ಅಭಿವೃದ್ಧಿ ಹಾಗೂ ಕಲ್ಯಾಣ ಯೋಜನೆಗಳ ಸಮತೋಲಿತ ಬಜೆಟ್: ಸುನಿಲ್ ಕುಮಾರ್

Advertisement

ಉಡುಪಿ: ಅಭಿವೃದ್ಧಿ ಹಾಗೂ ಕಲ್ಯಾಣ ಯೋಜನೆಗಳ ಸಮತೋಲಿತ ಬಜೆಟ್ ಇದಾಗಿದ್ದು, ಮಧ್ಯಮ ವರ್ಗದ ಆದ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ತನ್ನ ಆಯವ್ಯಯ ರೂಪಿಸಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಕೇಂದ್ರ ಬಜೆಟ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಮೃತ ಕಾಲದಲ್ಲಿ ಏಳು ಆದ್ಯತಾ ವಲಯವನ್ನು ‘ಸಪ್ತರ್ಷಿ’ ಎಂದು‌‌ ಪರಿಗಣಿಸಿ ಕೇಂದ್ರ ಬಜೆಟ್ ನಲ್ಲಿ ಯೋಜನೆ ರೂಪಿಸಲಾಗಿದೆ. ಹಸಿರು ಕ್ರಾಂತಿಗಾಗಿ‌ ಪಿಎಂ ಪ್ರಣಾಮ್ ಯೋಜನೆ, ಮತ್ಸ್ಯ ಸಂಪದ ಯೋಜನೆಯಲ್ಲಿ 6 ಸಾವಿರ ಕೋಟಿ ರೂ. ಹೂಡಿಕೆ ಪ್ರಸ್ತಾಪಿಸಿರುವುದು ರಾಷ್ಟ್ರದ ಕರಾವಳಿ ಭಾಗದ ಅಭಿವೃದ್ಧಿಯಲ್ಲಿ‌ ಮಹತ್ವದ ಪಾತ್ರ ವಹಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಭದ್ರಾ ಮೇಲ್ದಂಡೆ ಯೋಜನೆಗಾಗಿ ಬಜೆಟ್ ನಲ್ಲಿ 5,300 ಕೋಟಿ ರೂ. ನಿಗದಿ ಮಾಡಿರುವುದು ಅತ್ಯಂತ ಸ್ವಾಗತಾರ್ಹ.
ಹಸಿರು ಇಂಧನ ಕ್ಷೇತ್ರವನ್ನು ಆದ್ಯತಾ ವಲಯವಾಗಿ ಗುರುತಿಸಲಾಗಿದ್ದು, 2030ರ ವೇಳೆಗೆ 5 ಎಂಎಂಟಿ ಹಸಿರು ಹೈಡ್ರೋಜನ್ ಉತ್ಪಾದನಾ ಗುರಿ ನಿಗದಿ ಮಾಡಲಾಗಿದ್ದು, 35 ಸಾವಿರ ಕೋಟಿ ರೂ. ಹೂಡಿಕೆಗೆ ನಿರ್ಧರಿಸಿರುವುದು ಸ್ವಾಗತಾರ್ಹ. ಇದು ರಾಜ್ಯಗಳ ಮೇಲಿನ ಜವಾಬ್ದಾರಿಯನ್ನು ಹೆಚ್ಚಿಸಿದೆ.
ಎಲ್ಲದಕ್ಕಿಂತ ಹೆಚ್ಚಾಗಿ ಬಂಡವಾಳ ಹೂಡಿಕೆ ಮಿತಿಯನ್ನು 1೦ ಲಕ್ಷ ಕೋಟಿಗೆ ಹೆಚ್ಚಳ‌ ಮಾಡಲಾಗಿದ್ದು, ಇದು ಜಿಡಿಪಿಯ ಶೇ.3.3ರಷ್ಟಾಗುತ್ತದೆ. ಇದು ಭಾರತದ ಬದಲಾದ ಆರ್ಥಿಕ ಶಕ್ತಿಗೆ ನಿದರ್ಶನ ಎಂದು ಸಚಿವ ಸುನಿಲ್ ಹೇಳಿದ್ದಾರೆ.
ಕೊರೊನಾ ಕಾಲಘಟ್ಟದಲ್ಲಿ ಆರಂಭಿಸಲಾದ ಪಿಎಂ ಗರೀಬ್ ಕಲ್ಯಾಣ ಯೋಜನೆಯಡಿ ಉಚಿತ ಅಕ್ಕಿ ಹಾಗೂ ಧಾನ್ಯ ವಿತರಣೆಯನ್ನು ಮುಂದಿನ ಒಂದು ವರ್ಷ ಅವಧಿಗೆ ವಿಸ್ತರಿಸಿರುವುದು ಕೇಂದ್ರ ಸರ್ಕಾರದ ಮಾತೃ ಹೃದಯದ ಸಂಕೇತ‌.ಮಧ್ಯಮ ವರ್ಗದವರ ಬಹು ನಿರೀಕ್ಷಿತ ಆದಾಯ ತೆರಿಗೆ ಮಿತಿ‌ ಹೆಚ್ಚಳ ಮಾಡಲಾಗಿದೆ. 7 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ನೀಡಿರುವುದು ಸ್ವಾಗತಾರ್ಹ ಎಂದು ಸುನಿಲ್ ಕುಮಾರ್ ತಿಳಿಸಿದ್ದಾರೆ.