ದಾವಣಗೆರೆ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಾಳಿಯಲ್ಲಿ ಗುಂಡು ಹೊಡೆ ಯುವುದನ್ನು ಬಿಡಬೇಕು. ಯತ್ನಾಳ್ ಆರೋಪ ನಿಜವೆಂದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿರ್ವಹಣೆಯಲ್ಲಿ ೪೦ ಸಾವಿರ ಕೋಟಿ ರೂ. ಅವ್ಯವಹಾರ ಆಗಿದೆ ಎಂಬ ಯತ್ನಾಳ್ ಆರೋಪದಲ್ಲಿ ಹುರುಳಿಲ್ಲ. ಆಗಲೂ ಇವರೇ ಶಾಸಕರಾಗಿದ್ದರು. ದಾಖಲೆಗಳಿದ್ದರೆ ಆರೋಪ ಸಾಬೀತು ಮಾಡಲಿ. ಈಗಾಗಲೇ ಸದನದ ಲ್ಲಿಯೇ ದಾಖಲೆ ಸಮೇತ ಎಲ್ಲ ಅಂಕಿ-ಅಂಶ ತೋರಿಸಿದ್ದರೂ ಆಗ ಮೌನವಾಗಿದ್ದ ಯತ್ನಾಳ್ ಈಗ ಆರೋಪ ಮಾಡುತ್ತಿದ್ದಾರೆ. ಪ್ರಭಾವಿ ಸಚಿವರ ಜೊತೆ ಯತ್ನಾಳ್ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಅವ್ಯವಹಾರದ ದಾಖಲೆಗಳಿದ್ದರೆ ಬಹಿರಂಗ ಚರ್ಚೆಗೆ ಬರಲಿ. ಅದನ್ನು ಬಿಟ್ಟು ವೃಥಾ ಆರೋಪ ಮಾಡುವುದನ್ನು ಬಿಡಬೇಕು ಎಂದರು.