ಅಮಿತ್ ಶಾ ರೋಡ್ ಶೋ: ಮಧುವಣಗಿತ್ತಿಯಂತೆ ಶೃಂಗಾರಗೊಂಡ ಕುಂದಗೋಳ

Advertisement

ಕುಂದಗೋಳ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕುಂದಗೋಳದಲ್ಲಿ ಜ. 28ರಂದು ಭರ್ಜರಿ ರೋಡ್ ಶೋ ನಡೆಸಲಿದ್ದು, ಕುಂದಗೋಳ ಪಟ್ಟಣ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದು, ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಅಭಿಯಾನದಂಗವಾಗಿ ಕುಂದಗೋಳ ಕ್ಷೇತ್ರದಲ್ಲಿ ಅಮಿತ್ ಶಾ ಅವರು ರೋಡ್ ಶೋ ನಡೆಸುವ ಮೂಲಕ ಚುನಾವಣೆ ರಣಕಹಳೆ ಊದಲಿದ್ದಾರೆ. ಹೀಗಾಗಿ ಕುಂದಗೋಳ ಬಿಜೆಪಿ ಕಾರ್ಯಕರ್ತರಲ್ಲಷ್ಟೇ ಅಲ್ಲ ಜಿಲ್ಲೆಯ ಕಾರ್ಯಕರ್ತರು, ಮುಖಂಡರಿಗೆ ಬೂಸ್ಟರ್ ಡೋಸ್‌ನಂತೆ ಪರಿಣಮಿಸಲಿದೆ.
ಅಮಿತ್ ಶಾ ಅವರು ಹೆಲಿಕಾಪ್ಟರ್ ಮೂಲಕ ಕುಂದಗೋಳಕ್ಕೆ ಬರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಗೆ ಹೊಂದಿಕೊಂಡಿರುವ ಶಿವಾನಂದ ಶಾಲೆಯ ಪಕ್ಕದಲ್ಲಿರುವ ಶಂಕ್ರಪ್ಪ ಹೊಳಗಣ್ಣವರ ಜಮೀನಿನಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ರಸ್ತೆ ಸೇರಿದಂತೆ ಬಂದೋಬಸ್ತ್ ಮಾಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2 ಗಂಟೆಯಿಂದ ರೋಡ್ ಶೋ ನಡೆಯಲಿದೆ. ಶಂಭುಲಿಂಗೇಶ್ವರ ದೇವರ ದರ್ಶನ ಪಡೆದು ನಂತರ ಬಸವಣ್ಣಜ್ಜನವರ ಮಠಕ್ಕೆ ಭೇಟಿ ನೀಡಿ ಸನ್ಮಾನ ಸ್ವೀಕರಿಸುವರು. ಮಧ್ಯಾಹ್ನ 2.55ಕ್ಕೆ ಹುಬ್ಬಳ್ಳಿ ಲಕ್ಷ್ಮೇಶ್ವರ ರಸ್ತೆಯಲ್ಲಿರುವ ಕೆರೆ ಅಂಗಳದಿಂದ ಗಾಳಿಮರೆಮ್ಮ ದೇವಸ್ಥಾನದವರೆಗೆ ರೋಡ ಶೋ ನಡೆಸಲಿದ್ದಾರೆ ಎಂದು ಬಿಜೆಪಿ ಮುಖಂಡ ಎಂ.ಆರ್. ಪಾಟೀಲ ತಿಳಿಸಿದ್ದಾರೆ.