ವಿರೋಧ ಪಕ್ಷದವರು ಯಾರನ್ನೂ ಸಮಾಧಿ ಮಾಡುವುದಿಲ್ಲ; ರಾಜಕೀಯವಾಗಿ ವಿರೋಧ ಮಾತ್ರ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು: ವಿರೋಧ ಪಕ್ಷದವರು ಯಾರನ್ನೂ ಸಮಾಧಿ ಮಾಡುವುದಿಲ್ಲ ಪ್ರಧಾನಿಗಳನ್ನು ರಾಜಕೀಯವಾಗಿ ವಿರೋಧ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿನ್ನೆ ವಿರೋಧಪಕ್ಷಗಳು ನನ್ನನ್ನು ಸಮಾಧಿ ಮಾಡಲು ಹೊರಟಿವೆ. ನೀವು ನನ್ನನ್ನು ಕಾಪಾಡಬೇಕು ಎಂದು ಜನತೆಯಲ್ಲಿ ಮಾಡಿರುವ ಮನವಿಗೆ ಪ್ರತಿಕ್ರಿಯೆ ನೀಡಿದ ಅವರು ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
ನರೇಂದ್ರ ಮೋದಿ ಹತ್ತು ವರ್ಷ ಪ್ರಧಾನಿಗಳಾಗಿ ಬಡವರ ಪರವಾಗಿ ಏನೂ ಮಾಡಿಲ್ಲ ಎನ್ನುವುದು ಹಾಗು ಸುಳ್ಳಿನ ಸರದಾರ ಎನ್ನುವುದು ನಮ್ಮ ಆರೋಪ. ಜನರಿಗೆ ನೀಡಿದ್ದ ಯಾವ ಯಾವ ಭರವಸೆಗಳನ್ನು ಈಡೇರಿಸಿಲ್ಲ. ರಾಜಕೀಯವಾಗಿ ಅವರನ್ನು ಸೋಲಿಸಬೇಕೆನ್ನುವುದು ವಿರೋಧ ಪಕ್ಷಗಳ ಗುರಿ. ಏಕೆಂದರೆ ಈ ದೇಶ ಆರ್ಥಿಕ ಹಾಗೂ ಬಡವರ ಅಭಿವೃದ್ಧಿ ಆಗಿಲ್ಲ ಎಂದರು.
ಮೇಲಕ್ಕೇರಿದವರು ಕೆಳಕ್ಕೆ ಇಳಿಯಲೇಬೇಕು : ಪ್ರಧಾನಿಗಳು ಸೋಲುತ್ತೇವೆಂದು ಹತಾಶರಾಗಿ ಈ ರೀತಿ ಮಾತನಾಡು ತ್ತಿದ್ದಾರೆ. ಅವರ ಭಾವನಾತ್ಮಕ ಆಟ ಜನರಿಗೆ ಗೊತ್ತಾಗಿದೆ. ಅವರು ಸುಳ್ಳು ಹೇಳುವುದು, ಭಾವನಾತ್ಮಕವಾಗಿ ಶೋಷಣೆ ಮಾಡುವುದು ಜನರಿಗೆ ಗೊತ್ತಾಗಿದೆ. ಜನರಿಗೆ ಗೊತ್ತಾದ ಮೇಲೆ ಪುನ: ಅದೇ ತಪ್ಪನ್ನು ಮಾಡುವುದಿಲ್ಲ. ಮೇಲಕ್ಕೇರಿದವರು ಕೆಳಕ್ಕೆ ಇಳಿಯಲೇಬೇಕು ಎಂದರು.
ನೈತಿಕ ಹಕ್ಕಿಲ್ಲ : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದಲ್ಲಿ ಬರಗಾಲ ಇರುವುದರಿಂದ ರೈತರ ಸಾಲ ಮನ್ನಾ ಮಾಡಬೇಕು ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ಹಿಂದೆ ಸಾಲ ಮನ್ನಾ ಮಾಡಿ ಎಂದಾಗ ನಮ್ಮ ಬಳಿ ಪ್ರಿಂಟಿಂಗ್ ಮಶೀನ್ ಇಲ್ಲ ಎಂದಿದ್ದರು. ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.