ಕನ್ನಡ ನಾಡಿನ ಸಂಕಟ ಸಂತಸಗಳ ಗಮನಕ್ಕೆ ತರುವಂತೆ ಸದಾ ಕಾಲ ನುಡಿವ ಮನ: ಇದರ ಪರಿಣಾಮವೇ ನಡವಳಿಕೆಯ ಕಡೆ ಗಮನ. ೯೨ನೆಯ ಸಂಸ್ಥಾಪನಾ ದಿನಾಚರಣೆಯ ಸುಸಂದರ್ಭದಲ್ಲಿ ಅಖಂಡ ಕರ್ನಾಟಕದ ಸರ್ವಾಂಗೀಣ ವಿಕಾಸದ ಮಾರ್ಗದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆ ವಹಿಸಿರುವ ಪಾತ್ರಗಳು ಹಲವಾರು. ನುಡಿಸೇವಕ, ಗಡಿಯ ಕಾವಲುಗಾರ, ಕನ್ನಡ ಮನಸ್ಸುಗಳ ಅರಿವಿಗೆ ಶ್ರೀಕಾರದ ಜೊತೆಗೆ ಸ್ವಾತಂತ್ರ್ಯ ಚಳವಳಿಯ ವಿವಿಧ ಆಯಾಮಗಳ ಸಾಧಕ ಬಾಧಕಗಳ ಸಂವಾದದ ರೀತಿಯ ವಿಚಾರ ವಿಮರ್ಶೆಯ ಜೊತೆಗೆ ಹರಿದು ಹಂಚಿ ಹೋಗಿದ್ದ ಕನ್ನಡದ ಭಾಗಗಳನ್ನು ಏಕೀಕರಣ ಚಳವಳಿಗೆ ಧೀಶಕ್ತಿ ತಂದುಕೊಡುವ ಮೂಲಕ ಕರ್ನಾಟಕ ರಾಜ್ಯ ಸ್ಥಾಪನೆಯ ಸಾಕ್ಷಾತ್ಕಾರದಲ್ಲಿ ಮುಂಚೂಣಿಯಲ್ಲಿ ನಿಂತ ಪರಿಣಾಮವೆಂದರೆ ನಾಡು ನುಡಿಗೆ ಅಗ್ರ ಸ್ಥಾನ ದೊರೆಯುವ ಅವಕಾಶ. ಗೋಕಾಕ್ ಚಳವಳಿಯ ನಿಲುವು ಒಲವುಗಳನ್ನು ಸಾರ್ವಜನಿಕರ ಗಮನಕ್ಕೆ ತಂದು ಕನ್ನಡ ನಾಡಿನ ಡಿಂಡಿಮ ವಿಶ್ವಾದ್ಯಂತ ಮಾರ್ದನಿಗೊಳ್ಳುವಂತೆ ಮಾಡಿದ್ದು ಕಡಿಮೆ ಸಾಹಸವೇನೂ ಅಲ್ಲ. ಇದರ ಜೊತೆಗೆ ಭಾವನಾತ್ಮಕ ಭಾಷೆಯಾಗಿ ಕನ್ನಡವನ್ನು ನೋಡುವ ಬದಲು ಅನ್ನದ ಭಾಷೆಯಾಗಿ ರೂಪಾಂತರಗೊಳಿಸುವ ಮನ್ವಂತರದಲ್ಲಿ ಅಭಿಪ್ರಾಯ ನಿರೂಪಕರು, ನಿರ್ಧಾರ ಕೈಗೊಳ್ಳುವ ಆಡಳಿತಗಾರರು ಹಾಗೂ ಸಾರ್ವಜನಿಕ ಸಂವಾದಕ್ಕೆ ಅಗತ್ಯವಾದ ವೇದಿಕೆಯನ್ನು ಕಲ್ಪಿಸುವ ಮೂಲಕ ಭಾರತ ದೇಶದ ಮುಕುಟದಲ್ಲಿ ಕನ್ನಡದ ರತ್ನ ಮಿನುಗುವಂತೆ ಮಾಡುವ ಮಹಾಕಾಯಕದಲ್ಲಿ ಸಂಯುಕ್ತ ಕರ್ನಾಟಕದ ಪಾತ್ರ ಅಳಿಸಲಾರದ ಒಂದು ಹೆಜ್ಜೆ ಗುರುತು. ಸ್ವಾತಂತ್ರö್ಯ ಹೋರಾಟಗಾರರು ಹಾಗೂ ನಾಡಿನ ಹಿತ ಚಿಂತಕರು ರಂಗನಾಥ ದಿವಾಕರ್ ಸಾರಥ್ಯದಲ್ಲಿ ಲೋಕ ಶಿಕ್ಷಣ ಧರ್ಮದರ್ಶಿ ಮಂಡಳಿಯನ್ನು ಸ್ಥಾಪಿಸುವ ಮೂಲಕ ಸಂಯುಕ್ತ ಕರ್ನಾಟಕ ದೈನಿಕ., ಕರ್ಮವೀರ ಸಾಪ್ತಾಹಿಕ ಹಾಗೂ ಕಸ್ತೂರಿ ಮಾಸಿಕಗಳು ಕನ್ನಡ ಜನಮಾನಸದಲ್ಲಿ ಹೊಸ ಸ್ವಾತಂತ್ರö್ಯದ ಗಾಳಿ ಬೀಸುವಂತೆ ಮಾಡಿ ಚಲಿಸುವ ಮೋಡಗಳ ರೀತಿಯಲ್ಲಿ ಚಲನಶೀಲ ಸಮಾಜದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಮನಸ್ಸಾಕ್ಷಿಯನ್ನು ರೂಪಿಸಿಕೊಳ್ಳಲು ಮಾರ್ಗಸೂಚಿಯಾದದ್ದು ಕನ್ನಡ ನಾಡಿನ ಇತಿಹಾಸದ ಪ್ರಮುಖ ಘಟ್ಟ. ಕೆದರಿದ ಕೂದಲಿನಂತಿದ್ದ ಕನ್ನಡಿಗರನ್ನು ಸರ್ವಸಮ್ಮತ ಹಾಗೂ ಸಹಮತದ ದಾರಿಗೆ ತಂದು ಕರ್ನಾಟಕದ ಹೆಸರಿನಲ್ಲಿ ಒಗ್ಗೂಡುವಂತೆ ಮಾಡುವ ಮಂತ್ರಶಕ್ತಿ ಪ್ರಯೋಗದ ಫಲವೇ ಈಗಿನ ಆಧುನಿಕ ಕರ್ನಾಟಕ.
ಶತಮಾನದ ಕಡೆ ದಾಪುಗಾಲು ಹಾಕುತ್ತಿರುವ ಸಂಯುಕ್ತ ಕರ್ನಾಟಕ ಪತ್ರಿಕೆಯದು ಸಂಕಟ – ಸಂತಸ ಹಾಗೂ ಸವಾಲುಗಳ ನಿರಂತರ ಸುದೀರ್ಘ ಯಾತ್ರೆ. ಎರಡು ಶತಮಾನಗಳಿಗೆ ಸಾಕ್ಷಿಕಲ್ಲಿನಂತಿರುವ ಈ ಪತ್ರಿಕೆ ನಾಡಿನ ಸರ್ವಾಂಗೀಣ ಅಭ್ಯುದಯಕ್ಕೆ ಸೀಮಿತ. ಈ ಅಭ್ಯುದಯದಲ್ಲಿ ಪರಂಪರಾಗತ ಮೌಲ್ಯ, ವರ್ತಮಾನದ ವೈಚಾರಿಕತೆ ಹಾಗೂ ಭವಿಷ್ಯ ರೂಪಿಸುವ ವಿಚಾರಗಳ ವಿನ್ಯಾಸ ಹಾಗೂ ವಿಸ್ತಾರಗಳನ್ನು ಒಳಗೊಂಡಿರುವುದು ಸರ್ವೋದಯ ಮಾರ್ಗದ ದಿಕ್ಸೂಚಿ. ಪ್ರತ್ಯೇಕಿಸಿ ನೋಡುವುದು ನಮ್ಮ ಧರ್ಮವಲ್ಲ. ಎಲ್ಲರನ್ನೂ ಒಳಗೊಂಡು ಜೊತೆಯಲ್ಲಿ ಸಾಗುವುದು ನಾವು ನಂಬಿರುವ ಸಿದ್ಧಾಂತದ ಒಳತಿರುಳು. ಬದಲಾವಣೆ ಜಗದ ನಿಯಮ. ದಿನದಿಂದ ದಿನಕ್ಕೆ ಆವಿಷ್ಕಾರಗೊಳ್ಳುತ್ತಿರುವ ತಂತ್ರಜ್ಞಾನದ ಬೆಳಕಿನಲ್ಲಿ ಕನ್ನಡ ನಾಡಿನ ಕಲ್ಯಾಣಕ್ಕೆ ಹಸಿರು ತೋರಣ ಕಟ್ಟಿ ಮುಂದೆ ಸಾಗುತ್ತಿರುವ ಈ ಯಾತ್ರೆಯಲ್ಲಿ ಸಮಸ್ತ ಕನ್ನಡಿಗರ ಹಾರೈಕೆ – ಆರೈಕೆ ಅತ್ಯಗತ್ಯ. ಇದುವರೆಗಿನ ಯಾತ್ರೆಯಲ್ಲಿ ಕೈಹಿಡಿದು ನಡೆಸಿರುವ ಕನ್ನಡಿಗರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುವ ಸಂದರ್ಭದಲ್ಲಿಯೇ ವರ್ತಮಾನದಲ್ಲಿ ಎದುರಾಗುತ್ತಿರುವ ಹೊಸ ಹೊಸ ಸವಾಲುಗಳನ್ನು ಕನ್ನಡಿಗರ ಶ್ರೀರಕ್ಷೆಯೊಂದಿಗೆ ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುವ ಅಪೇಕ್ಷೆ ನಮ್ಮದು. ಈ ಕಾಯಕದಲ್ಲಿ ತಾವೆಲ್ಲಾ ನಮ್ಮ ಜೊತೆ ಇರುವುದರಿಂದಲೇ ನಮ್ಮ ಆತ್ಮವಿಶ್ವಾಸ ಹೆಚ್ಚಾಗಿ ಪತ್ರಿಕೆಗಳ ವಿಶ್ವಾಸಾರ್ಹತೆಯನ್ನು ವೃದ್ಧಿಸಿಕೊಳ್ಳಲು ಅವಕಾಶವಾಗುತ್ತಿದೆ ಎಂಬುದು ವಿನಯಪೂರ್ವಕ ಬಿನ್ನಹ.
ನಾಡ ಜನರಿಗೆ ತಂತ್ರಜ್ಞಾನ ಆಧರಿತ ಮಾಹಿತಿ ಹಾಗೂ ಜ್ಞಾನವನ್ನು ಪೂರೈಸುವ ನಿಟ್ಟಿನಲ್ಲಿ ಸಂಯುಕ್ತ ಕರ್ನಾಟಕ ಯೂ ಟ್ಯೂಬ್ ಚಾನಲ್ ಆರಂಭಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಕೇವಲ ಮುದ್ರಣ ಮಾಧ್ಯಮಕ್ಕೆ ಸೀಮಿತವಾಗಿದ್ದ ಲೋಕ ಶಿಕ್ಷಣ ಧರ್ಮದರ್ಶಿ ಮಂಡಳಿ ಬದಲಾದ ಕಾಲಮಾನಕ್ಕೆ ಅನುಗುಣವಾಗಿ ಇಂತಹ ನವೀನ ಮಾಧ್ಯಮವನ್ನು ಆರಂಭಿಸಲು ನಿರ್ಧಾರ ಮಾಡಿದೆ.
ಮಾಧ್ಯಮ ಕ್ಷೇತ್ರವೆಂಬುದು ವರ್ತಮಾನದ ನಿಲುವುಗನ್ನಡಿ; ಇಂತಹ ನಿಲುವುಗನ್ನಡಿಯಲ್ಲಿ ವಕ್ರಬಿಂಬಗಳು ಕಾಣುತ್ತಿರುವುದನ್ನು ಒಪ್ಪಿಕೊಂಡರೂ ಕೂಡಾ ಸಾರಾಸಗಟಾಗಿ ಮಾಧ್ಯಮ ಕ್ಷೇತ್ರದ ಸತ್ಯ ಸಂಗತಿಯನ್ನು ನಿರಾಕರಿಸುವುದು ಸಾಧುವಲ್ಲ. ಸತ್ಯ ಎಂಬುದು ಒಪ್ಪುವ ಮಾತು. ಪರಮ ಸತ್ಯ ಎನ್ನುವುದು ವ್ಯಕ್ತಿಗತ ಕೈಗನ್ನಡಿಯ ಮಾತು. ನೊಬೆಲ್ ಪ್ರಶಸ್ತಿ ಪುರಸ್ಕೃತ ನಾಟಕಕಾರ ಹೆರಾಲ್ಡ್ ಪಿಂಟರ್ ಪ್ರತಿಪಾದಿಸುವಂತೆ `ಪರಮಸತ್ಯ ಎಂಬುದು ಜಗತ್ತಿನಲ್ಲಿ ಎಲ್ಲಿಯೂ ಇಲ್ಲ.
ರೂಪಾಂತರವಾಗುತ್ತಿರುವ ಸಾಮಾಜಿಕ ಪರಿಸ್ಥಿತಿಯ ಸಂದರ್ಭದಲ್ಲಿ ಸಂಯುಕ್ತ ಕರ್ನಾಟಕ ಬಳಗದ ಸಂಕಲ್ಪವೆಂದರೆ, ಮಾಹಿತಿ ಪೂರೈಕೆಗೆ ಮಾತ್ರ ಸೀಮಿತವಾಗದೆ ವಿವಿಧ ಆಯಾಮಗಳ ಜ್ಞಾನದ ಪ್ರಸಾರಕ್ಕೂ ಅವಕಾಶವಾಗುವ ರೀತಿಯಲ್ಲಿ ನಮ್ಮ ಪ್ರಕಟಣೆಗಳನ್ನು ಸಜ್ಜುಗೊಳಿಸುವ ಕಾಯಕ. ಈ ನಿಟ್ಟಿನಲ್ಲಿ ಸಂಯುಕ್ತ ಕರ್ನಾಟಕ ಬಳಗ ಯೂ ಟ್ಯೂಬ್ ಚಾನಲ್ ಮೂಲಕ ಹೊಸ ದಾರಿಯಲ್ಲಿ ಹೆಜ್ಜೆ ಹಾಕುತ್ತಾ ಅಕ್ಷರಗಳ ಜೊತೆಗೆ ಮಾತಿನ ವಿನ್ಯಾಸದಲ್ಲಿ ಮಾನಸಿಕ ಸ್ಥೈರ್ಯ ರೂಪಿಸಿಕೊಳ್ಳಲು ಕನ್ನಡಿಗರಿಗೆ ಅವಕಾಶವಾಗುವ ರೀತಿಯ ಕಾರ್ಯಕ್ರಮಗಳ ಸಿದ್ಧತೆಯ ರೂಪು ರೇಷೆಯಲ್ಲಿ ತೊಡಗಿದೆ. ಕಾಲಕ್ಕೆ ತಕ್ಕಂತೆ ಹೆಜ್ಜೆ ಹಾಕುವುದು ನಿಸರ್ಗದ ನಿಯಮ. ಕನ್ನಡ ಹಾಗೂ ಕನ್ನಡಿಗರು ಕನ್ನಡದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯಲು ಕೊರೊನಾ ಪಿಡುಗನ್ನು ಓಡಿಸಲು ಇಡೀ ವಿಶ್ವ ಒಂದಾದ ರೀತಿಯಲ್ಲಿ ಇಡೀ ಕನ್ನಡದ ಬಳಗ ಒಂದಾಗಿ ಲಸಿಕೆಯ ರೀತಿಯಲ್ಲಿ ಕನ್ನಡಕ್ಕಾಗಿ ಅರ್ಪಿಸಿಕೊಳ್ಳುವ ಮನೋಧರ್ಮ ರೂಪಿಸಿಕೊಳ್ಳುವಂತಹ ಹದವಾದ ವಾತಾವರಣ ಸೃಷ್ಟಿ ಮಾಡುವುದು ಈಗ ನಮ್ಮೆಲ್ಲರ ಮುಂದಿರುವ ಕಾಯಕ. ಸಂಯುಕ್ತ ಕರ್ನಾಟಕ ಈ ಮಹಾಕಾಯಕದ ರಥಯಾತ್ರೆಯ ಸಾರಥಿ. ಇಂತಹ ರಥಯಾತ್ರೆಯಲ್ಲಿ ಕನ್ನಡಕ್ಕಾಗಿ ಸೇವೆ ನಮ್ಮದು – ಸ್ವೀಕಾರ ನಿಮ್ಮದು.