ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ (ಆರ್‌ಡಿಪಿಆರ್) ಪ್ರಧಾನ ಕಚೇರಿಯಲ್ಲಿದ್ದ ಕೆಲ ಕಡತಗಳು ನಾಪತ್ತೆಯಾಗಿದ್ದು, ಈ ಸಂಬಂಧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿನೇಶ್‌ಕುಮಾರ್ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಇಲಾಖೆಯ ಅಧೀನ ಕಾರ್ಯದರ್ಶಿ ಬಿ. ನವೀನ್‌ಕುಮಾರ್ ಅವರು ಕಡತ ನಾಪತ್ತೆ ಬಗ್ಗೆ ದೂರು ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಭಾರತೀಪುರ ಕ್ರಾಸ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿನೇಶ್‌ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ವಿಧಾನಸೌಧ ಬಳಿಯ ಬಹುಮಹಡಿ ಕಟ್ಟಡದಲ್ಲಿ ಆರ್‌ಡಿಪಿಆರ್ ಪ್ರಧಾನ ಕಚೇರಿ ಇದೆ. ೨೦೧೮ರಲ್ಲಿ ಇಲಾಖೆಯ ಕೆಲ ನೌಕರರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಕಾರಣಕ್ಕಾಗಿ ಅನುಕಂಪದ ಸರ್ಕಾರಿ ಹುದ್ದೆ ನೀಡಲಾಗುತ್ತಿತ್ತು. ಇದಕ್ಕೆ ಸಂಬಂಧಪಟ್ಟಂತೆ ಎರಡು ಪ್ರತ್ಯೇಕ ಕಡತಗಳನ್ನು ಸೃಷ್ಟಿಸಲಾಗಿತ್ತು. ಇದೇ ಕಡತಗಳು ಇದೀಗ ಭೌತಿಕವಾಗಿ ಲಭ್ಯವಿಲ್ಲ. ಎಲ್ಲಿಯೋ ನಾಪತ್ತೆಯಾಗಿರುವುದಾಗಿ ದೂರುದಾರರು ಆರೋಪಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
೨೦೧೮ರ ಮೇ ೩೧ರಿಂದ ೨೦೨೪ರ ಏಪ್ರಿಲ್ ೭ರವರೆಗಿನ ಅವಧಿಯಲ್ಲಿ ಕಡತಗಳು ನಾಪತ್ತೆಯಾಗಿವೆ. ಈ ಅವಧಿಯಲ್ಲಿ ಇಲಾಖೆಯ ನಿರ್ದೇಶಕರ ಆಪ್ತ ಸಹಾಯಕ ಕಚೇರಿಯಲ್ಲಿ ಆರೋಪಿ ದಿನೇಶ್‌ಕುಮಾರ್ ಕೆಲಸ ಮಾಡುತ್ತಿದ್ದರು. ಜೊತೆಗೆ, ಕಡತಗಳನ್ನು ಇದೇ ಶಾಖೆಯಲ್ಲಿ ಸ್ವೀಕರಿಸಿದ್ದ ಬಗ್ಗೆ ದಾಖಲೆಗಳಿವೆ ಎಂದು ಮೂಲಗಳು ಹೇಳಿವೆ.
ಕಡತಗಳಿಗಾಗಿ ಹಲವು ದಿನ ಶೋಧಿಸಲಾಗಿತ್ತು. ಆದರೆ, ಕಡತಗಳು ಲಭ್ಯವಾಗಿರಲಿಲ್ಲ. ಈ ಬಗ್ಗೆ ಕಾರಣ ಕೇಳಿ ದಿನೇಶ್‌ಕುಮಾರ್‌ಗೆ ನೋಟಿಸ್ ನೀಡಲಾಗಿತ್ತು. ಇದಕ್ಕೆ ಅವರು ಯಾವುದೇ ಉತ್ತರ ನೀಡಿಲ್ಲ. ಕಡತಗಳ ನಾಪತ್ತೆ ಹಿಂದೆ ಹಲವರ ಕೈವಾಡವಿರುವ ಶಂಕೆ ಇದೆ. ಹೀಗಾಗಿ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಾರ್ವಜನಿಕ ಸೇವಕರಿಂದ ನಂಬಿಕೆಯ ಉಲ್ಲಂಘನೆ(ಐಪಿಸಿ ೪೦೯) ಆರೋಪದಡಿ ದಿನೇಶ್‌ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ಪುರಾವೆಗಳನ್ನು ಸಂಗ್ರಹಿಸಿ, ಆರೋಪಿಯನ್ನು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ಹೇಳಿವೆ.