ಇದೊಂದು ಕರ್ನಾಟಕ ಕೇಂದ್ರಿತ ಚುನಾವಣಾ ಬಜೆಟ್: ಹೆಚ್ಡಿಕೆ ಟೀಕೆ

Advertisement

ದಾವಣಗೆರೆ: ರಾಜ್ಯದಲ್ಲಿ ಚುನಾವಣೆ ನಡೆಯಲು ಇನ್ನು ಕೆಲವೇ ತಿಂಗಳು ಬಾಕಿ ಇರುವುದರಿಂದ ಇದೊಂದು ಕರ್ನಾಟಕ ಕೇಂದ್ರಿತ ಚುನಾವಣಾ ಬಜೆಟ್ ಮಾತ್ರ. ಜನರನ್ನು ಮರಳು ಮಾಡಲು ಕೇಂದ್ರ ಸರ್ಕಾರ ಬಜೆಟ್ ಘೋಷಣೆ ಮಾಡಿದೆ ಎಂದು ಕೇಂದ್ರದ ಬಜೆಟ್ ಕುರಿತು ಮಾಜಿ ಸಿಎಂ, ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಅವರು, ಈಗ ಚುನಾವಣಾ ಹತ್ತಿರ ಬರುತ್ತಿದ್ದಂತೆ ಬಜೆಟ್ ಮಂಡನೆ ಮಾಡಿದ್ದು, ಬಜೆಟ್‌ನಲ್ಲಿ ಘೋಷಿಸಿರುವ ಎಲ್ಲಾ ಯೋಜನೆಗಳು ಅನುಷ್ಠಾನವಾಗಬೇಕಲ್ಲ? ಕೇಂದ್ರದ ಬಜೆಟ್ ರಾಜ್ಯದಲ್ಲಿ ಮುಂದೆ ಬರುವ ಸರ್ಕಾರದ ತೀರ್ಮಾನ ಮಾಡುತ್ತೆ ಎಂದು ಅಭಿಪ್ರಾಯಿಸಿದರು.
ಈಗ ಬಜೆಟ್ ಘೋಷಣೆಯಾದರೂ ಹಣಕಾಸು ಬಿಡುಗಡೆ ಏಪ್ರಿಲ್ ಮೇಲೆ ಪ್ರಾರಂಭವಾಗುತ್ತದೆ. ಭದ್ರಾ, ಮಹಾದಾಯಿ, ಕೃಷ್ಣ ಅಭಿವೃದ್ಧಿಗೆ ಏನೇ ಘೋಷಣೆ ಮಾಡಿದರೂ ಮೊದಲೇ ಕೇಂದ್ರ ಅನುಷ್ಠಾನ ಮಾಡಬೇಕಿತ್ತು. ಇವರು ಈಗ ಜಾರಿ ಮಾಡಿರುವ ಕಾರ್ಯಕ್ರಮಗಳನ್ನು ಜಾರಿಗೆ ತರಲು ಮುಂದಿನ ಸರ್ಕಾರ ಅಧಿಕಾರಕ್ಕೆ ಬರಬೇಕು. ಆದ್ದರಿಂದ ಕೇಂದ್ರದ ಘೋಷಣೆ, ಘೋಷಣೆ ಆಗಿಯೇ ಉಳಿಯತ್ತದೆ ಎಂದರು.
ಕೇಂದ್ರದ ಹಣ ಬಿಡುಗಡೆ ಆಗುವುದರ ಒಳಗೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ಇದು ಜನರನ್ನು ತಾತ್ಕಾಲಿಕವಾಗಿ ಮೆಚ್ಚಿಸಲು ಘೋಷಣೆಯಷ್ಟೇ. ಮನೆ ಬಿದ್ದಾಗ ೫ ಲಕ್ಷ, ಕೋವಿಡ್‌ನಲ್ಲಿ ಸಾವನ್ನಪ್ಪಿದಾಗ ೧ ಲಕ್ಷ, ಕೋವಿಡ್ ವಾರಿಯರ್ಸ್‌ಗೆ ೩೦ ಲಕ್ಷ ಕೊಡುತ್ತೇವೆ ಅಂದಿದ್ದರು. ಆದರೆ ಎಲ್ಲಿ ಕೊಟ್ಟರು ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಕೇಂದ್ರ ಘೋಷಣೆ ಮಾಡಿದ ಎಲ್ಲ ಯೋಜನೆಗಳು ಕೇವಲ ಕಾಗದದಲ್ಲಿ ಮಾತ್ರ ಇರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈಲ್ವೆ ಯೋಜನೆ ೨೦-೩೦ ವರ್ಷಗಳ ಹಿಂದೆ ಘೋಷಣೆ ಆಗಿರುವುದು ಇನ್ನೂ ಆಮೆ ಗತಿಯಲ್ಲಿ ನಡೆಯುತ್ತಿದೆ. ಕೇಂದ್ರ ಘೋಷಣೆ ಮಾಡಿದ ಕಾರ್ಯಕ್ರಮ ತಕ್ಷಣ ಜನರಿಗೆ ಅನುಕೂಲ ಆಗಲ್ಲ. ಕೇಂದ್ರದ ಬಜೆಟ್ ಮೇಲೆ ನನಗೆ ನಂಬಿಕೆ ಇಲ್ಲ, ಹೆಚ್ಚಿನ ಮಹತ್ವ ಕೊಡುವುದಿಲ್ಲ, ಕೇಂದ್ರದಿಂದ ಮೂಗಿಗೆ ತುಪ್ಪ ಸವರುವ ಕೆಲಸ ಆಗಿದೆ ಎಂದು ಬಜೆಟ್ ಕುರಿತು ವಿಶ್ಲೇಷಿಸಿದರು.
ಕರ್ನಾಟಕ ಬರಪೀಡಿತ ಎಂದು ಈಗಲಾದರೂ ಕೇಂದ್ರದ ನಾಯಕರಿಗೆ ಗೊತ್ತಾಗಿ ಘೋಷಣೆ ಮಾಡಿರುವುದು ಖುಷಿ ವಿಚಾರ. ಕರ್ನಾಟಕ ಬರಪೀಡಿತ ಅಂತ ಘೋಷಣೆ ಮಾಡಿರೋದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮತ್ತಿತರರು ಇದ್ದರು.