ಉಡುಪಿ: ಅಯೋಧ್ಯೆ ರಾಮ ಮಂದಿರದಲ್ಲಿ ಜ. 22ರಂದು ಪ್ರತಿಷ್ಠಾಪನೆಗೊಳ್ಳುವ ರಾಮ ಮೂರ್ತಿ ಇನ್ನೂ ಅಂತಿಮಗೊಂಡಿಲ್ಲ. ಮೂರ್ತಿ ಬಗೆಗೆ ಪ್ರಸ್ತುತ ಹರಿದಾಡುತ್ತಿರುವ ಸುದ್ದಿ ದಿಟವಲ್ಲ ಎಂದು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥ, ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದರು.
ಮಂಗಳವಾರ ಸಂಯುಕ್ತ ಕರ್ನಾಟಕದೊಂದಿಗೆ ಮಾತನಾಡಿದ ಶ್ರೀಪಾದರು, ರಾಮ ಜನ್ಮಭೂಮಿಯಾದ ಅಯೋಧ್ಯೆ ರಾಮ ಮಂದಿರದ ನೆಲ ಅಂತಸ್ತಿನಲ್ಲಿ ರಾಮಲಲ್ಲಾ (ಬಾಲರಾಮ) ಮೂರ್ತಿ ಪ್ರತಿಷ್ಠಾಪಿಸಲಾಗುವುದು. ಮುಂದಿನ ದಿನಗಳಲ್ಲಿ ಆಲಯದ ವಿವಿಧೆಡೆಗಳಲ್ಲಿ ರಾಮ ಪರಿವಾರ ಮೂರ್ತಿ ಸಹಿತ ರಾಮಾಯಣದ ಪ್ರಮುಖ ಘಟ್ಟಗಳ ಮೂರ್ತಿ ಸ್ಥಾಪಿಸುವ ಉದ್ದೇಶ ಇದೆ. ಮೂವರು ಕಲಾವಿದರು ಬಾಲರಾಮನ ಮೂರ್ತಿ ಸಿದ್ಧಪಡಿಸಿಕೊಟ್ಟಿದ್ದು, ಟ್ರಸ್ಟ್ ನ ವಿಶ್ವಸ್ಥರೆಲ್ಲರೂ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದೇವೆ. ಅಂತಿಮವಾಗಿ ಆಯ್ಕೆಯಾದ ರಾಮ ಮೂರ್ತಿಯ ವಿವರವನ್ನು ಅಧಿಕೃತವಾಗಿ ಟ್ರಸ್ಟ್ ಪ್ರಕಟಿಸಲಿದೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.