ಆರೋಪಿಯನ್ನು ವಿಚಾರಣೆ ಮಾಡಿಲ್ಲ

Advertisement

ಮಂಗಳೂರು: ಪಡೀಲ್ ಸಮೀಪದ ನಾಗುರಿಯಲ್ಲಿ ನ. 19ರಂದು ಆಟೋದಲ್ಲಿ ನಡೆದ ಸ್ಫೋಟ ಪ್ರಕರಣದ ಆರೋಪಿ ಮುಹಮ್ಮದ್ ಶಾರಿಕ್‌ನನ್ನು ನಾನು ವಿಚಾರಣೆಯನ್ನೇ ಮಾಡಿಲ್ಲ, ಆತನ ಆರೋಗ್ಯ ಸುಧಾರಿಸದ ಕಾರಣ ಸದ್ಯ ಆತ ಯಾವ ಹೇಳಿಕೆಯನ್ನೂ ನೀಡುವ ಸ್ಥಿತಿಯಲ್ಲಿಲ್ಲ. ಹಾಗಾಗಿ ಯಾವುದೇ ರೀತಿಯ ಗಾಳಿಸುದ್ದಿಗೆ ಕಿವಿಗೊಡಬಾರದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮನವಿ ಮಾಡಿದ್ದಾರೆ. ಆರೋಪಿಯು ಆರೋಗ್ಯವಾಗಿದ್ದಾನೆ ಎಂದು ವೈದ್ಯರು ದೃಢೀಕರಿಸುವವರೆಗೆ ಆತನ ವಿಚಾರಣೆ ನಡೆಸಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಆರೋಪಿಯನ್ನು ಪೊಲೀಸ್ ಕಮಿಷನರ್ ವಿಚಾರಣೆ ನಡೆಸಿದ್ದಾರೆ, ತನಿಖಾಧಿಕಾರಿಯ ಮುಂದೆ ಆತ ಹೇಳಿಕೆ ನೀಡಿದ್ದಾನೆ. ಕದ್ರಿ ದೇವಸ್ಥಾನ, ಸಂಘ ನಿಕೇತನಕ್ಕೆ ಹಾನಿಗೆಡಗುವ ಉದ್ದೇಶವನ್ನು ಆತ ಹೊಂದಿದ್ದ ಎಂಬುದಾಗಿ ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ `ಸುದ್ದಿ’ ಪ್ರಸಾರವಾದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಸಹಿತ ತನಿಖಾಧಿಕಾರಿಯ ತಂಡವು ಆತನನ್ನು ವಿಚಾರಣೆಯನ್ನೇ ನಡೆಸಿಲ್ಲ. ಆತನ ಆರೋಗ್ಯ ಸುಧಾರಿಸದ ಕಾರಣ ಸದ್ಯ ಆತ ಯಾವ ಹೇಳಿಕೆಯನ್ನೂ ನೀಡುವ ಸ್ಥಿತಿಯಲ್ಲಿಲ್ಲ ಎಂದಿದ್ದಾರೆ.