ಹುಬ್ಬಳ್ಳಿ: ರಾಜಕಾರಣಿಗಳಾಗಲಿ, ಸಿನಿಮಾ ನಟರಾಗಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ ಅವರಿಗೆ ರಾಜ ಮರ್ಯಾದೆ ಕೊಡಬಾರದು. ಯಾರೇ ಕೊಲೆ ಮಾಡಿದರೂ ಅವರಿಗೆ ಕಠಿಣ ಶಿಕ್ಷೆ ಆಗಬೇಕು. ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆಯನ್ನು ಇಡೀ ಚಿತ್ರರಂಗ ಖಂಡಿಸುತ್ತದೆ ಎಂದು ನಟ, ನಿರ್ದೇಶಕ ಇಂದ್ರಜೀತ್ ಲಂಕೇಶ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ನಂತರ ಕೊಲೆ ಆರೋಪಿಗಳು ಯಾರು ಎಂಬುದು ತಿಳಿಯಲಿದೆ. ಚಿತ್ರನಟ ದರ್ಶನ ತೂಗುದೀಪ ವಿಚಾರದಲ್ಲಿ ನಾನು ಟಾಂಗ್ ಕೊಟ್ಟಿಲ್ಲ. ತನಿಖೆ ನಡೆಯುತ್ತಿದೆ. ಈ ವೇಳೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದು ನಿನ್ನೆ ಹೇಳಿಕೆ ನೀಡಿದ್ದೇನೆ. ಇದನ್ನೆ ಟಾಂಗ್ ಎಂದು ಮಾಧ್ಯಮಗಳು ಅರ್ಥೈಸಿವೆ. ಮುಂದೆ ಅನಾಹುತ ಆಗುತ್ತದೆ ಎಂದು ಈ ಮೊದಲೇ ನಾನು ತಿಳಿಸಿದ್ದೆ. ಅದಕ್ಕೆ ರಾದ್ದಾಂತ ಆಗಿತ್ತು. ಈಗಲೂ ತನಿಖೆ ನಡೆಯುತ್ತಿದೆ ಆ ಬಗ್ಗೆ ಪ್ರತಿಕ್ರಿಯೆ ನೀಡಲ್ಲ.
ದರ್ಶನ ಪತ್ನಿಗೆ, ಮಗನಿಗೆ ದೇವರು ಧೈರ್ಯ ನೀಡಲಿ. ಗರ್ಭಿಣಿ ಗಂಡನನ್ನು ಕಳೆದುಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮವನ್ನು ಯಾವದ್ಯಾವದಕ್ಕೊ ಕಿಡಿಗೇಡಿಗಳು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿ. ರೇಣುಕಾಸ್ವಾಮಿ ಹೆಂಡತಿಗೆ ನ್ಯಾಯ ಒದಗಿಸಿಕೊಡಲಿ. ನನ್ನ ಸಹೋದರಿ ಗೌರಿ ಕೊಲೆಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅವರ ಪತ್ನಿಗೂ ಅನ್ಯಾಯವಾಗಿದೆ. ಅವರಿಗೂ ನ್ಯಾಯ ಕೊಡಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.