‘ಇಡೀ ರಾಜ್ಯಕ್ಕೆ ರಾಮುಲು ನಾಯಕರು’

Advertisement

ರಾಮುಲು ಅವರು ಮೊಳಕಾಲ್ಮೂರು ಕ್ಷೇತ್ರಕ್ಕೆ ಮಾತ್ರ ನಾಯಕರಲ್ಲ ಬದಲಿಗೆ ಇಡೀ ರಾಜ್ಯಕ್ಕೆ ನಾಯಕರು. ಅವರ ಬಗ್ಗೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಿ ಗೌಡ ಕಿಡಿಕಾರಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶ್ರೀರಾಮುಲು ಜಾಮೀನಿನ ಮೇಲೆ ಹೊರಗೆ ಇದ್ದಾರೆ ಎಂದು ಆರೋಪ ಮಾಡಿರುವ ಉಗ್ರಪ್ಪ ಅವರ ತಮ್ಮ ಸ್ವಂತ ಪಕ್ಷದ ರಾಷ್ಟ್ರೀಯ, ರಾಜ್ಯ ನಾಯಕರು ಬೇಲ್ ಮೇಲೆ ಹೊರಗೆ ಇದ್ದಾರೆ. ಅವರು ರಾಮುಲು ಬಗ್ಗೆ ಮಾತನಾಡುವುದು ಸಲ್ಲ ಎಂದರು
ನಮ್ಮ ಸರಕಾರ 2008 ರಿಂದ ಮಾಡಿದ ವಿವಿಧ ಅಭಿವೃದ್ದಿ ಕಾರ್ಯ ಕುರಿತು ನಾನು ಚರ್ಚೆ ಮಾಡಲು ಸಿದ್ದ ಎಂದ ಅವರು ಮೀಸಲಾತಿ ವಿಷಯದಲ್ಲಿ ನಾಯಕ ಸಮಾಜಕ್ಕೆ ಯಾವುದೇ ಕೊಡುಗೆ ರಾಮುಲು ಅವರು ನೀಡಿಲ್ಲ ಎಂದು ಹೇಳಿದ್ದಾರೆ. ಖುದ್ದು ನಾಯಕ ಸಮಾಜದ ಮುಖಂಡ ಆಗಿ ತಮ್ಮ ಸರ್ಕಾರ 5 ವರ್ಷದ ಅವಧಿಯಲ್ಲಿ ನಾಯಕ ಸಮಾಜಕ್ಕೆ ತಮ್ಮ ಆತ್ಮೀಯ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ನಾಯಕ ಸಮಾಜಕ್ಕೆ ಮೀಸಲಾತಿ ಕೊಡಿಸಲು ಏನು ಶ್ರಮ ವಹಿಸಿದರು ಎಂದು ಅವರು ಪ್ರಶ್ನೆ ಮಾಡಿದರು.
ಮಾಜಿ ಶಾಸಕ ಸುರೇಶ್ ಬಾಬು ಮಾತನಾಡಿ, ನಮ್ಮ ಬಿಜೆಪಿ ಸರ್ಕಾರ ಮೀಸಲಾತಿಯನ್ನು ಹೆಚ್ಚಳ ಮಾಡಿದೆ. ನಾಯಕ ಸಮಾಜಕ್ಕೆ ಮೀಸಲಾತಿ ಪ್ರಮಾಣ ಶೆ.3ರಿಂದ 7ಕ್ಕೇರಿದೆ. ಎಸ್ ಸಿ ಸಮಾಜ ಮೀಸಲಾತಿ ಪ್ರಮಾಣ ಶೇ.15ರಿಂದ 17ಕ್ಕೇರಿದೆ. ಇದರಿಂದ ಕಾಂಗ್ರೆಸ್ ನಾಯಕರಿಗೆ ಮುಜುಗರ ಆಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ನಾಯಕರು ಈ ರೀತಿ ರಾಮುಲು ಅವರನ್ನು ಟೀಕೆ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ರಾಮುಲು ಅವರು ನಮ್ಮ ದಲಿತ ಸಮಾಜಕ್ಕೆ ಒಂದು ಆಸ್ತಿ. ಅವರನ್ನು ಉಳಿಸಿಕೊಳ್ಳುವುದು ಅವರ ಘನತೆಗೆ ಧಕ್ಕೆ ಬಂದರೆ ನಾವೆಲ್ಲ ಅವರ ಪರ ಇರಲಿದ್ದೇವೆ ಎಂದು ಅವರು ಹೇಳಿದರು.
ಸಂಸದ ವೈ.ದೇವೇಂದ್ರಪ್ಪ, ಮಾಜಿ ಸಂಸದ ಜೆ.ಶಾಂತ, ಮುಖಂಡರಾದ ವೀರ ಶೇಖರ ರೆಡ್ಡಿ, ಮಾರುತಿ ಪ್ರಸಾದ್, ಗುರುಲಿಂಗನಗೌಡ, ಗುತ್ತಿಗಾನೂರು ವಿರೂಪಾಕ್ಷ ಗೌಡ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.