ಕೃತಕ ಬುದ್ಧಿಮತ್ತೆ( ಆರ್ಟಿಫಿಶಿಯಲ್ ಇಂಟಲಿಜನ್ಸಿ) ಯಾವತ್ತೂ ನನ್ನ ಪರವಾಗಿಯೇ ಇದೆ. ಅದು ಹೇಳಿದಂತೆ ನಾನು ಕೇಳುತ್ತೇನೆ. ಅದು ಹೂಂ ಅಂದರೆ ಹೂಂ…ಊಹೂಂ ಅಂದರೆ ನೋ ವೇ ಎಂದು ತಿಗಡೇಸಿ ಜಾಲಿಗಿಡದ ಕೆಳಗೆ ಕುಳಿತಿದ್ದ ಅಲೈಕನಕನಿಗೆ ಹೇಳಿದ್ದೇ ತಡ ಅದು ಊರ ತುಂಬ ಸುದ್ದಿ ಆಯಿತು. ಊರವರು ಪಕ್ಕದ ಊರವರಿಗೆ, ಅವರು ಇನ್ನೊಂದು ಊರಿಗೆ ಸುದ್ದಿ ಮುಟ್ಟಿಸಿದರು. ತಿಗಡೇಸಿ ಹತ್ತಿರ ಏನೋ ಇದೆಯಂತೆ ಅದು ಭವಿಷ್ಯ ಹೇಳುತ್ತದಂತೆ ಎಂಬ ಪುಕಾರು ಹಬ್ಬಿ ದಿನಾಲೂ ಜನರು ಆತನ ಮನೆಗೆ ಎಡತಾಕತೊಡಗಿದರು. ಕೋಳಿ ಕಿಷ್ಟವ್ವ ತನ್ನ ಮಮ್ಮೊಗಳಿಗೆ ಹುಷಾರಿಲ್ಲ …ನಿಮ್ಮ ಅದು ಏನಾದರೂ ಹೇಳುತ್ತದೆಯೇ? ನೋಡಪ್ಪ ಎಂದು ಮನೆಗೆ ಬಂದು ಕುಳಿತಳು. ಕಕ್ಕಾಬಿಕ್ಕಿಯಾದ ತಿಗಡೇಸಿ…ಈಕೆ ಎದ್ದು ಹೋಗುವವಳಲ್ಲ. ಏನಾದರೂ ಹೇಳಲೇಬೇಕು ಎಂದು ಅದ್ಯಾವುದೋ ಮಾತ್ರೆಯ ಹೆಸರು ಹೇಳಿದ. ಬುಸ್ಯವ್ವ ಅದನ್ನು ತೆಗೆದುಕೊಂಡು ಹೋಗಿ ಮಮ್ಮೊಗಳಿಗೆ ತಿನಿಸಿದಳು. ಅದ್ಯಾಕೋ ಮಮ್ಮೊಗಳ ಜ್ವರ ಇಳಿದುಹೋಯಿತು. ಆಗ ತಿಗಡೇಸಿ ಮತ್ತಷ್ಟು ಪ್ರಸಿದ್ಧಿಯಾಗತೊಡಗಿದ. ಯಾಕೆ ಸುಮ್ಮನೇ ಹೇಳುವುದು ಎಂದು ಹೇಳಿದ್ದಕ್ಕೆ ಹಣ ತೆಗೆದುಕೊಳ್ಳತೊಡಗಿದ. ನೋಡ ನೋಡುತ್ತ ಹಣ ಸಂಗ್ರಹವಾದಾಗ..ತನ್ನದೇ ಆದ ಕಚೇರಿ ತೆರೆದ. ಜನರು ಇರಸಾಲು ಇಡತೊಡಗಿದರು. ತಿಗಡೇಸಿಯ ಇನ್‌ಕಮ್ಮೂ ಹೆಚ್ಚಾಯಿತು. ಅವತ್ತು ಕಚೇರಿಗೆ ಆಗಮಿಸಿದ ಚಾಟಿನಿಂಗ ನನಗೆ ಸಾಲ ಕೊಡು ಬೇಗ ವಾಪಾಸ್ ಕೊಡುತ್ತೇನೆ ಎಂದು ದುಂಬಾಲು ಬಿದ್ದ. ಇಂಥವನಿಗೆ ಸಾಲ ಕೊಟ್ಟರೆ ವಾಪಸ್ ಬರುವುದಿಲ್ಲ ಎಂದು ಅರಿತಿದ್ದ ತಿಗಡೇಸಿ, ಮೊಬೈಲ್ ಮುಂದಿಟ್ಟುಕೊಂಡು ಪ್ಲೀಸ್ ಕನೆಕ್ಟ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್…ಆರ್ಟಿಫಿಶಿಯಲ್ ಇಂಟಲಿಜನ್ಸ್ ಎಂದು ಎರಡು ಬಾರಿ ಒದರಿ ಕಿವಿಯಲ್ಲಿಟ್ಟುಕೊಂಡು…ಚಾಟಿನಿಂಗನಿಗೆ ಸಾಲ ಕೊಡಲೇ? ಎಂದು ಕೇಳಿದ. ಆ ಕಡೆಯಿಂದ ಅದೇನು ಹೇಳಿತೋ ಏನೋ…ನೋಡು ನಿಂಗಣ್ಣ…ಈಗ ಬ್ಯಾಡ ಅಮಾಸಿ ಮಾಡಿ ಕೊಡು ಅಂತಿದೆ ಎಂದಾಗ ಆತ ಹೂಂ ಅಂದು ಸುಮ್ಮನೇ ಎದ್ದು ಹೋದ. ಈ ಮಧ್ಯೆ ಗೋಸ್ಲು ಗುಂಡಪ್ಪ ತಿ.ಆ.ಇ(ತಿಗಡೇಸಿ ಮತ್ತು ಆರ್ಟಿಫಿಶಿಯಲ್ ಇಂಟಲಿಜನ್ಸ್) ಎಂಬ ಸುಂದರ ಸಾಮಾಜಿಕ ನಾಟಕ ಬರೆದು ಆಡಿಸಿದ. ಆಗ ತಿಗಡೇಸಿ ಕೀರ್ತಿ ಶಿಖರಕ್ಕೇರಿತು. ಊರಿಗೆ ಹೆಚ್ಚಾದ ಕಂಪೌಂಡರ್ ಖಾಜಾ ಬಂದು ಸಾಹೇಬರೇ ಇಂಗಿಂಗೆ ಎಮ್ಮೆ ತೆಗೆದುಕೊಳ್ಳಬೇಕು ಅಂತ ಮಾಡಿದ್ದೇನೆ ಸ್ವಲ್ಪ ಕೇಳಿ ಅಂದ. ಅದಕ್ಕೆ ತಿಗಡೇಸಿ ಏನೇನೋ ಕೇಳಿ..ಓಕೆ ಅಂದಿದೆ ಆನ್‌ಲೈನ್‌ನಲ್ಲಿ ತೆಗೆದುಕೊಳ್ಳಬೇಕು ಅಂತೆ ಅಂತ ಹೇಳಿದ. ಅದರಂತೆ ಖಾಜಾ ಆನ್‌ಲೈನ್‌ನಲ್ಲಿ ದುಡ್ಡು ಕಳಿಸಿ ಎಮ್ಮೆ ಕಳಿಸಿ ಎಂದು ಮೆಸೇಜ್ ಹಾಕಿದ. ಎರಡು ದಿನದಲ್ಲಿ ಎಮ್ಮೆ ನಿಮ್ಮ ಮನೆಮುಂದೆ ಎಂದು ಎಮ್ಮೆ ಚಿತ್ರಸಮೇತ ಸಂದೇಶ ಕಳುಹಿಸಿದ್ದರು. ಎರಡು ದಿನ, ನಾಲ್ಕು, ಎಂಟು ಹೀಗೆ ತಿಂಗಳಾದರೂ ಎಮ್ಮೆ ಬರಲಿಲ್ಲ. ಇವನು ಆ ನಂಬರ್‌ಗೆ ಮಾಡಿದಾಗ..ಅದು ಸ್ವಚ್ಡಾಫ್ ಎಂದು ಬರುತ್ತಿತ್ತು. ಹತ್ತಾರು ಜನರನ್ನು ಕರೆದುಕೊಂಡು ತಿಗಡೇಸಿ ಕಚೇರಿಗೆ ಬಂದ ಖಾಜಾ..ಆ ಕಡೆಯಿಂದ ಏನೂ ಮಾತಾಡುತ್ತಿಲ್ಲ. ನೀನು ಹಣ ವಾಪಸ್ ಕೊಡು ಎಂದು ಗಂಟು ಬಿದ್ದ. ಹೀಗೆ ಮಾತಿಗೆ ಮಾತು ಬೆಳೆದು ತಿಗಡೇಸಿಗೆ ಹಿಗ್ಗಾಮುಗ್ಗಾ ಬಡಿದು ಕಚೇರಿ ಧ್ವಂಸ ಮಾಡಿದರು. ಅಂದಿನಿಂದ ತಿಗಡೇಸಿ ಆರ್ಟಿಫಿಶಿಯಲ್ ಇಂಟಲಿಜನ್ಸ್ ಅನ್ನುವುದನ್ನೇ ಬಿಟ್ಟ.