ಬೆಂಗಳೂರು: ಏ.೨೬ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ರಾಜ್ಯದ ೧೪ ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಬುಧವಾರ(ಏ.೨೪) ಸಂಜೆ ತೆರೆ ಬೀಳಲಿದೆ. ಇದಕ್ಕೂ ಮುನ್ನ ಕೊನೆಕ್ಷಣದ ಪ್ರಯತ್ನವಾಗಿ ಎಲ್ಲ ಪಕ್ಷಗಳ ಪ್ರಮುಖರು ಮಂಗಳವಾರ ತಡರಾತ್ರಿವರೆಗೂ ಅಬ್ಬರದ ಪ್ರಚಾರ ನಡೆಸಿದರು. ಬೆಂಗಳೂರಿನಲ್ಲಿ ಕೇಂದ್ರ ಸಚಿವ ಅಮಿತ್‌ಶಾ ಬಿಜೆಪಿ ಪರ ರೋಡ್‌ಶೋ ನಡೆಸಿದರೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾಗಾಂಧಿ ಕೂಡಾ ಚಿತ್ರದುರ್ಗ ಮತ್ತು ಬೆಂಗಳೂರು ದಕ್ಷಿಣದಲ್ಲಿ ಸಮಾವೇಶ ನಡೆಸಿ ಕೈ ಅಭ್ಯರ್ಥಿಗಳ ಪರ ಮತಯಾಚಿಸಿದರು.
ಘಟಾನುಘಟಿಗಳಿಂದ ಪ್ರಚಾರ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಪರವಾಗಿ ರಾಮನಗರ, ಕುಣಿಗಲ್, ಬಿಡದಿ, ಹುಲಿಯೂರುದುರ್ಗಗಳಲ್ಲಿ ಮತಯಾಚಿಸಿದರು. ಡಾಕ್ಟ್ರನ್ನ ಸೋಲಿಸಬೇಡಿ ಎಂದು ಕಣ್ಣೀರಿಟ್ಟ ಘಟನೆಯೂ ನಡೆದಿದೆ.
ಸಿಎಂ ಸಿದ್ದರಾಮಯ್ಯ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಪ್ರಚಾರ ನಡೆಸಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್, ಸೋದರ ಡಿ.ಕೆ.ಸುರೇಶ್ ಅಭ್ಯರ್ಥಿಯಾಗಿರುವ ಗ್ರಾಮಾಂತರ ಕ್ಷೇತ್ರದ ರಾಮನಗರ, ಹಾರೋಹಳ್ಳಿಗಳಲ್ಲಿ ಬೃಹತ್ ರೋಡ್‌ಶೋ ನಡೆಸಿ ಮತಯಾಚಿಸಿದರು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಕ್ಷೇತ್ರದ ಚುಂಚನಕಟ್ಟೆ, ಮಳವಳ್ಳಿ, ಮದ್ದೂರಿನಲ್ಲಿ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ಮತಯಾಚಿಸಿದರು. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ,ವಿಜಯೇಂದ್ರ ಹುಬ್ಬಳ್ಳಿಯಲ್ಲಿ ಹತ್ಯೆಗೀಡಾ ನೇಹಾ ಕುಟುಂಬ ಸದಸ್ಯರ ಭೇಟಿಯಾಗಿ ಸಾಂತ್ವನ ಹೇಳಿದರಲ್ಲದೆ, ಬಳಿಕ ಹಾವೇರಿ ಹಾಗೂ ಶಿವಮೊಗ್ಗದಲ್ಲಿ ಪ್ರಚಾರ ನಡೆಸಿದರು. ಒಟ್ಟಾರೆ ಬಹಿರಂಗ ಪ್ರಚಾರ ಅಂತ್ಯಗೊಳ್ಳುವ ಕೊನೆದಿನ ಎಲ್ಲ ಪಕ್ಷಗಳ ನಾಯಕರು ಜಿದ್ದಿಗೆ ಬಿದ್ದವರಂತೆ ಮತಪ್ರಚಾರ ನಡೆಸಿದ್ದು ವಿಶೇಷವಾಗಿತ್ತು.
ಮತಸೆಳೆಯಲು ನಾನಾತಂತ್ರ: ರಾಜಕೀಯ ಪಕ್ಷಗಳ ನಾಯಕರು, ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ಬೇಸಿಗೆ ಬಿರುಬಿಸಿಲನ್ನು ಲೆಕ್ಕಿಸದೆ ಕಳೆದ ೨೦ ದಿನಗಳಿಂದ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಅಷ್ಟೇ ಅಲ್ಲ ಪ್ರಮುಖ ರಾಜಕೀಯ ಪಕ್ಷಗಳ ನಾಯಕರ ನಡುವೆ ವಾಗ್ವಾದ, ಆರೋಪ, ಪ್ರತ್ಯಾರೋಪ ತಾರಕಕ್ಕೇರಿದ್ದು ಪ್ರಚಾರದ ಅಬ್ಬರ ಮುಗಿಲು ಮುಟ್ಟಿದೆ.
ರಾಷ್ಟ್ರ ನಾಯಕರ ಮತಯಾಚನೆ: ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ತಲಾ ೨ ಬಾರಿ ರಾಜ್ಯಕ್ಕೆ ಭೇಟಿಯಾಗಿ ಬಹಿರಂಗ ಸಮಾವೇಶ ಮತ್ತು ರೋಶ್‌ಶೋ ಮುಖೇನ ಮತಯಾಚಿಸಿದ್ದಾರೆ. ರಾಹುಲ್‌ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಕೂಡಾ ಮೊದಲ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ ಮತಯಾಚಿಸಿದ್ದಾರೆ.