ಆಗಿರುವುದೆಲ್ಲಾ ಒಳ್ಳೆಯದಕ್ಕೆ

Advertisement

ಒಂದು ದಿನ ಒಬ್ಬ ಸುಖಾತ್ಮ ಎಂಬ ರಾಜನು ಧರ್ಮಾತ್ಮನೆಂಬ ಮಂತ್ರಿಯಿಂದ ಕೂಡಿಕೊಂಡು ತುರ್ತು ಕಾರ್ಯಕ್ಕಾಗಿ ಹೊರಟನು. ಗೊಂಡಾರಣ್ಯದಲ್ಲಿ ಹೋಗಬೇಕಿತ್ತು. ಅವನೊಂದಿಗೆ ಬ್ರಾಹ್ಮಣ ಮಂತ್ರಿ. ದೇಹ ದಂಡಿಸಿ ಅಭ್ಯಾಸವಿತ್ತು. ಹೀಗೆ ನಡೆಯುತ್ತಿರುವಾಗ ಮಬ್ಬು ಕವಿದಿದ್ದರಿಂದ ರಾಜ ಎಡವಿ ಬಿದ್ದ. ಮಂತ್ರಿ ಹಿಡಿದೆತ್ತಿದ. ಆದರೆ ರಾಜನ ಕಿರುಬೆರಳೇ ಹೋಗಿತ್ತು. ನೆತ್ತರು ಸುರಿಯಹತ್ತಿತ್ತು. ಇದನ್ನು ಕಂಡ ಮಂತ್ರಿ ಶ್ರೀ ಹರಿಸೇವೆಗೆ ಸಾಧನ ಸಂಪತ್ತಾಯಿತು ಎಂದ. ಅದಕ್ಕೆ ರಾಜನಿಗೆ ನಖಶಿಖಾಂತ ಉರಿದು ಹೋಯಿತು. ತಾನು ನೋವು ಪಡುತ್ತಿದ್ದರೆ ಮಂತ್ರಿ ಹೀಗೆ ಹೇಳುತ್ತಾನಲ್ಲ ಎಂಬ ಸಿಟ್ಟು ಬಂತು. ಉಪಚರಿಸಲು ಹೋಗಲಿಲ್ಲ. ಹಾಗೇ ಸಾಗುವಾಗ ಎರಡು ದಾರಿ ಕಂಡು ಬಂದವು. ಒಂದು ಊರಿನ ಕಡೆಗೆ ಸಾಗುತ್ತಿತ್ತು. ಮತ್ತೊಂದು ಪಾಳುಬಾವಿಯೆಡೆಗೆ ಸಾಗುತ್ತಿತ್ತು. ಇದನ್ನು ತಿಳಿದಿದ್ದ ರಾಜ ಮಂತ್ರಿಯನ್ನು ಪಾಳು ಬಾವಿ ಇರುವ ರಸ್ತೆಯೆಡೆಗೆ ಕರೆದೊಯ್ದ. ಅಷ್ಟರಲ್ಲಿ ಬಾವಿ ಪಕ್ಕದಲ್ಲಿ ಬರುತ್ತಿದ್ದ ಹಾಗೇಯೇ ಮಂತ್ರಿಯನ್ನು ರಾಜ ನೂಕಿ ಬಿಟ್ಟು ಮುನ್ನಡೆದ.
ದೂರ ಬಂದ ಬಳಿಕ ವನವಾಸಿ ಬೇಡರು ಅಲ್ಲಿ ನಿಂತಿದ್ದರು. ವಾರ್ಷಿಕವಾಗಿ ದೇವಿಯ ಜಾತ್ರೆ. ನರನನ್ನು ಬಲಿಕೊಡುವ ಪದ್ಧತಿ ಇತ್ತು. ಇನ್ನೇನು ರಾಜನನ್ನು ಎಳೆದೊಯ್ದು ಕತ್ತು ಕುಯ್ಯಬೇಕು ಎಂಬ ಹಂತದಲ್ಲಿ ಅಲ್ಲಿಯೇ ಇದ್ದ ಒಬ್ಬ ಒಂದು ಸಾರಿಪರೀಕ್ಷಿಸಿ ಎಂದ. ಹಾಗೇ ಪರೀಕ್ಷಿಸುವಾಗ ಕಿರುಬೆರಳು ಕತ್ತರಿಸಿತ್ತು. ಊನರು ಬಲಿಗೆ ಯೋಗ್ಯವಲ್ಲವೆಂದು ಬಿಟ್ಟು ಬಿಟ್ಟರು. ರಾಜನ ಜೀವ ಉಳಿಯಿತು. ಮತ್ತೆ ಓಡಿ ಬಾವಿಯತ್ತ ಬಂದ. ಜೋತಾಡುತ್ತಿದ್ದ ಮಂತ್ರಿಯನ್ನು ಮೇಲೆತ್ತಿ ಕ್ಷಮೆ ಬೇಡಿದ. ಆಗಲೂ ಆ ಬ್ರಾಹ್ಮಣ ಮಂತ್ರಿ ಆದದ್ದು ಒಳಿತಾಯಿತು. ನಿಮ್ಮಿಂದ ಉಪಕಾರವಾಯಿತು. ಎಂದ ಇಬ್ಬರ ಜೀವ ಉಳಿಯಿತು ಎಂದ. ಗಾಬರಿಯಾದ ರಾಜ ಕೇಳಿದ ನನಗೇನೋ ಒಳ್ಳೆಯದು ನಿನಗೆ ಹೇಗೆ. ಎಂದ ಅದಕ್ಕೆ ಮಂತ್ರಿ ಹೇಳಿದ. ಬೆರಳು ತುಂಡಾದ ನಿನ್ನ ಜೀವ ಉಳಿಯಿತು. ಎಲ್ಲವೂ ಸರಿಯಿದ್ದ ನನ್ನ ತಲೆಯೇ ಹೋಗುತ್ತಿತ್ತಲ್ಲವೇ. ಬಾವಿಗೆ ನೂಕಿದ್ದೇ ಒಳ್ಳೆಯದು ಎಂದ. ನಮ್ಮ ಬದುಕಿನಲ್ಲಿ ಬರುವ ಸುಖದುಃಖಗಳಿಗೆ ಅತಿಯಾಗಿ ಚಿಂತಿಸಬೇಕಾಗಿಲ್ಲ, ಕರುಣಾಸಾಗರನಾದ ಶ್ರೀಹರಿ ತನ್ನ ಭಕ್ತರನ್ನು ಎಂದೂ ಘಾಸಿಪಡಿಸಲಾರ. ದುಃಖ ಒದಗಿದಾಗ ಮುಂದಕ್ಕೇನೋ ಒಳ್ಳೆಯದಕ್ಕಾಗಿ ನೀಡಿದ್ದಾನೆ ಎಂದೇ ಭಾವಿಸಿ ಅದು ಸತ್ಯವಾಗುತ್ತದೆ. ದೇವರು ನೀಡುವ ಈ ಸುಖದಲ್ಲಿ ಹಿಗ್ಗದೆ, ದುಃಖದಲ್ಲಿ ಕುಗ್ಗದೆ, ಅವನ ಪರೀಕ್ಷೆಯಲ್ಲಿ ತೇರ್ಗಡೆಯಾದಲ್ಲಿ ಸಂಸಾರದ ಕಡಲಿನ ದಡ ಮುಟ್ಟಬಹುದು.