ಆಳುವ ಸರ್ಕಾರಗಳಿಂದ ಮಹದಾಯಿ ತಾರ್ಕಿಕ ಅಂತ್ಯ: ನಟ ಶಿವರಾಜಕುಮಾರ್

Advertisement

ಹುಬ್ಬಳ್ಳಿ: ಉತ್ತರ ಕರ್ನಾಟಕದ ಜನರ ಬಹುದಿನಗಳ ಬೇಡಿಕೆಯಾದ ಮಹದಾಯಿ ಹೋರಾಟಕ್ಕೆ ನಮ್ಮ ಬೆಂಬಲ ಯಾವಾಗಲೂ ಇರುತ್ತದೆ. ಆದರೆ ತಾರ್ಕಿಕ ಅಂತ್ಯವನ್ನು ಆಳುವ ಸರಕಾರಗಳು ಮಾಡಬೇಕು. ನಾವಲ್ಲ, ನಾವು ಹಾಡೆಂದರೆ ಹಾಡಬಹುದು, ಕುಣಿಯೆಂದರೆ ಕುಣಿಯಬಹುದು ನಿರ್ಧಾರ ನಮ್ಮ ಕೈಯಲಿಲ್ಲ ಎಂದು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಹೇಳಿದರು.
ಬುಧವಾರ ಹುಬ್ಬಳ್ಳಿಯಲ್ಲಿ ಮಾಧ್ಯಮದವರು ಮಹದಾಯಿ ಸಮಸ್ಯೆ ಕುರಿತು ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದ ಅವರು, ಮಹಾದಾಯಿ ತಾರ್ಕಿಕ ಅಂತ್ಯ ನಮ್ಮ ಕೈಯಲ್ಲಿ ಇಲ್ಲ. ಸಿನಿಮಾದವರು ಕೇವಲ ಹೋರಾಟಕ್ಕೆ ಬೆಂಬಲ ನೀಡಬಹುದು. ಅದರಂತೆ ಖಂಡಿತ ನಮ್ಮ ಬೆಂಬಲ ಸದಾ ಇದೆ. ಗೋಕಾಕ ಚಳವಳಿ ತಾರ್ಕಿಕ ಅಂತ್ಯಕ್ಕೆ ಅಪ್ಪಾಜಿಯವರು ತೆಗೆದುಕೊಂಡು ಹೋಗಿದ್ದರು. ಆದರೆ ಈಗ ಕಾಲ ಬದಲಾಗಿದೆ. ಸಮಾಜವೂ ಬದಲಾಗಿದೆ. ಜನರು ಬದಲಾಗಿದ್ದಾರೆ. ಆಡಳಿತ ಯಂತ್ರವೂ ಬದಲಾಗಿದೆ ಎಂದರು.
ಹುಬ್ಬಳ್ಳಿ ನಮಗೆ ಲಕ್ಕಿ ಪ್ಲೇಸ್ ಆಗಿದೆ. ನಾನು ಸಿನಿಮಾ ಕ್ಷೇತ್ರಕ್ಕೆ ಬರುವ ಮೊದಲು ಹುಬ್ಬಳ್ಳಿ ಸ್ನೇಹಿತನ ತಂಗಿಯ ಮದುವೆಗೆ ಬಂದಿದೆ. ಹುಬ್ಬಳ್ಳಿಯಲ್ಲಿ ನಮ್ಮ ಹೆಚ್ಚು ಚಿತ್ರಗಳನ್ನು ಚಿತ್ರೀಕರಣ ಮಾಡಿದ್ದೇನೆ. ಹುಬ್ಬಳ್ಳಿ, ಇಲ್ಲಿನ ಜನರ ಬಗ್ಗೆ ವಿಶೇಷ ಅಭಿಮಾನ ಇದೆ ಎಂದರು.
ನಾನು ರಾಜಕೀಯಕ್ಕೆ ಬರಲ್ಲ. ನನ್ನ ಪತ್ನಿ ಗೀತಾ ಕೂಡ ಎಲ್ಲಿಯೂ ಚುನಾವಣೆಗೆ ನಿಲ್ಲುವುದಿಲ್ಲ. ಸಮಾಜಸೇವೆ ಮಾಡುವತ್ತ ಸಾಗಿದ್ದಾಳೆ. ಹೀಗಾಗಿ ರಾಜಕೀಯಕ್ಕೆ ಬರುವ ಮಾತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ಲಾö್ಯನ್ ಮಾಡಿದರೆ ಪ್ಯಾನ್: ಕನ್ನಡ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಮಾಡುವ ಬದಲು ಸಿನಿಮಾದ ಕುರಿತು ಸರಿಯಾದ ಪ್ಲಾನ್ ಮಾಡಿದರೆ ಅದಾಗಲೇ ಪ್ಯಾನ್ ಇಂಡಿಯಾ ಆಗಿ ಸಕ್ಸಸ್ ಆಗುತ್ತದೆ. ಇದಕ್ಕೆ ತಾಜಾ ಉದಾಹರಣೆಯಾಗಿ ಕಾಂತಾರ, ಕೆಜಿಎಫ್ ಚಿತ್ರಗಳು ಕಣ್ಣುಮುಂದೆ ಇವೆ ಎಂದು ಶಿವರಾಜಕುಮಾರ್ ಹೇಳಿದರು.