ಬೆಳಗಾವಿ: ಬಿಜೆಪಿಯ ಆಡಳಿತ ವೈಫಲ್ಯವನ್ನು ಋಜುವಾತು ಮಾಡಲು ಕೋವಿಡ್ ಹಗರಣವೊಂದೇ ಸಾಕು ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಗಳಲ್ಲಿ ಮತ್ತೆ ಹಳೆಯ ವಿಷಯಗಳೇ ಪ್ರಸ್ತಾಪವಾಗಿವೆ ಹೊರತು ಯಾವುದೂ ಹೊಸತನವಿಲ್ಲ. ಮತ್ತೆ ಅದೇ ಸುಳ್ಳುಗಳು, ಭಾವನೆಗಳ ಮೇಲೆ ರಾಜಕೀಯ ಮಾಡುವ ಯತ್ನ ಮಾಡಲಾಗಿದೆ. ಬಿಜೆಪಿಯ ಆಡಳಿತ ವೈಫಲ್ಯವನ್ನು ಋಜುವಾತು ಮಾಡಲು ಕೋವಿಡ್ ಹಗರಣವೊಂದೇ ಸಾಕು. 20 ಲಕ್ಷ ಕೋಟಿ ಪರಿಹಾರ ನೀಡುವುದಾಗಿ ಬಿಜೆಪಿ ಸರ್ಕಾರ ಘೋಷಿಸಿತ್ತು, ಅದರ ಲೆಕ್ಕ ಕೊಡಲಿ. ಯಾರಿಗೆ ಎಷ್ಟು ಹಣ ಹೋಗಿದೆ ಎಂದು ಬಹಿರಂಗಪಡಿಸಲಿ. ಬಿಜೆಪಿ ಭರವಸೆ ನೀಡಿದಂತೆ ವರ್ಷಕ್ಕೆ 2 ಕೋಟಿ ಉದ್ಯೋಗವೂ ಸೃಷ್ಟಿಯಾಗಲಿಲ್ಲ. ರೈತರ ಆದಾಯ ಡಬಲ್ ಕೂಡ ಆಗಲಿಲ್ಲ ಎಂದು ತಿಳಿಸಿದೆ. ಇನ್ನು ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ‘ಕುಮಾರಸ್ವಾಮಿ ಹೇಗಿದ್ದರೂ ಎಂಪಿಯಾಗುವುದಿಲ್ಲ. ಅವರು ಹೆದರಿ ಪಕ್ಕದ ಜಿಲ್ಲೆಗೆ ಹೋಗಿದ್ದಾರೆ. ಚರ್ಚೆ ಮಾಡಲು ಸದನಕ್ಕೆ ಬರಲಿʼ ಎಂದು ಸವಾಲು ಹಾಕಿದ್ದಾರೆ.