ಹುಬ್ಬಳ್ಳಿ: ತ್ವರಿತವಾಗಿ ಗ್ರಾಹಕರನ್ನು ತಲುಪುವ ಉತ್ಪನ್ನಗಳ ಕ್ಲಸ್ಟರ್ (ಎಫ್‌ಎಂಸಿಜಿ) ಸ್ಥಾಪನೆಗೆ ಮುಹೂರ್ತ ಕೂಡಿ ಬಂದಿದ್ದು, ರಾಜ್ಯದಲ್ಲಿ ಎಫ್‌ಎಂಸಿಜಿ ವಲಯ ಅರಳಲು ಶುಕ್ರವಾರ (ಅ. ೨೯) ಮುನ್ನುಡಿ ಬರೆಯಲಾಗುತ್ತಿದೆ.
ಹುಬ್ಬಳ್ಳಿ-ಧಾರವಾಡ ನಡುವಿನ ಮಮ್ಮಿಗಟ್ಟಿಯ ಸುಮಾರು ೫೦೦ ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಲಿರುವ ಎಫ್‌ಎಂಸಿಜಿ ಕ್ಲಸ್ಟರ್ ಕರ್ನಾಟಕದ ಮೊದಲ ಇಂತಹ ಉದ್ಯಮ ವಲಯವಾಗಿದೆ.
ಶುಕ್ರವಾರ ಸಂಜೆ ೪ಕ್ಕೆ ಡೆನಿಸನ್ಸ್ ಹೋಟೆಲ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಫ್‌ಎಂಸಿಜಿಯಲ್ಲಿ ಹೂಡಿಕೆಗೆ ಮುಂದಾಗಿರುವ ಸುಮಾರು ಹದಿನೈದು ಕಂಪನಿಗಳ ಜೊತೆ ಒಡಂಬಡಿಕೆಗೆ ಸಹಿ ಹಾಕಲಿದ್ದಾರೆ.ಹೂಡಿಕೆ ಸ್ನೇಹಿ-ಕೆಂಪು ಪಟ್ಟಿಯ ಕಿರಿಕಿರಿಯಿಂದ ದೂರವಾದ ಸಹಕಾರ' ಒಡಂಬಡಿಕೆಯ ಮೂಲ ಆಶಯವಾಗಿದೆ. ಅಫಿಡೆವಿಟ್ (ಪ್ರಮಾಣ ಪತ್ರ) ಆಧರಿತ ಉದ್ಯಮ ಪರವಾನಗಿ ವ್ಯವಸ್ಥೆ ಈಗ ಕರ್ನಾಟಕದಲ್ಲಿ ಜಾರಿಗೆ ಬಂದಿದೆ. ಈ ಕಾರಣದಿಂದಲೇ
ಹುಬ್ಬಳ್ಳಿ-ಧಾರವಾಡ ಎಫ್‌ಎಂಸಿಜಿ ಕ್ಲಸ್ಟರ್ ಔದ್ಯಮಿಕ ವಲಯ’ದಲ್ಲಿ ಹೂಡಿಕೆ ಮಾಡಿಕೊಳ್ಳಲು ಕಂಪನಿಗಳು ಮುಂದೆ ಬಂದಿರುವುದು ಈಗ ಸ್ಪಷ್ಟ. ಇಲ್ಲಿ ತಮ್ಮ ಘಟಕಗಳನ್ನು ಆರಂಭಿಸುವುದಕ್ಕೆ ಮೊದಲು ಸ್ವಯಂ ಪ್ರಮಾಣ ಪತ್ರವನ್ನು ಕಂಪನಿಗಳು ಕೊಟ್ಟರೆ ಸಾಕು. ಉಳಿದ ನೋಂದಣಿ ಮತ್ತಿತರ ಪ್ರಕ್ರಿಯೆಗಳನ್ನು ಘಟಕ ಆರಂಭಿಸಿದ ನಂತರ ಪೂರ್ಣಗೊಳಿಸಿಕೊಳ್ಳುವ ವಿನೂತನ ಕೈಗಾರಿಕಾ ನೀತಿಯನ್ನು ಈಗ ಕರ್ನಾಟಕ ಹೊಂದಿದೆ.
ಇದುವರೆಗೆ ಉದ್ಯಮಗಳಿಗೆ ಇದೇ ದೊಡ್ಡ ಆಡಳಿತಾತ್ಮಕ ಕ್ಲಿಷ್ಟತೆಯಾಗಿತ್ತು. ಈಗ ಇದು ದೂರವಾಗಿರುವುದರಿಂದ ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರು ಆಚೆ ಹೂಡಿಕೆ ಎಂಬ ಆಶಯಕ್ಕೆ ವೇಗ ದೊರೆಯಲಿದೆ ಎಂಬುದು ಸರ್ಕಾರದ ಅನಿಸಿಕೆ. ಒಡಂಬಡಿಕೆಗೆ ಸಹಿ ಬೀಳುವುದರೊಂದಿಗೆ ಈ ಕ್ಲಸ್ಟರ್‌ನ ಅನ್ವಯ ವಿವಿಧ ಉತ್ಪಾದಕ ಘಟಕಗಳ ನಿರ್ಮಾಣ ಕಾರ್ಯ ಚುರುಕುಗೊಳ್ಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಕ್ಷೇತ್ರದಲ್ಲಿನ ವಹಿವಾಟು ವಾರ್ಷಿಕ ಸುಮಾರು ಹನ್ನೆರಡು ಲಕ್ಷ ಕೋಟಿ ರೂಪಾಯಿಗಳೆಂದು ಅಂದಾಜು ಮಾಡಲಾಗಿದ್ದು, ಒಡಂಬಡಿಕೆಯ ಅನ್ವಯ ಎಲ್ಲವೂ ಸುಸೂತ್ರವಾಗಿ ನಡೆದಲ್ಲಿ ಕರ್ನಾಟಕದ ಬೊಕ್ಕಸ ನಳನಳಿಸಲಿದೆ. ಜೊತೆಗೆ, ಹುಬ್ಬಳ್ಳಿ-ಧಾರವಾಡ ಹಾಗೂ ಕಿತ್ತೂರು ಪ್ರಾಂತ್ಯದ ಆರ್ಥಿಕ ಭಾಗ್ಯದ ಬಾಗಿಲು ತೆರೆಯಲಿದೆ.
ಒಡಂಬಡಿಕೆ ಸಹಿ ಕಾರ್ಯಕ್ರಮದಲ್ಲಿ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಪ್ರಸಾದ ಅಬ್ಬಯ್ಯ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಗಳ ಒಕ್ಕೂಟ ಹಾಗೂ ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಪದಾಧಿಕಾರಿಗಳು ಹಾಗೂ ಇತರ ಗಣ್ಯರು ಒಡಂಬಡಿಕೆಗೆ ಸಾಕ್ಷಿಯಾಗುವರು. ಈ ಔಪಚಾರಿಕತೆಯ ನಂತರ ಎಫ್‌ಎಂಸಿಜಿಯಲ್ಲಿ ಹೂಡಿಕೆ ಮಾಡಲಿರುವ ಉದ್ಯಮಿಗಳ ಸಮಾವೇಶವನ್ನು ಏರ್ಪಡಿಸಲಾಗಿದೆ.
ಮುಖ್ಯಮಂತ್ರಿಯಿಂದ ಉದ್ಘಾಟನೆ
ಸಂಜೆ ೪ ಗಂಟೆಗೆ ಹುಬ್ಬಳ್ಳಿಯ ಡೆನಿಸನ್ಸ್ ಹೊಟೇಲ್‌ನಲ್ಲಿ ಎಫ್‌ಎಂಸಿಜಿ ಕ್ಲಸ್ಟರ್ ಹುಬ್ಬಳ್ಳಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸುವರು. ರಾತ್ರಿ ೭.೩೦ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ. ಈ ಪ್ರಮುಖ ಕಾರ್ಯಕ್ರಮದಲ್ಲಿ ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್, ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ನಿಕಟಪೂರ್ವ ಸಭಾಪತಿ ಬಸವರಾಜ ಹೊರಟ್ಟಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗುವರು ಎಂದು ಪ್ರಕಟಣೆ ಹೇಳಿದೆ.