ವಿಶ್ವನ ಐಡಿಯಾಗೆ ನಾನು ತಲೆ ತೂಗಿದೆ. ಆರೋಪ ತರಬೇತಿ ಶಿಬಿರ ನಡೆಸಲು ಪ್ಲ್ಯಾನ್ ಮಾಡಿದ್ದ, ಇದನ್ನು ಕಲಿಯಲು ಜನ ದುಡ್ಡು ಕೊಟ್ಟುರ‍್ತಾರಾ? ಎಂಬ ಅನುಮಾನ ಕಾಡಿತು.
“೨೦ ಮಂದಿ ಅಡ್ವಾನ್ಸ್ ಕೊಟ್ಟು ಸೀಟ್ ಬುಕ್ ಮಾಡಿದ್ದಾರೆ” ಎಂದ ವಿಶ್ವ.
“ಸಿಲಬಸ್ಸು ಹೇಗಿರುತ್ತೆ? ನಿಮ್ಮ ಶಿಬಿರದ ಉದ್ದೇಶಗಳು?” ಎಂದು ಕೇಳಿದೆ.
ವಿಶ್ವ ಆಸಕ್ತಿಯಿಂದ ವಿವರಿಸಿದ.
“ಇದು ಮೂರು ದಿನದ ಶಿಬಿರ, ರಾಜಕೀಯ ವಲಯದಲ್ಲಿ ವೃಥಾ ಆರೋಪ ಮಾಡೋ ಮೂಲಕ ನಾವು ಹೆಸರು ಮಾಡುವುದು ಹ್ಯಾಗೆ ಅಂತ ಈ ಶಿಬಿರದಲ್ಲಿ ಕಲಿಸಿಕೊಡ್ತೀವಿ”.
“ಇದರಿಂದ ಏನು ಲಾಭ?”
“ರಾಜಕೀಯದಲ್ಲಿ ಉಳೀಬೇಕಾದ್ರೆ ಆಗಾಗ ಕಾಂಟ್ರವರ್ಸಿ ಮಾತಾಡ್ತಾ ಇರಬೇಕು. ನಮಗೆ ಕೆಸುವಿನ ಎಲೆಯ ಪತ್ರೋಡೆ ಮಾತ್ರ ಗೊತ್ತಿತ್ತು. ಈಗ ಸ್ಯಾಮ್ ಪಿತ್ರೋಡೇನು ಗೊತ್ತು, ಕಾರಣ ಆತ ನೀಡಿದ ವಿವಾದಾತ್ಮಕ ಹೇಳಿಕೆ. ಆರೋಪಗಳಿಂದ ಚಾಲ್ತೀಲಿ ರ‍್ತೀವಿ” ಎಂದ.
“ಕಾರಣ ಇಲ್ಲದೆ ಹ್ಯಾಗ್ ಆರೋಪ ಹೊರಿಸ್ತೀಯ?”
“ವೆರಿ ಸಿಂಪಲ್, ಮೊನ್ನೆ ಸಿಡಿಲು ಹೊಡೆದು ನಾಲ್ಕು ಕುರಿಗಳು ಸತ್ ಹೋದ್ವು. ಇದಕ್ಕೆ ಪ್ರಧಾನಿಗಳೇ ಕಾರಣ”
“ಪ್ರಧಾನಿಗಳಿಗೂ ಕುರಿಗಳಿಗೂ ಏನ್ ಸಂಬಂಧ?” ಎಂದು ಕೇಳಿದೆ.
“ಹವಾಮಾನ ಇಲಾಖೆ ಕೇಂದ್ರ ಸರ್ಕಾರದ ಕೈ ಕೆಳಗಿದೆ. ಅವರು ಮುಂಚಿತವಾಗಿ ಹವಾಮಾನ ತಿಳಿದುಕೊಂಡು ಇಂಥ ಹಳ್ಳಿಗಳಲ್ಲಿ ಸಿಡಿಲು ಬಡಿಯುತ್ತದೆ, ಮಳೆ ಬಂದಾಗ ಕೊಡೆ ಬಳಸಿ ಅಂತ ಎಚ್ಚರಿಕೆ ಕೊಡಬೇಕಾಗಿತ್ತು, ಆಗ ಕುರಿಗಳು ಸಾಯ್ತಿರಲಿಲ್ಲ” ಎಂದ.
“ಮೀನುಗಾರರಿಗೆ ಎಚ್ಚರಿಕೆ ಕೊಡ್ತರ‍್ತಾರೆ ಅಲ್ಲವಾ? ಎಂದೆ.
“ಚಂಡಮಾರುತ ನಿರೀಕ್ಷಣೆಯ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಭಯಂಕರ ಅಲೆಗಳು ಏಳುತ್ತೆ ಅಂತ ಎಚ್ಚರಿಕೆ ಕೊಡ್ತರ‍್ತಾರೆ. ಕೊಡಲಿಲ್ಲ ಯಾಕೆ ಅಂತ ಆರೋಪಗಳು ಮಾಡೋದನ್ನು ಶಿಬಿರದಲ್ಲಿ ಕಲಿಸ್ತೀವಿ”
“ಚೆನ್ನಾಗಿದೆ, ಮುಂದೆ ಹೇಳು” ಎಂದೆ.
“ಮೊನ್ನೆ ಪ್ರಧಾನಿ ಜೊತೆ ಒಬ್ಬ ಫೋಟೋ ತೆಗೆಸಿಕೊಳ್ತಾ ಶೇಕ್ ಹ್ಯಾಂಡ್ ಕೊಟ್ಟ. ಆಮೇಲೆ ಗೊತ್ತಾಯ್ತು ಅವನು ಒಬ್ಬ ರೇಪಿಸ್ಟು, ಕ್ರಿಮಿನಲ್ಲು ಅಂತ. ಇಂಥ ರೇಪಿಸ್ಟ್ಗಳನ್ನು, ಕ್ರಿಮಿನಲ್‌ಗಳನ್ನು ನಮ್ಮ ಪ್ರಧಾನಿಗಳು ಸಾಕ್ಕೊಂಡಿದ್ದಾರೆ ಅಂತ ಗುಲ್ಲೆಬ್ಬಿಸಿದರೆ ಇಡೀ ದೇಶ ಅಲರ್ಟ್ ಆಗುತ್ತೆ, ಇದು ರಾಷ್ಟç ಮಟ್ಟದ ಆರೋಪ”.
“ಇದಂತೂ ಬಹಳ ಅನ್ಯಾಯ ವಿಶ್ವ, ಯಾರೋ ಬಂದು ಪ್ರಧಾನಿಗೆ ಹಾರ ಹಾಕ್ತಾರೆ, ಕೈ ಕುಲುಕ್ತಾರೆ, ಬಂದವನ ಜಾತಕ ಗೊತ್ತಿರುತ್ತಾ, ಅವನ ಹಿನ್ನೆಲೆ ಗೊತ್ತಿರುತ್ತಾ” ಎಂದು ನಾನು ದಬಾಯಿಸಿದೆ.
“ಗೊತ್ತಿಲ್ಲ ಅಂದ್ಮೇಲೆ ಅವನ ಕೈಯಲ್ಲಿ ಹಾರ ಹಾಕಿಸ್ಕೋಬಾರದು, ವ್ಯಕ್ತೀನ ಸ್ಕ್ರೀನ್ ಮಾಡಬೇಕು, ಸ್ಕಾö್ಯನ್ ಮಾಡಬೇಕು, ಹಾರನ ನಾಯಿಗೆ ಹಾಕಿ ಅದು ಮೂಸಿದ ಮೇಲೆ ನಾವು ಆ ವ್ಯಕ್ತೀನ ಹತ್ತಿರ ಬಿಟ್ಕೋಬೇಕು” ಎಂದ.
“ಲೈಂಗಿಕ ಆರೋಪ ಮಾಡೋದನ್ನೂ ಹೇಳಿ ಕೊಡ್ತೀರಾ?” ಎಂದೆ.
“ಅದೇ ನಮ್ಮ ಟ್ರಂಪ್ ಕಾರ್ಡು, ಫುಲ್ ಡಿಮ್ಯಾಂಡ್ ಇರೋ ಸೆನ್ಷೇಷನಲ್ ನ್ಯೂಸ್! ಬಡ ಹೆಣ್ಣು ಮಕ್ಕಳು ಹೊಟ್ಟೆ ಪಾಡಿಗೋಸ್ಕರ ಮನೆ ಕೆಲಸ ಮಾಡ್ತಾರೆ. ಮನೆ ಯಜಮಾನ ಅವ್ರನ್ನ ಕೆಲವು ಸಲ ದುರುಪಯೋಗ ಮಾಡ್ಕೊಳ್ತಾನೆ. ಎಲ್ಲೆಲ್ಲೊ ಚಿವುಟೋದು, ಗಿಲ್ಲೋದು ಮಾಡ್ತಾನೆ, ಬೇಡ ಸ್ವಾಮಿ ಅಂದ್ರೆ ಕೆಲಸ ಕಳ್ಕೋತಾರೆ”.
“ನಿಜ” ಎಂದೆ.
“ಮನೆ ಯಜಮಾನ ಕೆಲಸದವಳಿಗೆ ಬಲವಂತವಾಗಿ ಮುತ್ತು ಕೊಡೋದು, ಘೋರ ಅಪರಾಧ ಅಂತ ಕಾನೂನು ಮಾಡಬೇಕು, ದೇಶದ ಯಾವುದೇ ಮೂಲೇಲಿ ಲೈಂಗಿಕ ಶೋಷಣೆ ಆದರೂ ಅದಕ್ಕೆ ಪ್ರಧಾನಿಗಳೇ ಕಾರಣ ಅಂತ ಪ್ರೊಟೆಸ್ಟ್ ಮಾಡಬೇಕು”.
“ಯಾರದೋ ಮನೆಯಲ್ಲಿ ಯಾವೊನೋ ಕಾಮಾಂಧ ಕೆಲಸದವಳಿಗೆ ಮುತ್ತು ಕೊಡ್ತಾನೆ, ಪಿ.ಎಂ. ಹೇಗೆ ಅದಕ್ಕೆ ಜವಾಬ್ದಾರರಾಗುತ್ತಾರೆ” ಎಂದು ಕೇಳಿದೆ.
“ದೇಶ ಆಳ್ತೀನಿ ಅಂತ ಹೊರಟ ಮೇಲೆ, ದೇಶದಲ್ಲಿನ ಪ್ರತಿ ಮನೆ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಲೈಂಗಿಕ ದೌರ್ಜನ್ಯ ಎಲ್ಲೇ ನಡೆದರೂ ಪ್ರಧಾನಿಗಳು ಉತ್ತರಿಸಬೇಕಾಗುತ್ತೆ. ದೇಶ ದ್ರೋಹಿಗಳು ವಿದೇಶಕ್ಕೆ ಹಾರಿ ತಪ್ಪಿಸಿಕೊಂಡಾಗ ಪ್ರಧಾನಿಗಳು ಏನು ಮಾಡ್ತಿದ್ರು? ಅನ್ನಬೇಕು. ಕೊಳವೆ ಬಾವಿಗೆ ಮಗು ಬಿದ್ದರೆ ಪ್ರಧಾನಿಗಳ ನಿರ್ಲಕ್ಷ್ಯ ಇದು ಎನ್ನಬೇಕು”.
“ಇಂಥ ಸುಳ್ಳು ಆರೋಪಗಳನ್ನು ಮಾಡೋದು ಸರಿಯಾ?”
“ರಾಜಕೀಯದಲ್ಲಿ ಎದುರಾಳಿ ಬಗ್ಗೆ ಟೀಕೆ ಮಾಡ್ತಿದ್ದರೆ ಆಗ ಟೀ.ವಿ ಸ್ಕ್ರೀನ್ ತುಂಬಾ ನಮ್ಮ ಮುಖ ಬರುತ್ತೆ” ಎಂದ.
“ಸುಳ್ಳು ಆರೋಪಗಳು ಮಾಡೋದನ್ನು ಎಲ್ಲಿಂದ ಕಲಿತೆ? ಎಂದು ಕೇಳಿದೆ.
ವಿಶ್ವ ಜೋರಾಗಿ ನಕ್ಕ
“ಇತ್ತೀಚಿನ ವಿದ್ಯಮಾನಗಳು ಟಿ.ವಿ.ಯಲ್ಲಿ ರ‍್ತಿತ್ತು. ಎಲ್ಲಕ್ಕೂ ಪ್ರಧಾನಿಗಳೇ ಕಾರಣ ಅಂತ ಕೂಗಾಡ್ತಿದ್ದವರ ಹೆಸರು ಮಿಂಚ್ತಿತ್ತು”
“ಆರೋಪ ಮಾಡೋದರಿಂದ ಬೇರೆ ಏನ್ ಅನುಕೂಲ ಇದೆ” ಎಂದು ಮತ್ತೆ ಕೇಳಿದ.
“ರಾಜಕಾರಣಿ ಸುದ್ದಿಯಲ್ಲಿದ್ರೆ ಎಲ್ಲರೂ ಓಟು ಹಾಕುತ್ತಾರೆ, ಔಟ್ ಆಫ್ ಸೈಟ್ ಈಸ್ ಔಟ್ ಆಫ್ ಮೈಂಡ್”
“ಎಲ್ಲಾ ಸರಿ ಪ್ರಧಾನಿಗಳ ಮೇಲೇ ಯಾಕೆ ಗೂಬೆ ಕೂರಿಸಬೇಕು” ಎಂದು ಕೇಳಿದೆ.
“ದೊಡ್ಡವರನ್ನು ಬೈದಾಗಲೇ ಚಿಕ್ಕವರು ಕೂಡ ದೊಡ್ಡವರಾಗೋದು”
“ದೊಡ್ಡವರು ಮಾಡೋ ಒಳ್ಳೆ ಕೆಲಸಗಳ ಬಗ್ಗೆ ಹೇಳೋಲ್ವೇನೂ?” ಎಂದೆ.
“ಒಳ್ಳೇದು ಯಾರಿಗೂ ಬೇಡ, ಪ್ರವಚನ ಕೇಳೋಕೆ ಟೀವಿ ಮುಂದೆ ಯಾರೂ ಕೂರೊಲ್ಲ, ಪ್ರಧಾನಿಗಳು ಬಂಧುಗಳಿಗೆ ಬಿಡಿಕಾಸು ಸಹಾಯ ಮಾಡಲಿಲ್ಲ. ಸ್ವಂತಕ್ಕೆ ಒಂದು ಮನೆ ಕಟ್ಟಿಕೊಳ್ಳಲಿಲ್ಲ ಅಂದರೆ ಅದು ಸೆನ್ಷೇಷನಲ್ ನ್ಯೂಸ್ ಆಗೊಲ್ಲ. ನೆಗೆಟೀವ್ ಆಗಿ ಮಾತಾಡಿದ್ರೇನೇ ಥ್ರಿಲ್ ಕ್ರಿಯೇಟ್ ಆಗಿ ಜನರ ಕಣ್ಣಿಗೆ ನಾವು ಬೀಳೋದು”
“ಬಹಳ ಅನ್ಯಾಯ ವಿಶ್ವ” ಎಂದೆ.
“ರಾಜಕಾರಣವೇ ಹಾಗೆ, ಎಲ್ಲಿ ಎನೇ ತೊಂದ್ರೆ ಆದ್ರೂ ಪ್ರಧಾನಿಗಳೇ ಕಾರಣ, ಸಕಲ ಗ್ರಹಚಾರಕ್ಕೆಲ್ಲ ಶನೇಶ್ವರನೇ ಕಾರಣ ಅಂತೀವಲ್ಲ ಹಾಗೆ”
“ಚುನಾವಣೆ ಮುಗಿದ ಮೇಲೆ ಏನು ಆರೋಪ ಮಾಡಬಹುದು?”
“ಚುನಾವಣೆ ರಿಸಲ್ಟ್ ಬಂದ್ಮೇಲೆ ಸೋತವರು ಇವಿಎಂ ಮೆಷಿನ್‌ಗೆ ಹಿಡಿ ಶಾಪ ಹಾಕ್ತಾರೆ, ಇವಿಎಂ ಮೆಷಿನ್ ದುರುಪಯೋಗ ಆಗಿದೆ, ಇವಿಎಂ ಮೆಷಿನ್‌ಗಳಲ್ಲಿರೋ ವಿವಿ ಪ್ಯಾಟ್ ಚೀಟಿಗಳನ್ನು ಸಹ ಎಣಿಸಬೇಕು ಅಂತಂದ್ರೆ ಸಾಕು. ಅದು ರಾಷ್ಟ್ರೀಯ ಸುದ್ದಿ ಆಗುತ್ತೆ. ವಿವಿ ಪ್ಯಾಟ್ ಚೀಟಿಗಳನ್ನು ಎಣಿಸೋಕೆ ಸಾಧ್ಯ ಇಲ್ಲ, ಅದರ ಬದಲು ತಲೇಲಿ ಇರೋ ಕೂದ್ಲನ್ನ ಎಣಿಸ ಬಹುದು! ನಟ ಕಮಲ ಹಾಸನ್ ಸಹ ಇವಿಎಂ ಸುರಕ್ಷತೆ ಬಗ್ಗೆ ಕಳೆದ ತಿಂಗಳು ಅನುಮಾನ ಪಟ್ಟಾಗ ಬಹಳ ವರ್ಷಗಳಾದ ಮೇಲೆ ಅವರ ಫೋಟೋ ಎಲ್ಲಾ ಪತ್ರಿಕೇಲೂ ಬಂದು ಬಿಟ್ಟು ಪ್ರಚಾರ ಸಿಕ್ಕಿತ್ತು”
“ಸುಳ್ಳು ಅನುಮಾನಗಳಿಂದ ಬೇರೆ ಏನ್ ಅನುಕೂಲ ಆಗುತ್ತೆ?”
“ಹೇಳಿದ್ನಲ್ಲ, ನಾವು ಸದಾ ಸುದ್ದಿಯಲ್ಲರ‍್ತೀವಿ, ಆದ್ದರಿಂದ ಆರೋಪ ತರಬೇತಿ ಶಿಬಿರವನ್ನು ಚುನಾವಣೆ ಸಮಯದಲ್ಲಿ ಹಮ್ಮಿಕೊಂಡರೆ ಒಳ್ಳೆ ಕಮಾಯಿ ಮಾಡಬಹುದು” ಎಂದ ವಿಶ್ವನ ಮಾತಿನಲ್ಲಿ ವಿಶ್ವಾಸವಿತ್ತು.