ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅದರದೇ ಆದ ಮೌಲ್ಯ, ತೂಕವಿದೆ. ಗತ್ತು, ಗೈರತ್ತು ಮತ್ತು ಕಿಮ್ಮತ್ತು ಇದೆ. ಏಕೆಂದರೆ ದಾದಾಸಾಹೇಬ್ ಫಾಲ್ಕೆ ಅವರನ್ನು ಭಾರತೀಯ ಚಿತ್ರರಂಗದ ಪಿತಾಮಹ ಎಂದೇ ಪರಿಭಾವಿಸಲಾಗಿದೆ.
ಕಳೆದ ವರ್ಷ ಹಿರಿಯ ನಟಿ ಆಶಾ ಪಾರೇಖ್ ಅವರಿಗೆ ಈ ಪ್ರಶಸ್ತಿ ನೀಡಲಾಗಿತ್ತು. ಈ ಬಾರಿ ಮತ್ತೊಬ್ಬ ಹಿರಿಯ ಅಭಿನೇತ್ರಿ ವಹೀದಾ ರೆಹಮಾನ್ ಈ ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ. ಅಂದರೆ ಸತತ ಎರಡು ವರ್ಷ ಈ ಪ್ರಶಸ್ತಿ ಮಹಿಳೆಯರ ಪಾಲಾಗಿರುವುದು ವಿಶೇಷ.
ಈ ಪ್ರತಿಷ್ಠಿತ ಪ್ರಶಸ್ತಿಗೆ ವಹೀದಾ ರೆಹಮಾನ್ ಅತ್ಯಂತ ಸೂಕ್ತ ಆಯ್ಕೆ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಭಾರತೀಯ ಚಿತ್ರರಂಗದಲ್ಲಿ ಅವರು ಆರು ದಶಕಗಳ ಕಾಲ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಗಮನಾರ್ಹ ಕೊಡುಗೆ ನೀಡಿದ್ದಾರೆ.
ಈಗ ೮೫ರ ಇಳಿವಯಸ್ಸಿನಲ್ಲಿ ವಹೀದಾ ಇಂದಿನ ಪೀಳಿಗೆಯವರಿಗೆ ಅಷ್ಟೊಂದು ಪರಿಚಿತರಾಗಿಲ್ಲದಿರಬಹುದು. ಆದರೆ ಆ ಜಮಾನಾದಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಕಲಾರಸಿಕರ, ಸಿನಿಪ್ರಿಯರ ಮನಗೆದ್ದವರು. ಗೈಡ್, ಪ್ಯಾಸಾ, ಕಾಗಜ್ ಕೆ ಫೂಲ್, ಸಾಹಿಬ್ ಬೀಬೀ ಔರ್ ಗುಲಾಮ್, ಚೌಧವೀ ಕಾ ಚಾಂದ್ ಮೊದಲಾದ ಚಿತ್ರಗಳಲ್ಲಿ ನೆನಪಿನಲ್ಲಿ ಉಳಿಯುವಂಥ ಅಭಿನಯ ನೀಡಿದ್ದಾರೆ. ಹಲವು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ ಪದ್ಮಶ್ರೀ ಮತ್ತು ಪದ್ಮ ಭೂಷಣ ಪ್ರಶಸ್ತಿಗೂ ಪಾತ್ರರಾಗಿದ್ದಾರೆ ಎಂದರೆ ಚಿತ್ರರಂಗಕ್ಕೆ ವಹೀದಾ ಕೊಡುಗೆ ಎಷ್ಟೆಂಬುದನ್ನು ಊಹಿಸಬಹುದು.
೧೯೩೮ರಲ್ಲಿ ತಮಿಳುನಾಡಿನ ಚೆಂಗಲ್‌ಪೇಟ್‌ನಲ್ಲಿ ಜನಿಸಿದವರು. ತಂದೆ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಜಿಲ್ಲಾ ಕಮಿಷನರ್ ಆಗಿದ್ದವರು. ನಾಲ್ವರು ಹೆಣ್ಣುಮಕ್ಕಳಲ್ಲಿ ಕೊನೆಯವರು. ವಿಶಾಖಪಟ್ಟಣದಲ್ಲಿ ವಿದ್ಯಾಭ್ಯಾಸ ಕಲಿತರು. ವೈದ್ಯೆಯಾಗಬೇಕು ಎಂಬ ಆಸೆ ಇತ್ತು. ಆದರೆ ಆಕೆ ೧೩ ವರ್ಷದವಳಾಗಿದ್ದಾಗಲೇ ತಂದೆ ನಿಧನರಾದರು. ತಾಯಿಗೆ ಅನಾರೋಗ್ಯ. ಹೀಗಾಗಿ ಜೀವನೋಪಾಯಕ್ಕಾಗಿ ಏನಾದರೂ ಮಾಡಬೇಕಿತ್ತು. ಭರತನಾಟ್ಯ ಕಲಿತಿದ್ದರು. ನಾಟ್ಯ ಪ್ರದರ್ಶನಗಳ ಜೊತೆಗೆ ಚಿತ್ರಗಳಲ್ಲಿ ನಟನೆಗೆ ಅವಕಾಶ ಬಂದಾಗ ಒಪ್ಪಿಕೊಂಡರು. ತಮಿಳಿನ ಅಲಿಬಾಬಾ ೪೦ ತಿರುಡುಗಳುಮ್' ಮೂಲಕ ಚಿತ್ರರಂಗಕ್ಕೆ ಪದಾರ್ಪಣ. ಆದರೆ ತೆಲುಗಿನ ರೋಜುಲು ಮಾರಾಯಿ ಚಿತ್ರ ಮೊದಲು ಬಿಡುಗಡೆ ಆಯಿತು. ೧೯೫೦ ಮಧ್ಯಭಾಗದಲ್ಲಿ ದೇವಾನಂದ್ ಅವರ ಸಂಪರ್ಕಕ್ಕೆ ಬರುತ್ತಿದ್ದಂತೆ ಬಾಲಿವುಡ್‌ಗೆ ಪ್ರವೇಶ. ಸೋಲ್ವಾ ಸಾಲ್ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿದರು. ಬಳಿಕ ಗುರುದತ್ ಅವರ ಕಣ್ಣಿಗೆ ಬೀಳುತ್ತಿದ್ದಂತೆ ವಹೀದಾ ನಟನಾ ಚಾತುರ್ಯಕ್ಕೆ ಹೊಸ ಮಜಲು, ಆಯಾಮ ದೊರೆಯಿತು. ಸಿಐಡಿ ಚಿತ್ರದಲ್ಲಿ ಅವಕಾಶ ಕೊಟ್ಟರು. ಮಧುಬಾಲಾ, ಮೀನಾಕುಮಾರಿ, ಅವರಂತೆಯೇ ಸಿನಿಮಾದಲ್ಲಿ ಆಕರ್ಷಕ ಹೆಸರು ಇಟ್ಟುಕೊಳ್ಳುವಂತೆ ಗುರುದತ್ ನೀಡಿದ ಸಲಹೆಯನ್ನು ತಿರಸ್ಕರಿಸಿ ಅಂದಿನಿಂದ ಇಂದಿನವರೆಗೂ ಜನ್ಮನಾಮವನ್ನೇ ಇಟ್ಟುಕೊಂಡಿದ್ದಾರೆ. ಅನಂತರ ಪ್ಯಾಸಾ, ೧೨ ಓ ಕ್ಲಾಕ್, ಕಾಗಜ್ ಕೆ ಫೂಲ್, ಚೌಧವೀ ಕಾ ಚಾಂದ್- ಹೀಗೆ ಹಿಟ್ ಚಿತ್ರಗಳ ಪಟ್ಟಿ ಸಾಗುತ್ತದೆ. ಸಾಹಿಬ್ ಬೀಬಿ ಔರ್ ಗುಲಾಮ್ ಚಿತ್ರದಲ್ಲಿ ಪೋಷಕ ನಟಿಯ ಪಾತ್ರವಿದ್ದರೂ ವಹೀದಾ ಮೊದಲ ಫಿಲ್ಮ್ ಫೇರ್ ಪ್ರಶಸ್ತಿಗೆ ನಾಮಕರಣಗೊಂಡರು. ದತ್ ಜತೆಗಿನ ವೃತ್ತಿ ಬಾಂಧವ್ಯ ಕಾರಣಾಂತರಗಳಿಂದ ಕೊನೆಗೊಂಡ ಬಳಿಕ ಸತ್ಯಜಿತ್ ರೇ ಅವರ
ಅಬಿಜ್ಞಾನ್’ ಎಂಬ ಬಂಗಾಳಿ ಸಿನಿಮಾದಲ್ಲಿ ಅಭಿನಯಿಸಿದರು. ಬಳಿಕ ಏಕ್ ದಿಲ್ ಸೌ ಅಫ್ಸಾನೆ, ಮುಝೆ ಜೀನೇ ದೋ, ಕೋಹ್ರಾ, ಮಜಬೂರ್ ಮೊದಲಾದ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳು ದೊರೆತವು. ಬೀಸ್ ಸಾಲ್ ಬಾದ್ ಚಿತ್ರವಂತೂ ಆಗಿನ ಕಾಲದಲ್ಲಿ ಅತಿಹೆಚ್ಚು ಆದಾಯ ಗಳಿಸಿದ ಚಿತ್ರವೆನಿಸಿತ್ತು. ೧೯೬೪ ರ ವೇಳೆಗೆ ವಹೀದಾ ರೆಹಮಾನ್ ಅವರು ಅತಿಹೆಚ್ಚು ಸಂಭಾವನೆ ಪಡೆವ ನಟಿಯರಲ್ಲಿ ಒಬ್ಬರಾಗಿದ್ದರು.
ಅಂದಿನ ಕಾಲದ ಹೆಸರಾಂತ ನಟರಾದ ದಿಲೀಪ್‌ಕುಮಾರ್, ರಾಜೇಂದ್ರ ಕುಮಾರ್, ರಾಜ್‌ಕಪೂರ್, ರಾಜೇಶ್ ಖನ್ನಾ ಅವರೊಡನೆ ನಟಿಸುವ ಅವಕಾಶ ದೊರೆಯಿತು. ತೀಸ್ರಿ ಕಸಮ್ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರೆಯಿತು. ರಾಮ್ ಔರ್ ಶಾಮ್, ನೀಲ್ ಕಮಲ್, ಖಾಮೋಶ್ ಮೊದಲಾದ ಚಿತ್ರಗಳು ಬಹು ಜನಪ್ರಿಯವಾದವು.
ಆದರೆ ೧೯೬೫ ರಲ್ಲಿ ತೆರೆಕಂಡ ಗೈಡ್' ಚಿತ್ರವು ಅಂದಿನ ದಿನಮಾನದ ಅತಿ ವಿಭಿನ್ನ, ವಿನೂತನ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಆ ಚಿತ್ರದಲ್ಲಿ ವಹೀದಾ ನಿರ್ವಹಿಸಿದ
ರೋಸಿ’ ಪಾತ್ರವು ಮನೆಮಾತಾಗಿತ್ತು ಹಾಗೂ ಅತ್ಯಂತ ಮೆಚ್ಚುಗೆ ಪಡೆಯಿತು. ಈ ಚಿತ್ರದ ಅಭಿನಯಕ್ಕಾಗಿ ವಹೀದಾಗೆ ಅತ್ಯುತ್ತಮ ನಟಿ (ಫಿಲ್ಮ್ ಫೇರ್) ಪ್ರಶಸ್ತಿ ದೊರೆಯಿತು. ಹಾಗೆಯೇ ರೇಷ್ಮಾ ಔರ್ ಷೇರಾ ಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಗೌರವ.
೧೯೭೦ರ ಬಳಿಕ ವಿಭಿನ್ನ ಪಾತ್ರಗಳನ್ನು ಒಪ್ಪಿಕೊಳ್ಳತೊಡಗಿದರು. ಫಾಗುನ್‌ನಲ್ಲಿ ಜಯಾ ಬಾಧುರಿಯ ತಾಯಿಯಾಗಿ ಕಾಣಿಸಿಕೊಂಡರು. ಕಭೀ ಕಭೀ, ತ್ರಿಶೂಲ್, ನಸೀಬ್, ಧರಮ್ ಕಾಂಟಾ, ಚಾಂದನಿ, ಲಮ್ಹೆ ಮೊದಲಾದ ಚಿತ್ರಗಳಲ್ಲಿ ಕಣಿಸಿಕೊಂಡರು. ಅನಂತರ ೧೯೯೧ ರಿಂದೀಚೆಗೆ ಚಿತ್ರರಂಗದಿಂದ ದೂರ ಸರಿದಿದ್ದರೂ ಆಗಾಗ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ವಹೀದಾ ರೆಹಮಾನ್ ಅವರಿಗೆ ಬೆಂಗಳೂರಿನ ನಂಟಿರುವುದೂ ವಿಶೇಷ. ೧೯೭೪ರಲ್ಲಿ ಅವರು ಚಿತ್ರರಂಗದವರೇ ಆದ ಶಶಿ ರೇಖಿ (ಚಿತ್ರರಂಗದ ಹೆಸರು ಕಮಲ್‌ಜೀತ್) ಅವರನ್ನು ಮದುವೆಯಾದರು. ಆ ಬಳಿಕ ಬೆಂಗಳೂರಿನ ಫಾರ್ಮ್ ಹೌಸ್‌ನಲ್ಲಿ ವಾಸಿಸುತ್ತಿದ್ದರು. ಆದರೆ ೨೦೦೦ದಲ್ಲಿ ಪತಿಯ ನಿಧನಾನಂತರ ಮುಂಬೈಗೆ ವಾಪಸ್ ಹೋದರು.
ಚಿತ್ರನಟಿಯಾಗಿ ಸಾಕಷ್ಟು ಹಣ ಹೆಸರು ಮಾಡಿದ್ದರೂ ವಹೀದಾ ರೆಹಮಾನ್ ಅವರು ವಿವಾದ ಹಾಗೂ ಜನರ ಗಮನದಿಂದ ದೂರ. ಖಾಸಗಿ ಜೀವನವನ್ನು ಸಾಕಷ್ಟು ಖಾಸಗಿಯಾಗಿಯೇ ಜೀವಿಸಲು ಇಷ್ಟಪಡುವಂಥವರು. ಎಳ್ಳಷ್ಟೂ ಹಮ್ಮು ಬಿಮ್ಮು ಇಲ್ಲದವರು. ಪ್ರತಿಷ್ಠೆ, ಪ್ರಚಾರ ಒಲ್ಲದವರು. ತಾವಾಯಿತು, ತಮ್ಮ ಬದುಕಾಯಿತು ಎಂಬಂತೆ ಇದ್ದಾರೆ. ಹಾಗೆ ನೋಡಿದರೆ ವಹೀದಾ ಅವರಿಗೆ ಈ ಗೌರವ ಸಾಕಷ್ಟು ತಡವಾಗಿಯೇ ಬಂದಿದೆ. ಆದರೆ ಈ ಬಗ್ಗೆ ಅವರಿಗೇನೂ ಅಂಥ ಬೇಸರವಿಲ್ಲ. ಕೊನೆಗೂ ನನ್ನ ಕೆಲಸವನ್ನು ಗುರುತಿಸಿದ್ದಾರಲ್ಲ, ನನಗೆ ಅಷ್ಟೇ ಸಾಕು' ಎಂಬ ಉದಾರಭಾವ. ಬದ್ಧತೆ, ಸಮರ್ಪಣಾಭಾವ ಮತ್ತು ಪ್ರಾಮಾಣಿಕತೆಯಿಂದ ನಾವು ಕೆಲಸ ಮಾಡಬೇಕು. ಫಲ ಒಂದಲ್ಲ ಒಂದು ದಿನ ಸಿಕ್ಕೆ ಸಿಗುತ್ತದೆ ಎಂಬ ತತ್ತ್ವ ಅವರದು. ವಹೀದಾ ರೆಹಮಾನ್ ಎಂದರೆ ಈಗಲೂ ಥಟ್ಟನೆ ನೆನಪಿಗೆ ಬರುವುದು, ಜನ ಗುರುತಿಸುವುದು ಗೈಡ್ ಚಿತ್ರದಲ್ಲಿನ ಅವರ ಅಭಿನಯವನ್ನೇ. ಆರ್.ಕೆ.ನಾರಾಯಣ್ ಅವರ ಕಾದಂಬರಿ ಆಧಾರಿತ ಈ ಚಿತ್ರ ಆಗಿನ ಕಾಲದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಅತ್ಯಂತ ಪ್ರಗತಿಪರ ಕಥಾವಸ್ತುವನ್ನು ಒಳಗೊಂಡಿದ್ದ ಆ ಚಿತ್ರ ಎಲ್ಲ ದೃಷ್ಟಿಯಿಂದಲೂ ಪರಿಪೂರ್ಣ ಎನಿಸಿತ್ತು.
ಆಜ್ ಫಿರ್ ಜೀನೇ ಕಿ ತಮನ್ನಾ ಹೈ’ ಹಾಡಂತೂ ಸುಮಧುರ ಹಾಗೂ ಇಂದಿಗೂ ಎಲ್ಲರ ಮನದಲ್ಲಿ ಅಚ್ಚಳಿಯದೇ ಉಳಿಯುವಂತಿದೆ. ವಹೀದಾ ಕೂಡ ಇದು ತಮ್ಮ ಅತ್ಯಂತ ಅಚ್ಚುಮೆಚ್ಚಿನ ಚಿತ್ರ ಎಂದು ಹೇಳುತ್ತಾರೆ. ದೇವಾನಂದ್ ಅವರು ಬಹಳ ಆಸಕ್ತಿಯಿಂದ, ವಿಭಿನ್ನವಾಗಿ ಮತ್ತು ವಿಶೇಷವಾಗಿ ಈ ಚಿತ್ರ ನಿರ್ಮಿಸಿದ್ದಾರೆ ಎಂದು ಹೇಳುತ್ತಾರೆ.
ಅಂದ ಹಾಗೆ ದೇವಾನಂದ್ ಅವರ ಜನ್ಮಶತಾಬ್ದಿಯ ಸಂದರ್ಭದಲ್ಲೇ ತಮಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರಕಟವಾಗಿರುವುದು ಸಂತಸ ತಂದಿದೆ ಎನ್ನುತ್ತಾರೆ.
ಇದು ತಮಗೆ ಬಂದ ಪ್ರಶಸ್ತಿ ಅಲ್ಲ. ಬದಲಾಗಿ ಚಿತ್ರರಂಗದ ಪಯಣದಲ್ಲಿ ತಮಗೆ ನೆರವು, ಪ್ರೋತ್ಸಾಹ ನೀಡಿದ ಎಲ್ಲರಿಗೂ ಇದು ಸಲ್ಲುತ್ತದೆ ಎಂದು ಹೇಳುತ್ತಾರೆ.
ಇದಲ್ಲವೆ ವಿನಯ?
ವಹೀದಾಗೆ ಈ ಅತ್ಯುಚ್ಚ ಪ್ರಶಸ್ತಿ ಬಂದ ಸಂದರ್ಭದಲ್ಲಿ ‘ಆಜ್ ಫಿರ್ ಜೀನೇ ಕಿ ತಮನ್ನಾ ಹೈ’ ಗೀತೆ ಸ್ಮೃತಿಪಟಲದಲ್ಲಿ ಲಾಸ್ಯವಾಡುತ್ತದೆ.