ನ್ಯತೆಯ ವಿನಮ್ರ ವಿನಂತಿಯ ಭಾಷೆ ಅರ್ಥವಾಗದ ಬ್ರಿಟಿಷರೊಂದಿಗೆ ನಡೆಸುವ ಶಾಂತಿಸಂಧಾನ ಮೂರ್ಖತನದ ಪರಮಾವಧಿ. ರಕ್ತ ಹರಿಸಿ ಹೌತಾತ್ಮ್ಯದಿಂದಗಳಿಸುವ ಸ್ವಾತಂತ್ರ್ಯದ ಮೇಲೆ ಸ್ವಾವಲಂಬಿ ಭಾರತ ಮೂಡಬೇಕು. ಮಣ್ಣುಪಾಲಾಗುವ ನನ್ನ ದೇಹದಿಂದಲೂ ಭಾರತವಿಜಯದ ಸುವಾಸನೆ ಹೊರಹೊಮ್ಮುವುದು. ಸುಟ್ಟರೆ ಬೂದಿಯಾಗಿ ಗಾಳಿಯಲ್ಲಿ, ಹೂತರೆ ಮಣ್ಣಲ್ಲಿ, ನೀರಿಗೆಸೆದರೆ ಜಲಕಣಕಣದಲ್ಲಿ ಆವಿರ್ಭವಿಸುವೆ’ ಎಂಬ ಪ್ರಖರನುಡಿಯಿಂದ ದೇಶವಾಸಿಗಳನ್ನು ಪ್ರೇರೇಪಿಸಿದ ಕ್ರಾಂತಿಕಿಡಿ ಭಗತ್ ಸಿಂಗ್ ವಿಶ್ವದ ಅಸಾಮಾನ್ಯ ಸಾಹಸಿಗಳಲ್ಲಿ ಅಗ್ರಸ್ಥಾನಿ. ಆರ್ಯಸಮಾಜದ ಮುಂದಾಳು ಅರ್ಜುನ್ ಸಿಂಗರ ಮೊಮ್ಮಗನಾಗಿ, ದೇಶಭಕ್ತ ಕಿಶನ್ ಸಿಂಗ್ – ವಿದ್ಯಾವತಿಯರ ಭಾಗ್ಯವಂತ ಕುಲೋದ್ಧಾರಕನಾಗಿ ೧೯೦೭ರ ಸೆಪ್ಟೆಂಬರ್ ಇಪ್ಪತ್ತೆಂಟರಂದು ಪಂಜಾಬಿನಲ್ಲಿ ಜನಿಸಿದ ಭಗತ್ ಬೆಳೆದದ್ದು ಕ್ರಾಂತಿವೀರರ ಕಥಾಪಾನದಿಂದ. ಉಜ್ವಲ ರಾಷ್ಟ್ರೀಯತೆಯ ಪರಿಸರದಲ್ಲಿ ತನ್ನ ಭವಿತವ್ಯವನ್ನು ರೂಪಿಸುತ್ತಿ ಬಾಲಕ, ಆಂಗ್ಲರನ್ನು ದೇಶದಿಂದ ಒದ್ದೋಡಿಸುವ ನಿಟ್ಟಿನಲ್ಲಿ ಬಂದೂಕುಗಳನ್ನು ಬೆಳೆಯಲು ನಿರ್ಧರಿಸಿದ. ಮೀಸೆ ಮೂಡುವ ಮೊದಲೇ ಹುತಾತ್ಮನಾದ ಕರ್ತಾರ ಸಿಂಗ್ ಸರಾಭಾನ ಬಲಿದಾನ, ಜಲಿಯನ್ವಾಲಾಬಾಗ್ ಹತ್ಯಾಕಾಂಡದ ಮೋಸ ಬಾಲಕ ಭಗತನಲ್ಲಿ ನೋವು, ಸ್ವಾಭಿಮಾನ, ರೋಷ, ಪ್ರತೀಕಾರದ ಭಾವನೆಯನ್ನು ಹುಟ್ಟುಹಾಕಿತು. ತೊಟ್ಟಿಕ್ಕುವ ರಕ್ತದ ಬಿಂದುಬಿಂದುವಿನ ಮೇಲೆ ಪ್ರಮಾಣಗೈದು ಆ ವೀರಭೂಮಿಯ ಮಣ್ಣನ್ನೇ ನಿತ್ಯವೂ ಪೂಜಿಸಿ, ಲಂಡನ್ನ ಗದ್ದುಗೆಬಗೆಯುವ ನರಸಿಂಹತ್ವದತ್ತ ಹೆಜ್ಜೆ ಹಾಕಿದರು. ಗಾಂಧೀಜಿ ನೇತೃತ್ವದ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ ಭಗತ್ ಬಹುಬೇಗ ನಿರಾಶರಾದರು. ಚೌರಿಚೌರಾದ ಘಟನೆಯನ್ನು ನೆಪವಾಗಿಟ್ಟು ಹೋರಾಟವನ್ನೇ ಕೈಬಿಟ್ಟ ಅಂಜು ಬುರುಕುತನದಿಂದ ಬೇಸರಗೊಂಡು, ಶಿಕ್ಷಣ ಮುಂದುವರೆಸಲು ತೀರ್ಮಾ ನಿಸಿದರು. ಮದುವೆಯ ಪ್ರಸ್ತಾಪವಾಗುತ್ತಿಂತೆ ಕಾನ್ಪುರಕ್ಕೆ ತೆರಳಿ ಗಣೇಶ ಶಂಕರ ವಿದ್ಯಾರ್ಥಿ ನಡೆಸುತ್ತಿ ಪ್ರತಾಪ' ಪತ್ರಿಕಾ ಕಚೇರಿಯಲ್ಲುಳಿದು ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿದರು. ಸಹಪಾಠಿಗಳನ್ನು ದೇಶಭಕ್ತಿಯ ಹೆದ್ದೆರೆಗೆ ಆಕರ್ಷಿಸುವ ನಿಟ್ಟಿನಲ್ಲಿ
ನೌಜವಾನ್ ಭಾರತ್ ಸಭಾ’ವನ್ನು ಸ್ಥಾಪಿಸಿ, ಕ್ರಾಂತಿಕಾರರ ಭಗವದ್ಗೀತೆ ಸಾವರ್ಕರರ ಸ್ವಾತಂತ್ರ್ಯ ಸಮರದ ಕೃತಿಯನ್ನು ಹಾಗೂ ಧಿಂಗ್ರಾನ ಸಾಹಸಕೃತ್ಯವನ್ನು ಜೊತೆಗಾರರಿಗೆ ವರ್ಣಿಸಿದರು. ದೇಶದೆಲ್ಲೆಡೆ ವೈಯಕ್ತಿಕವಾಗಿ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡುವ ಕ್ರಾಂತಿಕಾರರ ಸಂಘಟನೆಗಾಗಿ ರಾಮಪ್ರಸಾದ ಬಿಸ್ಮಿಲ್ ಆರಂಭಿಸಿದ ಹಿಂದುಸ್ಥಾನ ಪ್ರಜಾತಂತ್ರ ಸೇನೆಯ ಪರಿಚಯವಾಗಿ ಚಂದ್ರಶೇಖರ ಆಜಾದ್ ಸಖ್ಯವೂ ದೊರೆಯಿತು.
ಸಂಸ್ಕೃತದ ಬಗ್ಗೆ ಅಪಾರ ಅಭಿಮಾನವಿ ಭಗತ್ ಸಿಂಗ್ ಪುರಾಣದ ಸ್ಫೂರ್ತಿದಾಯಕ ಘಟನೆಗಳನ್ನು ಉಲ್ಲೇಖಿಸಿ ಗೊಂದಲದಲ್ಲಿರುವ ಸ್ನೇಹಿತರಿಗೆ ಗುರಿತೋರಿದರು. ಕೆಂಪಂಗಿಗಳ ಆಕ್ರಮಣವನ್ನು ಸಂಘರ್ಷದಿಂದ ಎದುರಿಸುವುದು ತಪ್ಪೆಂದರೆ ಶ್ರೀಕೃಷ್ಣ ಕಂಸನನ್ನು ವಧಿಸಿದ್ದೂ ತಪ್ಪು' ಎಂಬ ಚೈತನ್ಯಪೂರ್ಣ ಮಾತು ಅವರ ರಾಷ್ಟ್ರನಿಷ್ಠೆಗೆ ಸಾಕ್ಷಿ. ಸೈಮನ್ ಆಯೋಗದ ವಿರುದ್ಧ ನಡೆದ ಶಾಂತಿಯುತ ಪ್ರತಿಭಟನೆಯ ನಾಯಕತ್ವ ವಹಿಸಿ ಲಾಲಾ ಲಜಪತರಾಯರು ಪೋಲೀಸರ ಪೈಶಾಚಿಕ ಆಕ್ರಮಣಕ್ಕೆ ಬಲಿಯಾದರು. ಕೈಕಟ್ಟಿ ಕೂತ ಕಾಂಗ್ರೆಸ್ ಧೋರಣೆಯನ್ನು ಖಂಡಿಸಿ ಪ್ರತೀಕಾರಕ್ಕೆ ಸಿದ್ಧರಾದ ಭಗತ್ ಸಿಂಗ್, ಜೊತೆಗಾರ ರಾಜಗುರುವಿನೊಂದಿಗೆ ಸೇರಿ ಸ್ಯಾಂಡರ್ಸ್ ಹತ್ಯೆಗೈದರು. ಪೋಲೀಸರ ಕಣ್ತಪ್ಪಿಸಿ ಓಡಾಡಿ ಭೂಗತರಾಗಿ ಶಸ್ತ್ರಾಸ್ತ್ರ ಸಂಗ್ರಹ, ಬಾಂಬ್ ತಯಾರಿಯಲ್ಲಿ ತೊಡಗಿ ಬಲಿದಾನಕ್ಕೆ ವೇದಿಕೆ ಸಿದ್ಧಗೊಳಿಸಿದರು. ಕ್ರಾಂತಿಯ ಉದ್ದೇಶ ರಕ್ತಪಾತವಲ್ಲ, ಶಕ್ತಿಶಾಲಿ ರಾಷ್ಟ್ರನಿರ್ಮಿತಿಗೆ ಸೋಪಾನವೆಂಬುದನ್ನು ಯುವಕರಿಗೆ ತಿಳಿಯಪಡಿಸುವ ಉದ್ದೇಶದಿಂದ ಬಟುಕೇಶ್ವರ ದತ್ತರೊಡಗೂಡಿ ಬ್ರಿಟಿಷ್ ಶಾಸನಸಭೆಯ ಮೇಲೆ ಬಾಂಬೆಸೆದು ಸ್ವಯಂ ಬಂಧನಕ್ಕೊಳಗಾದರು. ವಿಚಾರಣೆಯ ವೇಳೆ ನೀಡಿದ ಹೇಳಿಕೆಗಳು ಲಕ್ಷಾಂತರ ಯುವಕರ ಮನದಲ್ಲಿ ಕ್ರಾಂತಿಜ್ವಾಲೆಯುರಿಸಿತು. ಭಗತ್ ಸಿಂಗ್ ಜನಪ್ರಿಯತೆಯಿಂದ ಹತಾಶರಾದ ಕಾಂಗ್ರೆಸಿಗರು ತುಟಿಪಿಟಿಕ್ ಎನ್ನದೆ ಗಾಂಧಿ - ಇರ್ವಿನ್ ಒಪ್ಪಂದಕ್ಕೆ ಸಹಿ ಹಾಕಿದರು. ಕ್ರಾಂತಿ ಚಿರಾಯುವಾಗಲೆಂಬ ಘೋಷದೊಂದಿಗೆ ರಾಜಗುರು, ಸುಖದೇವರೊಡನೆ ೧೯೩೧ರ ಮಾರ್ಚ್ ಇಪ್ಪತ್ಮೂರರಂದು ನೇಣಿನ ಕುಣಿಕೆಗೆ ಕೊರಳೊಡ್ಡಿದ ಮಹಾವೀರ ಭಗತ್ ಸಿಂಗ್ ಯುವಜನರ ಆದರ್ಶ. ನಾಡಿನ ನಾಳೆಗಳಿಗಾಗಿ ಬದುಕನರ್ಪಿಸಿದ ಮಹಾತ್ಮನ ತ್ಯಾಗ ವ್ಯರ್ಥವಾದರೆ ದೇಶಕ್ಕದು ನಷ್ಟ. ಅದನ್ನರಿತು ಹೆಜ್ಜೆ ಹಾಕಿದ ಪುಣ್ಯಾತ್ಮರ ಕಥೆ ರೋಚಕ. ಭಾರತವೆಂದರೆ ಬೆಟ್ಟ, ಕಲ್ಲು, ಗುಡ್ಡಗಳ ಭೂಭಾಗವಲ್ಲ. ಅವಿನಾಶಿ ಸಂಸ್ಕೃತಿಯ ರಾಷ್ಟ್ರವನ್ನು ದೇವರೆಂದು ಪೂಜಿಸಿ ಭಾರತಮಾತಾ ಮಂದಿರವನ್ನು ಸ್ಥಾಪಿಸಿದ ಸ್ವಾಮಿ ಸತ್ಯಮಿತ್ರಾನಂದರು ಅಭಿನವ ಅಂಗೀರಸರೆಂದರೆ ಅತಿಶಯೋಕ್ತಿಯಲ್ಲ. ಉತ್ತರಪ್ರದೇಶದ ಅಧ್ಯಾಪಕ ಶಿವಶಂಕರ ಪಾಂಡೆ - ತ್ರಿವೇಣಿದೇವಿ ದಂಪತಿಗಳ ದೇವೀ ಹರಕೆಯಿಂದ ೧೯೩೨ರ ಸೆಪ್ಟೆಂಬರ್ ಇಪ್ಪತ್ತೊಂಭತ್ತರಂದು ಜನಿಸಿದ ಅಂಬಿಕಾ ಪ್ರಸಾದ ಅಜ್ಜ-ಅಜ್ಜಿಯ ಮಡಿಲಲ್ಲಿ ಬೆಳೆದ ತೇಜಸ್ವಿ ಬಾಲಕ. ಸತ್ಸಂಗ, ಪ್ರಾರ್ಥನೆ, ಶ್ಲೋಕೋಚ್ಚಾರಗಳ ಅಭ್ಯಾಸದಿಂದ ಆಧ್ಯಾತ್ಮದ ಸೆಳೆತಕ್ಕೆ ಒಳಗಾದ ಬಾಲವಟು ಹಿಂದಿ ಮತ್ತು ಸಂಸ್ಕೃತ ಅಧ್ಯಯನಗೈದು ಆಧುನಿಕ ಶಿಕ್ಷöಣದ ಜೊತೆಗೆ ವೇದಶಾಸ್ತ್ರಗಳ ಪಾಠಪ್ರವಚನವೂ ನಿರಾತಂಕವಾಗಿ ನಡೆಯಿತು. ಹಿಂದಿ ಸಾಹಿತ್ಯರತ್ನ, ಸಂಸ್ಕೃತದಲ್ಲಿ ಸ್ನಾತಕ ಪದವಿಪಡೆದ ಬಳಿಕ ಸಂನ್ಯಾಸ ಸ್ವೀಕರಿಸಿದ ಅಂಬಿಕಾ ಪ್ರಸಾದರು ಸ್ವಾಮಿ ವೇದವ್ಯಾಸಾನಂದರ ಮಾರ್ಗದರ್ಶನದಲ್ಲಿ ಸ್ವಾಮಿ ಸತ್ಯಮಿತ್ರಾನಂದರೆಂದು ನಾಮಾಂಕಿತರಾದರು. ಶಾಸ್ತ್ರಾಧ್ಯಯನ ನಿಲ್ಲಿಸದೆ, ಪರಂಪರಾಗತ ಶಿಕ್ಷಾವ್ಯವಸ್ಥೆಯಲ್ಲಿ ತೊಡಗಿಸಿಕೊಂಡು ಎಳೆಯ ವಯಸ್ಸಿನಲ್ಲೇ ಅಪಾರಜ್ಞಾನ, ಕೀರ್ತಿಮನ್ನಣೆ ಸಂಪಾದಿಸಿದ ಸ್ವಾಮೀಜಿ ಭಕ್ತವರ್ಗ - ಶಿಷ್ಯವರ್ಗಗಳ ಪ್ರೀತಿಗೆ ಪಾತ್ರರಾದರು. ಪ್ರಸಿದ್ಧ ಜ್ಯೋತಿರ್ಮಠದ ಜಗದ್ಗುರು ಶಂಕರಾಚಾರ್ಯರಾಗಿ ನಿಯುಕ್ತರಾದ ಬಳಿಕ ದೇಶದಾದ್ಯಂತ ಪ್ರವಾಸಗೈದು ಧಾರ್ಮಿಕ, ಸಾಮಾಜಿಕ ಪ್ರಗತಿಗೆ ಅನಂತಕೊಡುಗೆಗಳನ್ನು ಸಲ್ಲಿಸಿದರು. ಹಿಂದೂಧರ್ಮದ ವೈಶ್ವಿಕ ಪ್ರಸಾರ ಹಾಗೂ ಪೂರ್ಣಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪೀಠ ಹಾಗೂ ಧರ್ಮದಂಡದ ಇತಿಮಿತಿಗಳು ಅಡ್ಡಿಯಾದಾಗ ಪೀಠ ತ್ಯಜಿಸಿ, ಸಂನ್ಯಾಸಧರ್ಮದಲ್ಲೇ ಮುಂದುವರೆದು ಸಾಂಸ್ಕೃತಿಕ ಭಾರತವನ್ನು ರೂಪಿಸುವ ದಿವ್ಯಯೋಜನೆಯತ್ತ ಚಿತ್ತ ಹರಿಸಿದರು. ಮಾನವಬದುಕಿನ ಸಮಸ್ಯೆಗಳಿಗೆ ಉತ್ಕೃಷ್ಟ ಪರಿಹಾರ ಒದಗಿಸುವ ಭಗವದ್ಗೀತೆಯನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಆರಂಭಿಸಿದ
ಗೀತಾಸಂದೇಶ’, ಗೋಸಂರಕ್ಷಣೆ – ಸಂಶೋಧನೆಯ ಹಿನ್ನೆಲೆಯಲ್ಲಿ ಗೋಶಾಲೆ, ವಿವಿಧ ಪ್ರದೇಶಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದ ಸ್ವಾಮೀಜಿ, ಸ್ವಾಮಿ ವಿವೇಕಾನಂದರಂತೆ ಭಾರತೀಯ ಸತ್ವವನ್ನು ಜಗದಗಲ ಪಸರಿಸುವ ದೀಕ್ಷೆ ತೊಟ್ಟರು. ಸಮನ್ವಯ ಸೇವಾ ಪ್ರತಿಷ್ಠಾನವನ್ನು ಸ್ಥಾಪಿಸಿ ಗುಡ್ಡಗಾಡಿನ ಜನರಿಗೆ ಉಚಿತ ಶಿಕ್ಷಣ, ಆರೋಗ್ಯ ಶಿಬಿರ, ಉಚಿತ ಔಷಧೋಪಚಾರವನ್ನೂ ಕಲ್ಪಿಸಿ ಕ್ರೈಸ್ತ್ ಮಿಶನರಿಗಳ ಮೋಸದ ಮತಾಂತರಕ್ಕೆ ತಡೆಗೋಡೆಯಾದರು.
ಸಮನ್ವಯ ಪರಿವಾರ, ಸಮನ್ವಯ ಕುಟೀರದ ಮೂಲಕ ಸಿಂಗಾಪುರ್, ಇಂಡೋನೇಷ್ಯಾ, ಜಪಾನ್, ಆಸ್ಟ್ರೇಲಿಯಾ, ಇಂಗ್ಲೆಂಡ್, ಜರ್ಮನಿ, ಸ್ವಿಟ್ಜರ್ಲ್ಯಾಂಡ್ ಮೊದಲಾದ ರಾಷ್ಟ್ರಗಳಲ್ಲಿ ಸನಾತನ ಮೌಲ್ಯಗಳ ಬೀಜಬಿತ್ತಿ, ಭಾರತೀಯತೆಯ ಕಂಪನ್ನು ಪರಿಚಯಿಸಿದ ಸ್ವಾಮೀಜಿ ಅಯೋಧ್ಯಾ ರಾಮಜನ್ಮಭೂಮಿ ಹೋರಾಟದಲ್ಲೂ ಮುಂಚೂಣಿಯಲ್ಲಿ ಮಹಾತಪಸ್ವಿ. ರಾಮನಿಗೆ ನೆಲೆಯಾಗದಿರೆ ಉಪವಾಸ ಸತ್ಯಾಗ್ರಹದ ಧರ್ಮಶ್ರದ್ಧೆಯನ್ನು ವ್ಯಕ್ತಪಡಿಸಿದ ಸ್ವಾಮೀಜಿ, ಹರಿದ್ವಾರದಲ್ಲಿ ನಿರ್ಮಿಸಿದ ಎಂಟಂತಸ್ತಿನ ಭಾರತಮಾತಾಮಂದಿರ ಅತ್ಯುತ್ಕೃಷ್ಟ ಕಲ್ಪನೆಗಳಲ್ಲೊಂದು. ದೇಶವನ್ನು ದೈವತ್ವಕ್ಕೇರಿಸಿ ಭಾರತಮಾತೆಗೆ ನಿತ್ಯಪೂಜೆಯ ಗೌರವ ಸಲ್ಲಿಸಿಷ್ಟೇ ಅಲ್ಲದೆ ಮಂದಿರದೊಳಗೆ ಭಾರತದ ವಿರಾಡ್ರೂಪವನ್ನೇ ಮರುಸೃಷ್ಟಿಸಿದ ನವಯುಗಾಚಾರ್ಯ. ರಾಮಾಯಣದಿಂದ ಸ್ವಾತಂತ್ರ್ಯ ಹೋರಾಟದವರೆಗಿನ ಇತಿಹಾಸ, ಸಂಘರ್ಷಪೂರ್ಣ ಹೋರಾಟದ ಬಲಿದಾನಿಗಳು, ಅನುಪಮ ಮಹಿಳಾಸಾಧಕರು, ಸಾಧುಸಂತರು, ಮತಸಮನ್ವಯಾಚಾರ್ಯರು, ವಿಷ್ಣುವಿನ ದಶಾವತಾರವೇ ಮೊದಲಾಗಿ ಹಿಂದೂಧರ್ಮದ ಸಾರಸರ್ವಸ್ವವನ್ನೂ ಮಂದಿರದೊಳಗೆ ಪ್ರತಿಷ್ಠಾಪಿಸಿದ ನವಚೈತನ್ಯದಾಯಕ ಸ್ವಾಮೀಜಿ ೨೦೧೯ರ ಜೂನ್ ಇಪ್ಪತ್ತೈದರಂದು ಬ್ರಹ್ಮಲೀನರಾದರು. ಸುಪ್ತದೇಶಭಕ್ತಿಗೊಂದು ಮೂರ್ತರೂಪನೀಡಿದ ಭಾರತಭಕ್ತ ಯತಿವರೇಣ್ಯರ ಸದುದ್ದೇಶವನ್ನು ಸಾಕಾರಗೊಳಿಸುವ ಸಾರ್ಥಕತೆ ನಮ್ಮದಾಗಬೇಕು.
ತಾರುಣ್ಯದ ಸಂಕ್ರಮಣ ಕಾಲಘಟ್ಟದಲ್ಲಿ ತನ್ನೆಲ್ಲ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಭಗತ್ ಸಿಂಗ್ ಅಮರರಾದರೆ, ಇತಿಹಾಸದ ಗರ್ಭದಲ್ಲಿ ಹುದುಗಿರುವವರನ್ನು ಜಗತ್ತಿಗೆ ಪರಿಚಯಿಸಿದ ಸ್ವಾಮಿ ಸತ್ಯಮಿತ್ರಾನಂದರು ರಾಷ್ಟ್ರದೇವೋಭವ ಮಂತ್ರದ ರೂವಾರಿಯಾದರು. ಆ ಉತ್ಕೃಷ್ಟ ಹಾದಿಯನ್ನು ತರುಣರಿಗೆ ಪರಿಚಯಿಸುವುದು ನಮ್ಮ ಕಾರ್ಯವಾಗಲಿ.