ಅಯೋಧ್ಯೆಗೆ ರೈಲು ಸಂಚಾರ

Advertisement

ಹುಬ್ಬಳ್ಳಿ: ಅಯೋಧ್ಯೆ ರಾಮಮಂದಿರ ದರ್ಶನಕ್ಕೆ ಜನ ಉತ್ಸುಕರಾಗಿದ್ದು, ರಾಜ್ಯದ ಪ್ರತಿ ಜಿಲ್ಲೆಗಳಿಂದಲೂ ವಿಶೇಷ ರೈಲು ಸೇವೆ ಆರಂಭಕ್ಕೆ ಬೇಡಿಕೆ ಬಂದಿದೆ. ಹೀಗಾಗಿ 13 ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಬೆನ್ನಲ್ಲೇ ಜ. 23ರ ನಂತರ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ, ಅಯೋಧ್ಯೆಗೆ ವಿಶೇಷ ರೈಲು ಸೇವೆ ಕಲ್ಪಿಸಲು ಸ್ಥಳೀಯರು ಆಯಾ ಜಿಲ್ಲೆಗಳ ಸಂಸದರ ಮೂಲಕ ರೈಲ್ವೆ ಇಲಾಖೆ ಸಂಪರ್ಕಿಸುತ್ತಿದ್ದಾರೆ. ಹೀಗಾಗಿ ಕರ್ನಾಟಕದ ಎಲ್ಲ ಜಿಲ್ಲೆಗಳನ್ನು ಸಂಪರ್ಕಿಸುವ ರೀತಿಯಲ್ಲಿ ಪ್ರಮುಖ ನಗರಗಳಿಂದ ೧೧ ರೈಲುಗಳ ಸೇವೆ ಆರಂಭಿಸಲು ತೀರ್ಮಾನಿಸಿದ್ದು ಸೆಂಟ್ರಲ್ ರೈಲ್ವೆ ಅಧೀನದಲ್ಲಿರುವ ಕಲ್ಯಾಣ ಕರ್ನಾಟಕದಿಂದಲೂ ೨ ರೈಲು ಓಡಿಸಲು ಚಿಂತಿಸಿದೆ.
ಜ. ೨೩ರ ನಂತರ ಸುಮಾರು ಎರಡು ತಿಂಗಳ ಕಾಲ ಈ ರೈಲುಗಳ ಸೇವೆಯನ್ನು ಒದಗಿಸಲಾಗುತ್ತಿದೆ. ಆರಂಭದಲ್ಲಿ ನಿಗದಿತ ಸ್ಥಳದಿಂದ ಒಂದು ಬಾರಿ ಮಾತ್ರ ಆ ರೈಲು ಅಯೋಧ್ಯೆ ತಲುಪಿ ವಾಪಸ್ ಆಗಲಿವೆ. ನಂತರದಲ್ಲಿಯೂ ಬೇಡಿಕೆ ಬಂದಲ್ಲಿ ಆ ಸೇವೆಯನ್ನು ಮುಂದುವರಿಸಲು ಇಲಾಖೆ ಚಿಂತಿಸಲಿದೆ.

ಎಲ್ಲೆಲ್ಲಿ ರೈಲು ಸೇವೆ…
ಬೆಳಗಾವಿಯಿಂದ ಹುಬ್ಬಳ್ಳಿ ಮಾರ್ಗವಾಗಿ ೨ ರೈಲು ಗಾಡಿಗಳು, ಅಯೋಧ್ಯೆ ತಲುಪಿ ವಾಪಸ್ ಆಗಲಿವೆ. ತುಮಕೂರಿನಿಂದ ಬೆಂಗಳೂರು ಮಾರ್ಗವಾಗಿ ೨, ಗೋವಾದ ವಾಸ್ಕೋದಿಂದ ೨, ಮೈಸೂರು, ಮಂಗಳೂರು, ಶಿವಮೊಗ್ಗ, ಚಿತ್ರದುರ್ಗ, ಬಾಗಲಕೋಟೆಯಿಂದ ತಲಾ ಒಂದೊಂದು ರೈಲು ಗಾಡಿ ಓಡಿಸಲು ನಿರ್ಧರಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಕೆಲ ಅಧಿಕಾರಿಗಳನ್ನು ಆಯಾ ನಿಲ್ದಾಣಗಳಿಗೆ ಕಳುಹಿಸಿ ಮಾಹಿತಿ ಪಡೆಯಲಾಗಿದೆ.