ಹರ್ಷ ಕುಲಕರ್ಣಿ
ಹುಬ್ಬಳ್ಳಿ: ಮಾಡುವ ಕೆಲಸ ಬಹಳಷ್ಟಿದ್ದರೂ, ಮಾಡಬಾರದ ಕೆಲಸಕ್ಕೇ ಹೆಚ್ಚಿನ ಸಮಯ ಹಾಗೂ ಆಸಕ್ತಿ ತೋರುತ್ತಿರುವ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅನೇಕ ಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಹಲವಾರು ಬಾರಿ ಮನವಿ ನೀಡಿದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಅಶ್ಲೀಲ ವೀಡಿಯೋ ಚಿತ್ರೀಕರಿಸುತ್ತಿದ್ದ ಅನ್ಯ ಕೋಮಿನ ವ್ಯಕ್ತಿಯನ್ನು ಥಳಿಸಿ, ತಮಗೆ ಒಪ್ಪಿಸಿದ ಸಾರ್ವಜನಿಕರ ವಿರುದ್ಧವೇ ಸೊಮೋಟೊ ಪ್ರಕರಣವನ್ನು ದಾಖಲಿಸಿರುವ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸುರೇಶ ಯಳ್ಳೂರ ಅವರು ಯಾರ ಸೂಚನೆಯ ಮೇರೆಗೆ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಗೋಕುಲ ರಸ್ತೆಯ ಡಾ. ಆರ್.ಎಂ. ಲೋಹಿಯಾ ನಗರದಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಅನ್ಯ ಕೋಮಿನ ವ್ಯಕ್ತಿಯೊಬ್ಬ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ. ಅದನ್ನು ಕಂಡ ಸ್ಥಳೀಯರು ಆತನನ್ನು ಹಿಡಿದು ಥಳಿಸಿ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದರು. ಇಡೀ ಬಡಾವಣೆಯ ಜನರೇ ಆರೋಪಿಯನ್ನು ಥಳಿಸಿದ್ದಾರೆ. ಆದರೆ, ಕೇವಲ ಕೆಲವರನ್ನೇ ಟಾರ್ಗೆಟ್ ಮಾಡಿಕೊಂಡು ಅವರ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡು ಚಿತ್ರಹಿಂಸೆ ನೀಡುತ್ತಿರುವುದು ಯಾವ ನ್ಯಾಯ?
ಸಾಹೇಬರ ಸೂಚನೆಯ ಮೇರೆಗೆ, ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರನ್ನು ಒತ್ತಾಯ ಪೂರ್ವಕವಾಗಿ ಠಾಣೆಗೆ ಕರೆಸಿಕೊಂಡ ಡೊಂಕನವರ ಎಂಬ ಸಿಬ್ಬಂದಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರಿಂದ ಬಲವಂತವಾಗಿ ಸಹಿ ಮಾಡಿಸಿಕೊಂಡು ಸಮನ್ಸ್ ನೀಡಿ ಕಳುಹಿಸಿದ್ದಾರೆ. ಇದೇ ಪೌರುಷವನ್ನು ಅಕ್ರಮ ಚಟುವಟಿಕೆ, ಕಳ್ಳ ದಂಧೆ ಮಾಡುವವರ ಮುಂದೆ ತೋರಿಸಿದ್ದರೆ ಬಹುಶ ಪ್ರಯೋಜನವಾಗುತ್ತಿತ್ತು. ಕಾನೂನು ಪಾಲನೆಯ ದೃಷ್ಟಿಯಿಂದ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದವರು ಶ್ರೀಮಂತರಲ್ಲ. ಕೂಲಿ-ನಾಲಿ ಮಾಡಿ ಜೀವನ ಸಾಗಿಸುವವರು. ಈಗ ಸಮನ್ಸ್ ಜಾರಿಯಾಗುವುದರಿಂದ ಖರ್ಚು ವೆಚ್ಚವನ್ನು ಯಾರು ಭರಿಸಬೇಕು. ಅವರಿಗ್ಯಾರು ಜಾಮೀನು ನೀಡಬೇಕು ಎಂಬುದು ಸಧ್ಯ ಚರ್ಚಿತ ವಿಷಯ.
ತಮ್ಮ ಸುತ್ತಮುತ್ತಲು ನಡೆಯುತ್ತಿರುವ ಅಕ್ರಮ, ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದವರ ಬಗ್ಗೆ ಗೌಪ್ಯತೆ ಕಾಪಾಡಬೇಕು ಎಂಬುದು ಕಾನೂನು. ಆದರೆ, ಪೊಲೀಸರಿಗೆ ಮಾಹಿತಿ ನೀಡುವರ ವಿರುದ್ಧವೇ ಪ್ರಕರಣ ದಾಖಲಿಸುತ್ತ ಹೋದರೆ ಜನರೇಕೆ ಪೊಲೀಸರಿಗೆ ಮಾಹಿತಿ ನೀಡಬೇಕು.
ಹಳೇ ಹುಬ್ಬಳ್ಳಿ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಅಕ್ರಮ, ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಹುಸೇನ್ ಬಾಷಾ ಎಂಬ ವ್ಯಕ್ತಿ ಕಳೆದ ೫-೬ ತಿಂಗಳುಗಳಿಂದ ಮನವಿ ಸಲ್ಲಿಸುತ್ತಿದ್ದಾರೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳದ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರ ವಿರುದ್ಧ ಎಡಿಜಿಪಿ ಅವರಿಗೂ ಪತ್ರ ಬರೆಯಲಾಗಿತ್ತು. ಆದರೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕದ ಪೊಲೀಸರು, ಅಮಾಯಕರ ಮೇಲೆ ದರ್ಪ ತೋರಿಸುತ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ಜನ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರ ವಿರುದ್ಧ ಆಕ್ರೋಷ ವ್ಯಕ್ತಪಡಿಸುತ್ತಿದ್ದು, ನ್ಯಾಯಕ್ಕಾಗಿ ಪ್ರಧಾನ ಮಂತ್ರಿಗಳ ಕಚೇರಿ, ರಾಷ್ಟ್ರಪತಿ, ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಪತ್ರ ಬರೆಯಲು ಸಿದ್ಧರಾಗಿದ್ದಾರೆ.
ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರ ವಿರುದ್ಧ ದೂರು ದಾಖಲಾಗಿರುವ ವಿಷಯ ನನ್ನ ಗಮನಕ್ಕಿಲ್ಲ. ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ಮಾಹಿತಿ ತರಿಸಿಕೊಳ್ಳುತ್ತೇನೆ. ಹಳೇ ಹುಬ್ಬಳ್ಳಿಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಸಂಬಂಧಪಟ್ಟವರಿಗೆ ಸೂಚನೆ ನೀಡುತ್ತೇನೆ.
– ರೇಣುಕಾ ಸುಕುಮಾರ್, ಪೊಲೀಸ್ ಆಯುಕ್ತರು.