ಬೆಂಗಳೂರು: ಹಿಂದಿನ ಸರ್ಕಾರ ಹಣವಿಲ್ಲದಿದ್ದರೂ ಕಾಮಗಾರಿಗಳನ್ನು ಮಂಜೂರು ಮಾಡಿ, ಟೆಂಡರ್ ಕರೆದು ಸಾವಿರಾರು ಕೋಟಿ ರೂ. ಬಿಲ್ಲುಗಳನ್ನು ಬಾಕಿ ಇಟ್ಟು ಹೋಗಿದೆ. ಇದಕ್ಕೆ ಯಾರು ಹೊಣೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಹಿಂದಿನ ಸರ್ಕಾರದ ಕಾಲದ ಆರ್ಥಿಕ ಸ್ಥಿತಿ ಕುರಿತು ಟ್ವೀಟ್ ಮಾಡಿರುವ ಅವರು, 30,000 ಕೋಟಿ ರೂ.ಗಳಷ್ಟು ಬಾಕಿ ಬಿಲ್ಲುಗಳಿವೆ. ಇದಕ್ಕೆ ಯಾರು ಹೊಣೆ? ನಮ್ಮ ಕಾಲದ ಹಾಗೂ ಹಿಂದಿನ ಸರ್ಕಾರದ ಕಾಲದ ಆರ್ಥಿಕ ಸ್ಥಿತಿ ಕುರಿತು ವಿಧಾನಮಂಡಲದಲ್ಲಿ ಶ್ವೇತಪತ್ರ ಮಂಡಿಸುತ್ತೇನೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಮಾತನಾಡುವಾಗ ಮೈತ್ರಿ ಸರ್ಕಾರವನ್ನು ಬೀಳಿಸಿದ್ದು ಬಿಜೆಪಿಯವರು ಎಂದಿರುವುದು ವಿಧಾನಮಂಡಲದ ದಾಖಲೆಯಲ್ಲಿದೆ. ಅದನ್ನು ಬಿಡುಗಡೆ ಮಾಡುತ್ತೇನೆ. ಈಗ ತಮ್ಮ ಹೇಳಿಕೆ ಬದಲಿಸುವ ಮೂಲಕ ಅವರು ವಿಧಾನಮಂಡಲವನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ವಿದ್ಯುತ್ ಕ್ಷಾಮ ನೀಗಿಸಲು ಹೊರಗಿನಿಂದ ವಿದ್ಯುತ್ ಕೊಳ್ಳುತ್ತಿದ್ದೇವೆ. ಎಲ್ಲಾ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗುತ್ತಿದ್ದು, ಅಲ್ಲಿ ಕೋಜನರೇಷನ್ ನಿಂದ ಉತ್ಪಾದನೆ ಆಗುವ ವಿದ್ಯುತನ್ನು ಕೊಂಡುಕೊಳ್ಳುತ್ತೇವೆ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಖಾಸಗಿ ಸಂಸ್ಥೆಗಳು ರಾಜ್ಯಕ್ಕೆ ನೀಡಬೇಕೆಂದು ಆದೇಶ ಹೊರಡಿಸಿದ್ದೇವೆ. ವಿದ್ಯುತ್ ಕೊರತೆ ನೀಗಿಸಲು ಎಲ್ಲಾ ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ. 2019-23ರ ಅವಧಿಯಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಹಿಂದಿನ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ಬರ ಬಂದಿರುವುದರಿಂದ ವಿದ್ಯುತ್ ತೊಂದರೆಯಾಗಿರುವುದಕ್ಕೆ ಅವರೇ ಕಾರಣ. 16,000 ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆಯನ್ನು ನಾವು ಮಾಡಿದ್ದೆವು. ನವೀಕರಿಸಬಹುದಾದ ಇಂಧನ ಮೂಲಗಳ ಸದ್ಬಳಕೆಗೆ ಹಿಂದಿನ ಸರ್ಕಾರ ಒತ್ತು ನೀಡಿದ್ದರೆ ಪರಿಸ್ಥಿತಿ ಬೇರೆಯದೆ ಇರುತ್ತಿತ್ತು ಎಂದಿದ್ದಾರೆ.