ಬೆಂಗಳೂರು: ಎರಡು ಅಮೂಲ್ಯ ಜೀವಗಳ ಆತ್ಮಹತ್ಯೆಯ ಹಿನ್ನಲೆಯಲ್ಲಿ ಸತ್ಯ ಏನೆಂಬುದು ಬಹಿರಂಗವಾಗಲೇ ಬೇಕಿದೆ ಎಂದು ರಾಜ್ಯ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಕಾಂಗ್ರೆಸ್ ಸರ್ಕಾರದ ಭ್ರಷ್ಟ ವ್ಯೂಹಕ್ಕೆ ಸಿಲುಕಿದ ಅಧಿಕಾರಿಯೊಬ್ಬರ ಆತ್ಮಹತ್ಯೆಯ ಕರಿನೆರಳು ಅಚ್ಚೊತ್ತಿರುವ ಬೆನ್ನಲೇ KRDL ನಿಂದ ಬಿಲ್ ಪಾವತಿಯಾಗದೇ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನ ಗುತ್ತಿಗೆದಾರ ಪಿ.ಎಸ್.ಗೌಡರ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ, ಈ ಸರ್ಕಾರದಲ್ಲಿ ಏನಾಗುತ್ತಿದೆ ಎಂಬ ಆತಂಕ ಜನರಲ್ಲಿ ಮೂಡುತ್ತಿದೆ.
ಭಾಗ್ಯಗಳ ಸರ್ಕಾರ ಎಂದು ಬೊಬ್ಬೆ ಹೊಡೆಯುವ ಕರ್ನಾಟಕ ಸರಕಾರದ ಆಡಳಿತದಲ್ಲಿ ಅಮಾಯಕ ಹೆಣ್ಣುಮಕ್ಕಳಿಗೆ- ಕೊಲೆ ಭಾಗ್ಯ, ಪ್ರಮಾಣಿಕ ಅಧಿಕಾರಿಗಳಿಗೆ- ವರ್ಗಾವಣೆ ಭಾಗ್ಯ, ಅಸಹಾಯಕ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ -ಆತ್ಮಹತ್ಯೆ ಭಾಗ್ಯ ಕರುಣಿಸಲಾಗುತ್ತಿದೆ. ಬರಿದಾಗಿರುವ ಸರ್ಕಾರಿ ಖಜಾನೆ ಗುತ್ತಿಗೆದಾರರ ಪಾಲಿಗೆ ಆತ್ಮಹತ್ಯೆಯ ಬಾವಿಯಾಗುತ್ತಿದೆ. ಈ ಸರ್ಕಾರಕ್ಕೆ ಮಾನವ ಜೀವಗಳೆಂದರೆ ಅದು ಕೇವಲದ ಸಂಕೇತವಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಷ್ಟೂ ಕಾಲ ರಾಜ್ಯದ ಜನತೆ ‘ನಿತ್ಯ ದುರಂತ ಸುದ್ದಿ’ ಯನ್ನಷ್ಟೇ ತಿಳಿಯ ಬೇಕಿದೆ, ಇದು ಕರ್ನಾಟಕದ ಪರಮ ದೌರ್ಭಾಗ್ಯವಲ್ಲದೇ ಇನ್ನೇನೂ ಅಲ್ಲ. ಎರಡು ಅಮೂಲ್ಯ ಜೀವಗಳ ಆತ್ಮಹತ್ಯೆಯ ಹಿನ್ನಲೆಯಲ್ಲಿ ಸತ್ಯ ಏನೆಂಬುದು ಬಹಿರಂಗವಾಗಲೇ ಬೇಕಿದೆ, ಇದಕ್ಕೆ CBI ತನಿಖೆಯೊಂದೇ ಉಳಿದಿರುವ ಮಾರ್ಗವಾಗಿದೆ ಎಂದಿದ್ದಾರೆ.