ಅಜ್ಜನ ಜಾತ್ರೆಗೆ 6 ಲಕ್ಷಕ್ಕೂ ಅಧಿಕ ಶೇಂಗಾ ಹೋಳಿಗೆ ರವಾನೆ

ಶೇಂಗಾ ಹೋಳಿಗೆ
Advertisement

ರಾಯಚೂರು: ಉತ್ತರ ಕರ್ನಾಟಕ ಭಾಗ ಬಹುದೊಡ್ಡ ಜಾತ್ರೆ ಎಂದರೆ ಕೊಪ್ಪಳದ ಗವಿಮಠದ ಶ್ರೀಗವಿಸಿದ್ಧೇಶ್ವರ ಅಜ್ಜನ ಜಾತ್ರೆಯಾಗಿದೆ. ಈ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಅಲ್ಲಿ ಪ್ರತಿದಿನವೂ ಅನ್ನದಾಸೋಹ ನಡೆಯುತ್ತಿದ್ದು, ಜಾತ್ರೆಗೆ ಆಗಮಿಸುವ ಭಕ್ತರಿಗೆ ಭಕ್ಷ ಬೋಜನ ವ್ಯವಸ್ಥೆ ಮಾಡುವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ ಹಾಗೂ ಲಿಂಗಸುಗೂರು ತಾಲ್ಲೂಕು ಸೇರಿದಂತೆ ಸುಮಾರು 42 ಹಳ್ಳಿಗಳಲ್ಲಿಯೂ ಸಿಂಧನೂರು ಗೆಳೆಯರ ಬಳಗದಿಂದ ಸುಮಾರು 6ಲಕ್ಷಕ್ಕೂ ಅಧಿಕ ಶೇಂಗಾದ ಹೋಳಿಗೆಗಳನ್ನು ಜಾತ್ರೆಗಾಗಿ ಸಿದ್ಧಪಡಿಸಿದ್ದಾರೆ.
ರಾಯಚೂರು ಜಿಲ್ಲೆ ಸಿಂಧನೂರಿನ ಗೆಳೆಯರ ಬಳಗ ಹಾಗೂ ಸಿಂಧನೂರಿನ ಗವಿಸಿದ್ದೇಶ್ವರ ಆಗ್ರೋ ಫುಡ್ಸ್ ಮಾಲೀಕ ವಿಜಯಕುಮಾರ್ ಗುಡಿಹಾಳ ನೇತೃತ್ವದಲ್ಲಿ ಈ ಭಕ್ತಿ ಸೇವಾ ಕಾರ್ಯ ಆರಂಭಿಸಲಾಗಿದ್ದು, ಕಳೆದ ವರ್ಷದ ಜಾತ್ರೆಯಲ್ಲಿ ಮಿರ್ಚಿ ಬಜ್ಜಿ ವ್ಯವಸ್ಥೆ ಮಾಡಲಾಗಿತ್ತು. ಈ ವರ್ಷ ಸಿಂಧನೂರು ಗೆಳೆಯರ ಬಳಗ ಅಜ್ಜನ ಅಪ್ಪಣೆಯಂತೆ 4 ಲಕ್ಷ ಶೇಂಗಾ ಹೋಳಿಗೆ ಸಿದ್ಧಪಡಿಸಲು ಮುಂದಾಗಿದ್ದು, ಈ ಕಾರ್ಯವನ್ನು ಗಮನಿಸಿದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸ್ವಯಂಪ್ರೇರಿತವಾಗಿ ಶೇಂಗಾ ಹೋಳಿಗೆಗಳನ್ನು ಸಿದ್ಧಪಡಿಸಿರುವುದರಿಂದ ಸುಮಾರು 6 ಲಕ್ಷಕ್ಕೂ ಹೆಚ್ಚು ಶೇಂಗಾ ಹೋಳಿಗೆ ಸಿದ್ಧವಾಗಿವೆ.