ಇಂದು ಭಾರತ-ಪಾಕ್ ಸೆಣಸಾಟ

Advertisement

ದುಬೈ: ಪ್ರಸಕ್ತ ಸಾಲಿನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮತ್ತೆ ಪರಸ್ಪರ ಸೆಣಸಾಟ ನಡೆಸಲಿವೆ.
ಭಾನುವಾರ ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯ ಸೂಪರ್ ಫೋರ್ ಹಂತದ ಎರಡನೇ ಲೀಗ್ ಪಂದ್ಯದಲ್ಲಿ ಭಾರತ-ಪಾಕ್ ಹೋರಾಟ ನಡೆಸಲಿವೆ.
`ಎ’ ಗುಂಪಿನ ಲೀಗ್ ಹಂತದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಆಡಿದ ಎರಡೂ ಪಂದ್ಯಗಳಲ್ಲಿ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದು ಸೂಪರ್ ಫೋರ್ ಹಂತ ಕಂಡಿತು.
ಇದೇ ಗುಂಪಿನಲ್ಲಿದ್ದ ಪಾಕಿಸ್ತಾನ ಆಡಿದ ಎರಡು ಲೀಗ್ ಪಂದ್ಯಗಳಲ್ಲಿ ಒಂದು ಜಯ ಹಾಗೂ ಒಂದು ಸೋಲಿನೊಂದಿಗೆ ಗುಂಪಿನಲ್ಲಿ ಎರಡನೇ ಸ್ಥಾನದೊಂದಿಗೆ ಸೂಪರ್ ಫೋರ್‌ನಲ್ಲಿ ಆಡುವ ಅರ್ಹತೆ ಪಡೆಯಿತು.
ಪಾಕಿಸ್ತಾನ ವಿರುದ್ಧ ಆಡಿದ ಪಂದ್ಯದಲ್ಲಿ ಜಯದೊಂದಿಗೆ ಶುಭಾರಂಭಗೈದಿದ್ದ ಭಾರತ, ನಂತರ ಹಾಂಕಾಂಗ್ ವಿರುದ್ಧ ಆಡಿದ ಎರಡನೇ ಪಂದ್ಯದಲ್ಲಿ ಕೂಡ ಗೆದ್ದು ಮುನ್ನಡೆಯಿತು.
ಇನ್ನೊಂದೆಡೆ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ, ಸೋಲಿನೊಂದಿಗೆ ಟೂರ್ನಿ ಆರಂಭಿಸಿದರೂ, ಶುಕ್ರವಾರ ಹಾಂಕಾಂಗ್ ವಿರುದ್ಧ ಆಡಿದ ಪಂದ್ಯದಲ್ಲಿ ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲಿ ಕೂಡ ಶ್ರೇಷ್ಠ ಪ್ರದರ್ಶನ ನೀಡಿ ೧೫೫ ರನ್‌ಗಳ ಭಾರೀ ಅಂತರದ ಜಯ ಪಡೆಯುವುದರೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಆದರೆ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ನಿರೀಕ್ಷಿತ ಯಶ ಕಾಣದೇ ಹೋದರು.
ಪಾಕಿಸ್ತಾನ ತಂಡವನ್ನು ೧೪೭ ರನ್‌ಗೆ ನಿಯಂತ್ರಿಸಿದ್ದ ಭಾರತೀಯ ಬೌಲರ್‌ಗಳು, ದುರ್ಬಲ ತಂಡ ಎನಿಸಿದ ಹಾಂಕಾಂಗ್ ತಂಡವನ್ನು ಅಲೌಟ್ ಮಾಡಲು ವಿಫಲರಾದರು.
ಗಾಯದ ಸಮಸ್ಯೆಯಿಂದಾಗಿ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಏಷ್ಯಾ ಕಪ್‌ನಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನದಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂದು ಈಗ ತಂಡದ ಆಡಳಿತ ಚಿಂತನೆ ನಡೆಸಿದೆ.
ಪಾಕಿಸ್ತಾನ ವಿರುದ್ಧ ಆಡಿದ ಪಂದ್ಯದಲ್ಲಿ ಭಾರತ ಜಯ ದಾಖಲಿಸಿರಬಹುದು. ಪಾಕ್ ತಂಡವನ್ನು ೧೪೭ ರನ್‌ಗಳಿಗೆ ಭಾರತೀಯ ಬೌಲರ್‌ಗಳು ನಿಯಂತ್ರಿಸಿದ್ದರೂ ಕೂಡ ಭಾರತ ಜಯ ಗಳಿಸಲು ಕೊನೆಯ ಓವರ್ ವರೆಗೂ ಕಾಯಬೇಕಾಯಿತು.
ಇದೇ ವೇಳೆಗೆ ಪಾಕಿಸ್ತಾನ ತಂಡ, ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಭಾರೀ ಅಂತರದ ಜಯ ದಾಖಲಿಸಿದ್ದರಿಂದ ಬಾಬರ್ ಅಜಮ್ ಬಳಗದ ಆತ್ಮವಿಶ್ವಾಸ ಹೆಚ್ಚಿದೆ.
ಉಭಯ ತಂಡಗಳು ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಸಾಕಷ್ಟು ಬಲಿಷ್ಠವಾಗಿದ್ದು, ನಾಳಿನ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿ ರೋಚಕ ಅಂತ್ಯ ಕಾಣುವ ಸಾಧ್ಯತೆಗಳೇ ಅಧಿಕ.

India-pak