`ಆಶ್ರಯ’ ನಿರಾಕರಣೆ: ಮಗನಿಂದ ತಂದೆ ಕೊಲೆ

ಕೊಲೆ
Advertisement

ಬಾಗಲಕೋಟೆ(ರಬಕವಿ-ಬನಹಟ್ಟಿ): ಆಶ್ರಯ ಮನೆ ಕಟ್ಟಲು ಒಂದು ಗುಂಟೆ ಜಮೀನು ನೀಡುವಂತೆ ತಂದೆಯ ಹತ್ತಿರ ಕೇಳಿದಾಗ ಆತನ ತಂದೆ ಕೊಡುವದಿಲ್ಲವೆಂದು ಹೇಳಿದ್ದಕ್ಕೆ ತಂದೆಯನ್ನೇ ಕೊಂದ ಅಮಾನವೀಯ ಘಟನೆ ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಮೀಪದ ಜಗದಾಳ ತೋಟದ ವಸತಿಯಲ್ಲಿ ಕಳೆದ ಗುರುವಾರ ರಾತ್ರಿ ಮಾಳಪ್ಪ ಸಿದ್ದಪ್ಪ ಹಳ್ಳೂರ(೬೫) ಎಂಬಾತ ತನ್ನ ಮಗನಾದ ತುಕ್ಕಪ್ಪ(೨೪)ನೊಂದಿಗೆ ಮನೆ ಕಟ್ಟಲು ಜಗಳವಾಗಿದೆ. ಇದೇ ಜಗಳ ನಂತರ ಇಡೀ ರಾತ್ರಿ ನಡೆದು ಶುಕ್ರವಾರ ಬೆಳಗಿನ ಜಾವ ೨ ಗಂಟೆ ಸುಮಾರಿಗೆ ಬನಹಟ್ಟಿ ಕೆರೆ ಹತ್ತಿರವಿರುವ ಗಾಂವಠಾಣ ಜಾಗೆಯಲ್ಲಿದ್ದ ಶೆಡ್ಡಿನಲ್ಲಿ ಮಲಗಿಕೊಂಡಿದ್ದ ಮಾಳಪ್ಪನನ್ನು ಆತನ ಮಗ ತುಕ್ಕಪ್ಪನು ಕಟ್ಟಿಗೆಯ ಚೌಕಟ್ಟಿನ ತುಂಡಿನಿಂದ ತಲೆಯ ಎಡಭಾಗದ ಕಿವಿಯ ಮೇಲ್ಭಾಗ(ಮಲಕಿಗೆ) ಐದಾರು ಬಾರಿ ಹೊಡೆದು ಮಾರಣಾಂತಿಕ ಗಾಯಪಡಿಸಿ ಕೊಲೆ ಮಾಡಿದ್ದಾನೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಕೊಲೆ ಮಾಡಿದ ಆರೋಪಿ ನಂತರ ತಾನಾಗಿಯೇ ಬನಹಟ್ಟಿ ಪೊಲೀಸ್ ಠಾಣೆಗೆ ಬಂದು ಶರಣಾಗತಿಯಾಗಿ, ನಡೆದ ಘಟನೆಯನ್ನು ವಿವರಿಸಿದ್ದಾನೆ. ಈ ಕುರಿತು ಘಟನಾ ಸ್ಥಳಕ್ಕೆ ಆಗಮಿಸಿದ ಜಮಖಂಡಿ ಡಿವೈಎಸ್ಪಿ ಪಾಂಡುರಂಗಯ್ಯ, ಸಿಪಿಐ ಐ.ಎಂ. ಮಠಪತಿ, ಪಿಎಸ್‌ಐ ರಾಕೇಶ ಬಗಲಿ ತನಿಖೆ ಮುಂದುವರೆಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.