ಪಣಜಿ: ಗೋವಾದಲ್ಲಿ ಸಿನೆಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆಂದು ಆಗಮಿಸಿದ್ದ ಕನ್ನಡದ ಸುಮಾರು ೩೦ಕ್ಕೂ ಹೆಚ್ಚು ನಟ ನಟಿಯರಿಗೆ ಪ್ರಶಸ್ತಿಯನ್ನೂ ನೀಡದೆ ಅವಮಾನ ಮಾಡಿ ಕಳುಹಿಸಿದ ಘಟನೆ ನಡೆದಿದೆ.
ಗೋವಾ ರಾಜಧಾನಿ ಪಣಜಿ ಸಮೀಪದ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಸಂತೋಷಂ ಅವಾರ್ಡ್ ಸಮಾರಂಭಕ್ಕೆ ಕನ್ನಡದ ಹಲವು ನಟ-ನಟಿಯರು ಗೋವಾಕ್ಕೆ ಆಗಮಿಸಿದ್ದರು. ಗೋವಾಕ್ಕೆ ಬಂದ ಕನ್ನಡದ ನಟ ನಟಿಯರಿಗೆ ಸರಿಯಾದ ವ್ಯವಸ್ಥೆ ಮಾಡಿರಲಿಲ್ಲ. ಹೋಟೆಲ್ ಬುಕಿಂಗ್ ಆಗಿರಲಿಲ್ಲ. ಕನ್ನಡ ಚಿಂತ್ರರಂಗದವರನ್ನು ಸ್ವಾಗತಿಸುವವರೂ ಯಾರೂ ಇರಲಿಲ್ಲ. ಈ ಅವ್ಯವಸ್ಥೆಗಳಿಂದ ಬೇಸತ್ತ ಕನ್ನಡದ ಚಿತ್ರರಂಗದ ತಾರೆಯರು ಈ ಕಾರ್ಯಕ್ರಮದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ರಮೇಶ್ ಅರವಿಂದ, ಸಪ್ತಮಿ ಗೌಡ, ರಾಜವರ್ಧನ್, ಬಿ.ಸುರೇಶ್, ಶೈಲಜಾ ನಾಗ್ ಸೇರಿದಂತೆ ಸುಮಾರು ೩೦ ಜನ ಕನ್ನಡ ಚಲನಚಿತ್ರ ರಂಗದ ನಟ ನಟಿಯರು ಕಾರ್ಯಕ್ರಮಕ್ಕೆ ಗೋವಾಕ್ಕೆ ಆಗಮಿಸಿದ್ದರು. ಆದರೆ ಅವರನ್ನು ಸೂಕ್ತವಾಗಿ ನಡೆಸಿಕೊಳ್ಳಲಿಲ್ಲ, ಭರವಸೆ ನೀಡಿದಂತೆ ಆಯೋಜಕರು ಸರಿಯಾದ ವ್ಯವಸ್ಥೆಯನ್ನೂ ಮಾಡಿಲ್ಲ. ಕ್ರಾಂತಿ ಸಿನೆಮಾಕ್ಕೆ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ವೇದಿಕೆಯ ಮೇಲೆ ಪವರ್ ಕಟ್ ಆದ ಘಟನೆಯೂ ನಡೆದಿದೆ. ನಂತರ ಕನ್ನಡ ಚಿತ್ರರಂಗದ ನಟ ನಟಿಯರು ಕಾರ್ಯಕ್ರಮವನ್ನು ಬಹಿಷ್ಕರಿಸಿ ಅರ್ಧಕ್ಕೇ ಬಿಟ್ಟು ಹೊರ ಬಂದ ಘಟನೆ ಕೂಡ ನಡೆದಿದೆ.