ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ. ಇದರಲ್ಲಿ ಖಾಸಗಿ ಕಾಲೇಜುಗಳೇ ಹೆಚ್ಚು. ಪ್ರತಿ ಕಾಲೇಜಿಗೂ ಸೇರಿದಂತೆ ಒಂದು ಆಸ್ಪತ್ರೆ ಇರುತ್ತದೆ. ಆದರೂ ರಾಜ್ಯದಲ್ಲಿ ಆರೋಗ್ಯ ಸೇವೆ ಸಮಾಧಾನಕರವಾಗಿಲ್ಲ. ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಬಳಸುವುದರಲ್ಲಿ ನಾವು ಮುಂದಿದ್ದರೂ ಒಟ್ಟಾರೆ ಆರೋಗ್ಯ ಸ್ಥಿತಿ ಉತ್ತಮಗೊಂಡಿಲ್ಲ. ಎಲ್ಲ ರೋಗಗಳಿಗಿಂತ ದೊಡ್ಡ ಸಮಸ್ಯೆ ಇರುವುದು ರಕ್ತಹೀನತೆ. ಅದರಲ್ಲೂ ಮಹಿಳೆಯರು ಮತ್ತು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಹೈಕೋರ್ಟ್ ಇದರ ಬಗ್ಗೆ ವಿಶೇಷ ಸಮೀಕ್ಷೆ ನಡೆಸಿ ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿರುವ ಕಡು ಬಡತನ ಮತ್ತು ರಕ್ತ ಹೀನತೆಯ ಬಗ್ಗೆ ಸರ್ಕಾರದ ಗಮನ ಸೆಳೆದಿದೆ. ಈ ಜಿಲ್ಲೆಗಳಲ್ಲಿ ಹುಟ್ಟುವ ಮಕ್ಕಳು ಅತಿ ಕಡಿಮೆ ತೂಕದಲ್ಲಿದ್ದು ಅಪೌಷ್ಟಿಕತೆಯಿಂದ ಬಳಲುವುದು ಸಾಮಾನ್ಯ ಸಂಗತಿಯಾಗಿದೆ. ಅದೇರೀತಿ ಅತಿ ಚಿಕ್ಕವಯಸ್ಸಿನಲ್ಲೇ ಮಹಿಳೆಯರು ತಾಯಂದಿರಾಗುತ್ತಿರುವುದು ಮತ್ತು ಅವರು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಸಮಾಧಾನಕರವಾಗಿಲ್ಲ. ಹೀಗಾಗಿ ಹುಟ್ಟುವಾಗಲೇ ನವಜಾತ ಶಿಶುಗಳು ಮರಣಹೊಂದುವುದು ಹಾಗೂ ಹೆರಿಗೆ ಸಮಯದಲ್ಲಿ ತಾಯಿ ಮೃತಪಟ್ಟಿರುವುದು ಅಧಿಕಗೊಂಡಿದೆ. ಈ ಸಾವು ಕಡಿಮೆ ಮಾಡಬೇಕು ಎಂದರೆ ತಾಯಿ ಮತ್ತು ನವಜಾತ ಶಿಶುಗಳ ರಕ್ಷಣೆಗೆ ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕೆ ಕೇಂದ್ರ ಕೂಡ ಹೆಚ್ಚಿನ ನೆರವು ನೀಡುತ್ತದೆ. ಈ ನೆರವು ಅರ್ಹರಿಗೆ ತಲುಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕು. ಕೇಂದ್ರದಿಂದ ಬರುವ ನೆರವಿನಲ್ಲಿ ತಾಲೂಕು ಆಸ್ಪತ್ರೆಯಿಂದ ಹಿಡಿದು ನಗರಗಳ ಬೃಹತ್ ಆಸ್ಪತ್ರೆಗಳವರೆಗೆ ಅಧುನಿಕ ಉಪಕರಣಗಳನ್ನು ಒದಗಿಸುವುದು ಬಹಳ ಮುಖ್ಯ. ಇತ್ತೀಚೆಗೆ ಮುಖ್ಯಮಂತ್ರಿ ವಿಡಿಯೋ ಕಾನ್ಫರೆನ್ಸ್ ನಡೆಸಿದಾಗ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಯಂತ್ರ ಕೆಲಸ ಮಾಡುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ಇದಕ್ಕೆ ಹಲವು ಕಾರಣಗಳಿವೆ. ಡಯಾಲಿಸಿಸ್ ಘಟಕಗಳನ್ನು ಪ್ರತಿಷ್ಠಾಪಿಸುವ ಕೆಲಸ ಸರಾಗವಾಗಿ ನಡೆಯುತ್ತದೆ. ಆದರೆ ಅದಕ್ಕೆ ಬೇಕಾದ ತಂತ್ರಜ್ಞರ ನೇಮಕ ಆಗುವುದಿಲ್ಲ. ಅಲ್ಲದೆ ಕಿಡ್ನಿ ತಜ್ಞರು ಸಾಕಷ್ಟು ಸಂಖ್ಯೆಯಲ್ಲಿರಬೇಕು. ತಜ್ಞರು ತಾಲೂಕು ಮಟ್ಟದಲ್ಲಿ ಕೆಲಸ ಮಾಡಲು ಬಯಸುವುದಿಲ್ಲ. ನಗರಗಳಲ್ಲಿ ಹೆಚ್ಚಿನ ತಜ್ಞರು ಲಭ್ಯವಿರುತ್ತಾರೆ. ಅವರು ಒಂದಕ್ಕಿಂತ ಹೆಚ್ಚು ಆಸ್ಪತ್ರೆಗಳಿಗೆ ಹೋಗಿ ಲಕ್ಷಾಂತರ ರೂ. ಸಂಪಾದಿಸುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞರ ನೇಮಕವಾಗಿದ್ದರೂ ಅವರು ಸಕಾಲದಲ್ಲಿ ಬರುವುದೇ ಇಲ್ಲ. ಸರ್ಕಾರಿ ವೈದ್ಯರಿಗೆ ಉತ್ತರದಾಯಿತ್ವ ಇರುವುದಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡದೇ ಇರುವುದಕ್ಕೆ ಹೆಚ್ಚಿನ ಭತ್ಯೆಯನ್ನು ನೀಡಿದರೂ ಸರ್ಕಾರಿ ವೈದ್ಯರು ಉತ್ತಮ ಸೇವೆ ನೀಡುತ್ತಿಲ್ಲ. ಬಡವರಿಗೆ ಉಚಿತ ವೈದ್ಯಕೀಯ ಸೇವೆ ಸಮರ್ಪಕವಾಗಿ ಸಿಗುತ್ತಿಲ್ಲ. ಜಯದೇವ ಹೃದ್ರೋಗ ಆಸ್ಪತ್ರೆ ಸರ್ಕಾರಕ್ಕೆ ಸೇರಿದ್ದರೂ ಅಲ್ಲಿ ಕೆಲಸ ಮಾಡುವ ವೈದ್ಯರ ಮೇಲೆ ನಿಗಾ ವಹಿಸಲು ಸಮರ್ಥ ನಿರ್ದೇಶಕರಿದ್ದಾರೆ. ಅದೇ ರೀತಿ ಇತರ ಸರ್ಕಾರಿ ಆಸ್ಪತ್ರೆಯಲ್ಲಿ ಸಮರ್ಥ ಆಡಳಿತಾಧಿಕಾರಿಗಳು ಬೇಕು. ಅವರ ಮೇಲೆ ಸರ್ಕಾರ ತನ್ನ ಹಿಡಿತ ಹೊಂದಿರಬೇಕು. ಈಗ ಆಸ್ಪತ್ರೆಯಲ್ಲಿ ಎಲ್ಲ ಸವಲತ್ತು ಸಮರ್ಪಕವಾಗಿ ಬಳಕೆಯಾಗುತ್ತದೆ. ಸರ್ಕಾರಿ ಆಸ್ಪತ್ರೆ ಸರಿಯಾಗಿ ನಿರ್ವಹಿಸುತ್ತಿದೆಯೇ ಇಲ್ಲವೆ ಎಂಬುದರ ಬಗ್ಗೆ ನಿಗಾವಹಿಸುವ ವ್ಯವಸ್ಥೆ ಸಮರ್ಪಕವಾಗಿರಬೇಕು. ಇಲ್ಲದಿದ್ದಲ್ಲಿ ಡಯಾಲಿಸಿಸ್ ಯಂತ್ರವೂ ಸೇರಿದಂತೆ ಎಲ್ಲ ವ್ಯವಸ್ಥೆ ಕೆಟ್ಟು ನಿಲ್ಲುತ್ತವೆ. ಇವುಗಳ ಬಳಕೆ ಸಮರ್ಪಕವಾಗಿರುವ ಬಗ್ಗೆ ನಿಗಾವಹಿಸಲು ಮೂರನೇ ವ್ಯಕ್ತಿ ನೇಮಕ ಅಗತ್ಯ. ಎಲ್ಲ ಇಲಾಖೆಗಳಲ್ಲಿ ಮೂರನೇ ವ್ಯಕ್ತಿಯನ್ನು ನಿಗಾವಹಿಸಲು ನೇಮಕ ಮಾಡುತ್ತಾರೆ. ಅವರು ಹೊರಗಿನ ವ್ಯಕ್ತಿಗಳಾಗಿರಬೇಕು. ಅವರು ಸರ್ಕಾರಕ್ಕೆ ನೇರವಾಗಿ ವರದಿ ನೀಡಬೇಕು. ಅವರು ನೀಡಿದ ವರದಿಯಲ್ಲಿ ಸತ್ಯಾಂಶ ಇದ್ದಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಮೂರನೇ ವ್ಯಕ್ತಿ ತಪ್ಪು ವರದಿ ನೀಡಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಆಗ ಸರ್ಕಾರಿ ಆಸ್ಪತ್ರೆಗಳ ಕಾರ್ಯನಿರ್ವಹಣೆ ಉತ್ತಮಗೊಳ್ಳುತ್ತದೆ. ಹಿಂದೆ ಸರ್ಕಾರದ ಹಿರಿಯ ಅಧಿಕಾರಿಗಳು ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುತ್ತಿದ್ದರು. ಈಗ ಹಿರಿಯ ಅಧಿಕಾರಿಗಳೇ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುತ್ತಾರೆ. ಜನಪ್ರತಿನಿಧಿಗಳು ಮತ್ತು ಸಚಿವರು ಖಾಸಗಿ ಆಸ್ಪತ್ರೆಯನ್ನು ಆಶ್ರಯಿಸುತ್ತಾರೆ. ಹೀಗಿರುವಾಗ ಸರ್ಕಾರಿ ಆಸ್ಪತ್ರೆಗಳು ಜನರ ವಿಶ್ವಾಸಗಳಿಸುವುದಾದರೂ ಹೇಗೆ? ಪ್ರತಿ ಆಸ್ಪತ್ರೆಗೂ ಸ್ಥಳೀಯ ಮುಖಂಡರ ಸಮಿತಿ ಇರುತ್ತಿತ್ತು. ಈಗ ಅವುಗಳು ಕೆಲಸ ಮಾಡುತ್ತಿದೆಯೋ ಇಲ್ಲವೋ ತಿಳಿಯದು. ಸರ್ಕಾರಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗೆ ಉತ್ತರದಾಯಿತ್ವವೇ ಇಲ್ಲ. ಆರೋಗ್ಯ ಇಲಾಖೆಗೆ ಈಗ ಸಾಧಾರಣ ಔಷಧ ಕೆಲಸ ಮಾಡುವುದಿಲ್ಲ. ಸರ್ಜರಿಯೇ ಬೇಕು. ರಾಜ್ಯದ ಒಟ್ಟು ಆರೋಗ್ಯ ವ್ಯವಸ್ಥೆ ಸಮಾಧಾನಕರವಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿದೆ. ಇದರಿಂದ ರಾಜ್ಯದ ಘನತೆಗೆ ಕುಂದು ಬಂದಿರುವುದಂತೂ ನಿಜ.