ಹುಬ್ಬಳ್ಳಿ: ಹಾಡಹಗಲೇ ಒಂಟಿ ಮಹಿಳೆ ಮೇಲೆ ಯುವಕರು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಮನೆಯಿಂದ ಉದ್ಯೋಗಕ್ಕೆ ತೆರಳುತ್ತಿದ್ದ 36 ವರ್ಷದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮೂವರು ಆರೋಪಿಗಳನ್ನು ಇಲ್ಲಿನ ಕಸಬಾ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಮಂಗಳವಾರ ಈ ಪ್ರಕರಣ ದಾಖಲಾಗಿತ್ತು. ಹಳೇ ಹುಬ್ಬಳ್ಳಿಯ ಉದ್ಯಮ ನಗರದ ಬಳಿ ಈ ಘಟನೆ ನಡೆದಿದ್ದು, ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ ಉಲ್ಪಥ್ ಅಲಿಯಾಸ್ ನಾಮ್, ಮಲಿಕ್ ಹಾಗೂ ಮುಬಾರಕ್ ಅಲಿಯಾಸ್ ಟುಬೋ ಎಂಬ ಮೂವರನ್ನು ಕಸಬಾಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬುಕ್ ಫ್ಯಾಕ್ಟರಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಒಬ್ಬರು ಮಧ್ಯಾಹ್ನ ಊಟಕ್ಕೆ ಬಂದು ವಾಪಸ್ ಹೋಗುತ್ತಿದ್ದರು. ಈ ವೇಳೆ ಮಹಿಳೆಯನ್ನು ಬಾಯಿ ಮುಚ್ಚಿ ಎಳೆದೊಯ್ದು ಯುವಕರ ತಂಡ ಆಕೆಯ ಮೇಲೆ ದೈಹಿಕ ಹಲ್ಲೆ ನಡೆಸಿ, ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ ಮಹಿಳೆ ಚಿರಾಟ ನಡೆಸಿದ್ದಾಳೆ. ಈ ಸದ್ದು ಕೇಳಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದವರು ಸ್ಥಳಕ್ಕೆ ಓಡಿ ಬರುತ್ತಲೇ ಮೂವರು ಯುವಕರು ಪರಾರಿಯಾಗಿದ್ದಾರೆ. ಈ ಸಂಬಂಧ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಸಂಬಂಧಿಕರು ದೂರು ದಾಖಲಿಸಿದ್ದಾರೆ. ದೂರು ದಾಖಲಾದ ಕೇವಲ ಮೂರು ಗಂಟೆಯಲ್ಲಿ ಪೊಲೀಸರು ಆರೋಪಗಳನ್ನು ಬಂಧಿಸಿದ್ದಾರೆ. ಸದ್ಯ ಮಹಿಳೆಗೆ ಕಿಮ್ಸ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.