ಆಂಬ್ಯುಲೆನ್ಸ್ ಸಿಬ್ಬಂದಿಗೆ ೧೦೮ ತಾಪತ್ರಯ

Advertisement

ಶ್ರೀಕಾಂತ ಸರಗಣಾಚಾರಿ
ಕುಷ್ಟಗಿ: ರಾಜ್ಯದ ೩,೫೦೦ ಆಂಬ್ಯುಲೆನ್ಸ್ ಸಿಬ್ಬಂದಿಗೆ ನಾಲ್ಕು ತಿಂಗಳಿಂದ ವೇತನ ಬಂದಿಲ್ಲ. ರಾಜ್ಯಾದ್ಯಂತ ೭೫೦ಕ್ಕೂ ಹೆಚ್ಚು ೧೦೮ ವಾಹನಗಳಿವೆ. ಅದರಲ್ಲಿ ೫೦ ವಾಹನ ದುರಸ್ತಿಗೆ ಬಂದಿವೆ. ಇಎಂಟಿ ಹಾಗೂ ಪೈಲಟ್ ಸೇರಿ ೩,೫೦೦ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿದ ವೇತನವಾಗದೇ ಪರಿತಪಿಸುತ್ತಿದ್ದಾರೆ.
ನಮಗೂ ವೃದ್ಧ ತಂದೆ, ತಾಯಿಯರಿದ್ದಾರೆ. ಶಾಲೆಗೆ ಹೋಗುವ ಮಕ್ಕಳಿದ್ದಾರೆ. ನಾಲ್ಕು ತಿಂಗಳಿಂದ ವೇತನವಾಗಿಲ್ಲ. ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ ಎಂದು ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಿದ್ದಾರೆ. ವೇತನ ವಿಳಂಬದ ಕುರಿತು ಈಗಾಗಲೇ ಸಿಬ್ಬಂದಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರಿ ಮಟ್ಟದಲ್ಲಿ ಅನುದಾನ ಬಿಡುಗಡೆಯಾಗಿಲ್ಲ, ಬಿಡುಗಡೆ ನಂತರ ಬಾಕಿ ವೇತನ ಪಾವತಿಸುವುದಾಗಿ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಹೀಗೇ ಮುಂದುವರೆದರೆ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರ ಹಾಗೂ ಜಿವಿಕೆ ಸಂಸ್ಥೆಯ ಒಡಂಬಡಿಕೆ ಪ್ರಕಾರ ಶೇ. ೧೫ ವಾರ್ಷಿಕ ವೇತನ ಪರಿಷ್ಕರಣೆಯಾಗಿಲ್ಲ. ಕನಿಷ್ಠ ೩೬,೦೦೮ ರೂ.ಗೆ ನಿಗದಿಯಾಗಿದ್ದ ವೇತನದಲ್ಲಿ ೬ ತಿಂಗಳ ಬಳಿಕ ಏಕಾಏಕಿ ೬ ಸಾವಿರ ರೂ. ಕಡಿಮೆ ಮಾಡಿ ೩೦ ಸಾವಿರ ರೂ. ವೇತನ ಪಾವತಿ ಮಾಡುತ್ತಿದ್ದಾರೆ. ಪ್ರಸ್ತುತ ವೇತನದಲ್ಲಿ ಮತ್ತೆ ಕಡಿಮೆ ಮಾಡುವ ಮಾಹಿತಿ ಆತಂಕ ಸೃಷ್ಟಿಸಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.