ಬೆಂಗಳೂರು: ಕುವೆಂಪು ಅವರ ಕನಸಿನ ಸರ್ವ ಜನಾಂಗದ ಶಾಂತಿಯ ತೋಟ ಕಟ್ಟುವುದೇ ನಮ್ಮ ಗುರಿ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ರಾಜ್ಯವನ್ನು ಮರುನಾಮಕರಣ ಮಾಡಿ 50 ನೇ ವರ್ಷ ಪೂರೈಸಿದ ಹಿನ್ನಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಕರ್ನಾಟಕ ಸಂಭ್ರಮ 50 ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ರಾಜ್ಯಾದ್ಯಂತ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಹೆಸರಿನಲ್ಲಿ 01 ನವೆಂಬರ್ 2023 ರಿಂದ 01 ನವೆಂಬರ್ 2024 ರವರೆಗೆ ಕರ್ನಾಟಕ ಸಂಭ್ರಮ ಆಚರಿಸಲಾಗುವುದು.
50 ವರ್ಷಗಳ ಇತಿಹಾಸದಲ್ಲಿ ಅನೇಕ ಪ್ರಸಿದ್ಧಿಗೆ ಕನ್ನಡ ನಾಡು ಪಾತ್ರವಾಗಿದೆ. ಈ ಪುಣ್ಯಭೂಮಿಯಲ್ಲಿ ನಾವು ಉಸಿರಾಡುತ್ತಿರುವುದು ಹೆಮ್ಮೆಯ ಸಂಗತಿ. ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಮಾತನ್ನು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಹೇಳಿದ್ದರು. ಎಂದೆಂದಿಗೂ ನೀ ಕನ್ನಡಿಗನಾಗಿರು, ವಿಶ್ವ ಮಾನವನಾಗು ಎಂದು ರಾಷ್ಟ್ರಕವಿ ಕುವೆಂಪು ಅವರು ಅಮೂಲ್ಯ ಸಂದೇಶವನ್ನು ನೀಡಿದ್ದಾರೆ. ಕುವೆಂಪು ಅವರ ಕನಸಿನ ಸರ್ವ ಜನಾಂಗದ ಶಾಂತಿಯ ತೋಟ ಕಟ್ಟುವುದೇ ನಮ್ಮ ಗುರಿ ಎಂದರು.