ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರಿಗೆ ರಾಜ್ಯ ಸರ್ಕಾರ ನೋಟಿಸ್ ಜಾರಿ ಮಾಡಿದ್ದು, ನಿಯಮ ಮೀರಿ ವರ್ತಿಸದಂತೆ ತಾಕೀತು ಮಾಡಿದೆ.
ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಅಖಿಲ ಭಾರತ ಸೇವಾ ನಿಯಮ ಉಲ್ಲಂಘಿಸದೆ ಕಾನೂನಿನ ಇತಿಮಿತಿಯಲ್ಲೇ ವರ್ತಿಸಬೇಕೆಂದು ಸೂಚಿಸಿದ್ದಾರೆ.
ಇನ್ನೊಬ್ಬ ಸರ್ಕಾರಿ ಅಧಿಕಾರಿ ವಿರುದ್ಧ ಆರೋಪಕ್ಕೆ ಮಾಧ್ಯಮಗಳನ್ನು ಬಳಕೆ ಮಾಡಿಕೊಂಡಿದ್ದೀರಿ, ನಿಮಗೆ ಆರೋಪ ಮಾಡಲು ಸೂಕ್ತ ವೇದಿಕೆಯಿದೆ. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಹೋಗಿದ್ದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ನೀವು ಮಾಡಿರುವ ಆರೋಪಗಳಿಂದ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದೆ. ಇನ್ನು ಮುಂದೆ ಮಾಧ್ಯಮಗಳ ಮುಂದೆ ಇಲ್ಲವೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದರೆ ಅಖಿಲ ಭಾರತ ಸೇವಾ ನಿಯಮ ಉಲ್ಲಂಘನೆ ಎಂದೇ ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.