ಬೆಳಗಾವಿ: ಅಭಿವೃದ್ಧಿ ದೃಷ್ಟಿಕೋನ ಮತ್ತು ರೈತಪರ ಕಾಳಜಿ ಹೊಂದಿದ್ದ ಯುವ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದುಃಖ ವ್ಯಕ್ತಪಡಿಸಿದರು.
ಸವದತ್ತಿಯಲ್ಲಿ ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದ ನಂತರ ಮಾತನಾಡಿದ ಅವರು, ಮಾಮನಿಯವರ ಅಗಲಿಕೆ ದಿಗ್ಭ್ರಮೆ ಮೂಡಿಸಿದೆ. ಅತ್ಯಂತ ಸಣ್ಣ ವಯಸ್ಸಿನಲ್ಲಿ ಅವರನ್ನು ಕಳೆದುಕೊಂಡಿದ್ದೇವೆ. ಕ್ರಿಯಾಶೀಲ ವ್ಯಕ್ತಿಯಾಗಿದ್ಸ ಮಾಮನಿಯವರು ಸದಾ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಕುರಿತು ನಿರಂತರ ಚರ್ಚೆ ನಡೆಸುತ್ತಿದ್ದರು ಎಂದರು.
ಒಂದೂವರೆ ತಿಂಗಳ ಹಿಂದೆಯಷ್ಟೇ ಆರೋಗ್ಯಯುತವಾಗಿದ್ದರು. ಯುವ ಹಾಗೂ ಜನಪರ ನಾಯಕರಾಗಿದ್ದ ಅವರು ರೈತಪರ ಕಾಳಜಿಯ ವ್ಯಕ್ತಿಯಾಗಿದ್ದರು. ವಿಶೇಷವಾಗಿ ನೀರಾವರಿ ಸೌಲಭ್ಯ ವಿಸ್ತರಣೆಗೆ ಅತ್ಯಂತ ಕಳಕಳಿಯಿಂದ ಕೆಲಸ ಮಾಡಿದ್ದರು ಎಂದು ತಿಳಿಸಿದರು.
ಕುಟುಂಬದ ಒಡನಾಟ, ಅನೋನ್ಯತೆ ಮೆಲುಕು ಹಾಕಿದ ಮುಖ್ಯಮಂತ್ರಿಗಳು, ಮಾಮನಿಯವರ ತಂದೆ ನನಗೆ ಮಾರ್ಗದರ್ಶಕರಾಗಿದ್ದರು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅವರ ಕೆಲಸ ಸ್ಮರಣೀಯ.
ಧೀಮಂತ ನಾಯಕ, ರೈತನ ನೈಜ ಪ್ರತಿನಿಧಿಯನ್ನು ಕಳೆದುಕೊಂಡು ನಾಡು ಬಡವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.