ಅಚ್ಯುತಾನಂತ ಗೋವಿಂದ ನಾಮೋಚ್ಛಾರಣ ಭೇಷಜಾತ್ |
ನಶ್ಯಂತಿ ಸಕಲಾಃ ರೋಗಾ: ಸತ್ಯಂ ಸತ್ಯಂ ವದಾಮ್ಯಹಂ ||
ಅಚ್ಯುತ, ಅನಂತ, ಗೋವಿಂದನ ನಾಮ ಸ್ಮರಣೆಯನ್ನು ಮಾಡುತ್ತಾ ಭವರೋಗವನ್ನು ಮಾತ್ರವಲ್ಲದೇ ದೈಹಿಕ ರೋಗವನ್ನು ಕೂಡ ಪರಿಹಾರ ಮಾಡಿಕೊಳ್ಳಬಹುದು ಎಂದು ಜ್ಞಾನಿಗಳು ಹೇಳುತ್ತಾರೆ.
ರೋಗ ಬಂದಾಗ ವಿಶೇಷವಾಗಿ ಹರಿಸ್ಮರಣೆಯನ್ನು ಮಾಡಬೇಕು. ರೋಗ ಬಂದಾಗ ಹರಿಸ್ಮರಣೆಯನ್ನು ಮಾಡಬಾರದೆಂದು ಮಹಾಭಾರತದಲ್ಲಿ ಹೇಳಿದೆ ಎಂದರೆ ಅದರರ್ಥ ಹಾಗಲ್ಲ. ರೋಗ ಬಂದಾಗಲಷ್ಟೇ ದೇವರನ್ನು ನೆನೆಯುವದಲ್ಲ. ನಿತ್ಯವೂ ನಾಮಸ್ಮರಣೆ ಮಾಡುತ್ತಲೇ ಇರಬೇಕು. ರೋಗ ರುಜಿನಗಳು ಬಂದಾಗ ಆ ನಾಮಸ್ಮರಣೆಗೆ ವಿಶೇಷವಾದ ಅನುಗ್ರಹವಿದೆ. ರೋಗ ಬಂದಾಗ ಉಚ್ಛರಿಸಲೂ ಬಲ ಕಳೆದುಕೊಂಡಾಗಲೂ ನಿತ್ಯ ಮಾಡುತ್ತಿರುವ ನಾಮದ ಬಲ ಅದಕ್ಕೆ ಫಲ ನೀಡುತ್ತದೆ. ಇಲ್ಲಿ ತಾತ್ಪರ್ಯ ಸಂಕಟ ಬಂದಾಗ ವೆಂಕಟರಮಣ ಎಂದಲ್ಲ. ಕೇವಲ ರೋಗ ಅಥವಾ ಸಂಕಷ್ಟ ಬಂದಾಗ ಮಾತ್ರ ನಾಮಸ್ಮರಣೆಯನ್ನು ಮಾಡುವುದಲ್ಲ ಸದಾ ಕಾಲ ನಾಮಸ್ಮರಣೆ ಮಾಡಬೇಕಂದು ಹೇಳುತ್ತಾರೆ.
ಎಷ್ಟು ಸೊಗಸಾಗಿ ಹೇಳಿದ್ದಾರೆಂದರೆ ಅಚ್ಯುತ, ಅನಂತ, ಗೋವಿಂದ, ರೋಗವನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಸಾಧಕರಿಗೆ ಶ್ರೀಮದಾಚಾರ್ಯರು ಕೊಟ್ಟಂತಹ ಮೂರು ದಿವ್ಯ ಔಷಧಿಗಳು, ಒಬ್ಬ ವ್ಯಕ್ತಿ ರೋಗಕ್ಕೆ ಗುರಿಯಾದನೆಂದರೆ ಅವನ ದೇಹದಲ್ಲಿ ಯಾವುದೋ ಅವ್ಯವಸ್ಥೆ ಆಗಿದೆ ಎಂದು ಅರ್ಥ ಅಸಹಜವಾದ ಸ್ಥಿತಿ ಇದೆ ಅದಕ್ಕಾಗಿ ಅವನಿಗೆ ರೋಗವಾಗಿರುತ್ತದೆ. ಚ್ಯುತ' ಎಂದರೆ ಯಾವ ಅಂಗಗಳು ಎಲ್ಲೆಲ್ಲಿ ಹೇಗೆ ಇರಬೇಕೋ ಅಲ್ಲಿರದೇ ಊನವಾಗಿರುವದು. ಚ್ಯುತವಾದಾಗ ಮನುಷ್ಯನಿಗೆ ರೋಗ ಅದಕ್ಕಾಗಿ ಅಚ್ಯುತನನನ್ನು ನೆನೆಯಬೇಕು. ದೇವರ ಯಾವ ಅಂಗಗಳೂ ಚ್ಯುತವಾಗುವುದಿಲ್ಲ ಆದ್ದರಿಂದ ಅವನು ಅವ್ಯಯ. ಅಂದರೆ ಪೂರ್ಣ ಸ್ವರೂಪಿ. ಭಗವಂತನನ್ನು ಹೊರತು ಪಡಿಸಿದರೆ ಈ ಪೂರ್ಣತೆ ಎಲ್ಲಿರಗೂ ಇರದು. ಚ್ಯುತವಾಗದವನೇ ಆ ಭಗವಂತ. ಆದ್ದರಿಂದ ಪೂರ್ಣ, ಪರಿಪೂರ್ಣನಾಗಿರುವ ಆ ಅಚ್ಯುತನಾಗಿರುವ ಅಚ್ಯುತನನ್ನು ನೆನೆಯಬೇಕು. ದೇವರ ಕೈ ಕಾಲು ಎಲ್ಲ ಅಂಗಗಳೂ ಸಚ್ಚಿದಾನಂದಾತ್ಮಕ ಅವನ ಯಾವ ಅಂಗಗಳೂ ಇದ್ದ ಸ್ಥಾನದಿಂದ ಆಚೀಚೆ ಆಗುವುದಿಲ್ಲ. ವಿಶ್ವವ್ಯಾಪಿ, ವಿಶ್ವಂಬರನೇ ಆಗಿದ್ದಾನೆ. ಆದ್ದರಿಂದ ಅಂತಹ ಅಚ್ಯುತನನ್ನು ಸ್ಮರಿಸಬೇಕು. ಉಪಾಸನೆ ಮಾಡಿದರೆ ಯಾವುದೇ ಚ್ಯುತಿ ಬರದೇ ಮನುಷ್ಯ ಆರೋಗ್ಯವಂತನಾಗಿ ಬಾಳಲು ಸಾಧ್ಯವಿದೆ. ಇದರಲ್ಲಿ ಸಂಶಯವೇ ಇಲ್ಲ. ನಂಬುಗೆ ಬಹು ಮುಖ್ಯ. ಅವನ ದೇಹದಲ್ಲಿ ಆದ ಅನಾರೋಗ್ಯಕ್ಕೆ ಕಾರಣ ಅವನ ಆಹಾರ ವಿಹಾರಗಳಲ್ಲಿ ಆದ ಚ್ಯುತಿ ಕಾರಣ, ಯಾವಾಗ ಯಾವ ಆಹಾರ ಸೇವಿಸಬೇಕೆಂಬ ನಿಯಮದಿಂದ ಚ್ಯುತನಾದರೆ ಅನಾರೋಗ್ಯಕ್ಕೆ ಬಲಿಯಾಗುತ್ತಾನೆ. ಎಂದಿಗೂ ನೇಮದಿಂದ
ಚ್ಯುತ’ನಾಗದಂತೆ ನನ್ನನ್ನು ರಕ್ಷಿಸು ಎಂದು ಅಚ್ಯುತನಾಮಕ ಭಗವಂತನನ್ನು ಉಪಾಸನೆ ಮಾಡಬೇಕು. ಭಗವಂತ ಅನಂತನೂ ಆಗಿದ್ದು, ರೋಗಹರನು ಆಗಿದ್ದಾನೆ.