ಇಂದು ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸದು

Advertisement

ನವದೆಹಲಿ: ಅಮಾವಾಸ್ಯೆ ದಿನವಾದ ಏಪ್ರಿಲ್ ೮ರಂದು ಆಗಸದಲ್ಲಿ ಖಗ್ರಾಸ ಸೂರ್ಯಗ್ರಹಣ ಸಂಭವಿಸಲಿದೆ. ಈ ಅಭೂತಪೂರ್ವ ವಿದ್ಯಮಾನ ದಾಖಲಿಸಲು ಖಗೋಳ ವೀಕ್ಷಕರು ಕಾತರರಾಗಿದ್ದಾರೆ. ೫೪ ವರ್ಷಗಳ ನಂತರ ಈ ಅಪೂರ್ವ ಖಗ್ರಾಸ ಸೂರ್ಯಗ್ರಹಣ ನಡೆಯಲಿದ್ದು ಜಗತ್ತಿನ ಕೆಲವೇ ಸ್ಥಳಗಳಲ್ಲಿ ಮಾತ್ರ ಗೋಚರಿಸಲಿದೆ.
ಉತ್ತರ ಅಮೆರಿಕದಲ್ಲಿ ಮಾತ್ರ ಈ ಖಗ್ರಾಸ ಸೂರ್ಯ ಗ್ರಹಣ ಗೋಚರಿಸಲಿದೆ. ಮೆಕ್ಸಿಕೋ, ಅಮೆರಿಕ ಹಾಗೂ ಕೆನಡಾ ನಡುವಣ ೧೮೫ ಕಿ.ಮೀ ವಿಸ್ತೀರ್ಣದಲ್ಲಿ ಗ್ರಹಣ ಸಂಭವಿಸಲಿರುವುದರಿಂದ ಆ ಭಾಗದ ಜನರು ಗ್ರಹಣ ವೀಕ್ಷಿಸಲು ಸಾಧ್ಯ. ಅಮೆರಿಕದಲ್ಲಿನ ೧೮ ಗಣರಾಜ್ಯಗಳ ಜನರಿಗೆ ಈ ಅಪೂರ್ವ ಅವಕಾಶ ದೊರೆಯಲಿದೆ. ಆದರೆ ಭಾರತದಲ್ಲಿ ನಾಳಿನ ಸೂರ್ಯಗ್ರಹಣ ಗೋಚರಿಸದು. ಭಾರತೀಯ ಕಾಲಮಾನ ಪ್ರಕಾರ ಏ.೮ರ ರಾತ್ರಿ ೯.೧೨ರಿಂದ ಗ್ರಹಣ ಆರಂಭವಾಗಲಿದ್ದು ರಾತ್ರಿ ೧೦.೦೮ರ ವೇಳೆ ಸೂರ್ಯನ ಮೇಲೆ ಸಂಪೂರ್ಣ ಕತ್ತಲು ಆವರಿಸಲಿರುವುದರಿಂದ ಅದು ಗ್ರಹಣದ ಅತ್ಯಂತ ಉತ್ಕರ್ಷದ ಹಂತ. ಆದರೆ ಏಪ್ರಿಲ್ ೯ರ ಮುಂಜಾವ ೨.೨೨ರ ವೇಳೆ ಗ್ರಹಣ ಅಂತ್ಯಗೊಳ್ಳಲಿದೆ.
ಸೂರ್ಯ ಮತ್ತು ಭೂಮಿ ಮಧ್ಯೆ ಚಂದ್ರ ಹಾದುಹೋಗುವ ಖಭೌತ ವಿದ್ಯಮಾನವನ್ನು ಸೂರ್ಯಗ್ರಹಣ ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಸೂರ್ಯನ ಬೆಳಕಿಗೆ ಭಾಗಶ: ಅಥವಾ ಸಂಪೂರ್ಣವಾಗಿ ತೊಡಕಾಗುತ್ತದೆ.
ಚಂದ್ರ ಸಂಪೂರ್ಣವಾಗಿ ಸೂರ್ಯನನ್ನು ಆವರಿಸಿದಾಗ ಅದರ ಕರಿನೆರಳು ಭೂಮಿ ಮೇಲೆ ಬೀಳುತ್ತದೆ. ಈ ವಿದ್ಯಮಾನ ಘಟಿಸುವ ಭಾಗದಲ್ಲಿರುವ ಜನರು, ಹವಾಮಾನ ಹಾಗೂ ಮೋಡ ಸಹಕರಿಸಿದರೆ ಮಾತ್ರ ಗ್ರಹಣ ನೋಡಲು ಸಾಧ್ಯ.