯಾರು ಕಾರಣರು? ಯಾರ ಕೈವಾಡ? ಏನು ಕಾರಣ ಎಂಬುದೇ ನೂ ನನಗೆ ಸದ್ಯಕ್ಕೆ ಗೊತ್ತಿಲ್ಲ. ವರಿಷ್ಠರಿಂದ ನಾನು ಸ್ಪಷ್ಟ ಕಾರಣ ಬಯಸಿದ್ದೇನೆ ಎಂದು ಹೇಳಿದರು.
ಕೆಲವರಿಗೆ ಅನಾರೋಗ್ಯ, ಆಪಾದನೆ, ಆರೋಪ ಏನೇನೋ ಕಾರಣ ಇವೆ. ನನ್ನ ವಿಷಯದಲ್ಲಿ ಯಾವುದೂ ಇಲ್ಲ. ಸಕ್ರಿಯವಾಗಿ ರಾಜಕಾರಣದಲ್ಲಿದ್ದರೂ ಈ ತರಹ ಹೇಳಿದರೆ ಹೇಗೆ ಎಂದು ಪ್ರಶ್ನಿಸಿದರು.
ಯಾವುದೇ ಕಾರಣಕ್ಕೂ ನಾನು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.