ಕೇಂದ್ರ ತನಿಖಾ ತಂಡಗಳಾದ ಸಿಬಿಐ, ಇಡಿ ಮತ್ತಿತರ ಸಂಸ್ಥೆಗಳು ಎಲ್ಲ ರೀತಿಯ ಭ್ರಷ್ಟಾಚಾರಗಳ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಮುಕ್ತ ಅವಕಾಶ ಹೊಂದಿದೆ. ಆದರೆ ತನಿಖೆ ನಡೆಸುವಾಗ ಅನಗತ್ಯವಾಗಿ ಬೆದರಿಕೆ ಒಡ್ಡುವ ಕೆಲಸ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಮೌಖಿಕ ಆದೇಶ ನೀಡಿರುವುದು ಇಂದಿನ ಪರಿಸ್ಥಿತಿಯಲ್ಲಿ ಸಕಾಲಿಕವಾಗಿ ಕಾಣುತ್ತಿದೆ. ನಮ್ಮಲ್ಲಿ ಕೇಂದ್ರ ತನಿಖಾ ಸಂಸ್ಥೆಗಳಿಗೆ ತನಿಖೆ ನಡೆಸಲು ಮುಕ್ತ ಅವಕಾಶ ನೀಡಲಾಗಿದೆ. ಇತ್ತೀಚೆಗೆ ಈ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪ ಮತ್ತೆ ಮತ್ತೆ ಕೇಳಿ ಬರುತ್ತಿದೆ. ಇದರ ಬಗ್ಗೆ ಪ್ರತಿಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದವು. ನ್ಯಾಯಾಲಯ ಪ್ರತಿಪಕ್ಷಗಳ ದೂರನ್ನು ತಳ್ಳಿ ಹಾಕಿತು.ಅದರೆ ಮೌಖಿಕವಾಗಿ ತನಿಖಾಸಂಸ್ಥೆಗಳಿಗೆ ಬೆದರಿಕೆ ಹಾಕದಂತೆ ಎಚ್ಚರಿಕೆ ನೀಡಿದೆ.
ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಗಳ ವಿರುದ್ಧ ದೂರುಗಳು ಇತ್ತೀಚೆಗೆ ಅಧಿಕಗೊಂಡಿದೆ. ರಾಜಕೀಯ ಉದ್ದೇಶಗಳಿಗೆ ಈ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಆಗಾಗ್ಗೆ ಕೇಳಿ ಬರುತ್ತಿದೆ. ಕೇಂದ್ರ ಸರ್ಕಾರ ಈ ಆರೋಪಗಳನ್ನು ತಳ್ಳಿಹಾಕಿದ್ದು ತನಿಖಾ ಸಂಸ್ಥೆ ಸ್ವತಂತ್ರ ಎಂದು ಹೇಳುತ್ತ ಬಂದಿದೆ. ಆದರೆ ಹಲವು ತಿಂಗಳು ಗಳಿಂದ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ಪ್ರತಿಪಕ್ಷಗಳ ಅರೋಪ ಅಧಿಕಗೊಳ್ಳುತ್ತಿದೆ. ಜನಸಾಮಾನ್ಯರಲ್ಲಿ ಅನುಮಾನದ ಹುತ್ತ ಬೆಳೆಯುತ್ತಿದೆ. ಇದನ್ನು ಈಗಲೇ ಸ್ಪಷ್ಟಪಡಿಸುವುದು ಅಗತ್ಯ.
ಛತ್ತೀಸಗಢ ರಾಜ್ಯದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಹೀಗಾಗಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದೆ. ಅಲ್ಲಿಯ ಮುಖ್ಯಮಂತ್ರಿಯ ಮೇಲೆ ಅಕ್ರಮ ಹಣ ವರ್ಗಾವಣೆ (ಪಿಎಂಎಲ್‌ಎ) ಆರೋಪ ಹೊರಿಸುವ ಪ್ರಯತ್ನ ನಡೆಯುತ್ತಿದೆ. ಛತ್ತೀಸಗಢ ರಾಜ್ಯ ಸರ್ಕಾರಕ್ಕೆ ಸೇರಿದ ಅಬ್ಕಾರಿ ಇಲಾಖೆಯಲ್ಲಿ ಅಬ್ಕಾರಿ ಅಕ್ರಮದ ಬಗ್ಗೆ ೫೨ ಜನ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಇಬ್ಬರು ಅಧಿಕಾರಿಗಳ ಸಹೋದರ ಮೇಯರ್ ವಿರುದ್ಧ ದೂರು ದಾಖಲಿಸಲು ಇಡಿ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ದೂರು ನೀಡಲಾಗಿದೆ.ಪಿಎಂಎಲ್‌ಯ ಕಾಯ್ದೆಯ ಕಲಂ ೫೦ ಮತ್ತು ೬೩ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಲಾಗಿದೆ. ಇದೇರೀತಿ ಹಲವು ರಾಜ್ಯಗಳಲ್ಲಿ ಅದರಲ್ಲೂ ಬಿಜೆಪಿ ಅಧಿಕಾರದಲ್ಲಿರದ ರಾಜ್ಯಗಳಲ್ಲಿ ಇಡಿ ಬೆದರಿಕೆ ಒಡ್ಡಲು ಯತ್ನಿಸುತ್ತಿದೆ ಎಂಬ ಅರೋಪ ಕೇಳಿ ಬರುತ್ತಿದೆ. ಇದರ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ನಿರ್ಲಕ್ಷö್ಯ ತೋರುವುದು ಸರಿಯಲ್ಲ. ಪ್ರತಿಪಕ್ಷಗಳು ಕೇಂದ್ರ ತನಿಖಾ ಸಂಸ್ಥೆಯ ದಾಳಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಯತ್ನಿಸುವುದು ಸಹಜ. ಅದರಲ್ಲೂ ಚುನಾವಣೆ ಕಾಲದಲ್ಲಿ ಇಡಿ ದಾಳಿ ನಡೆದರೆ ಅದಕ್ಕೆ ಜನ ರಾಜಕೀಯ ಬಣ್ಣ ನೀಡುವುದು ಸಹಜ. ಇದಕ್ಕೆ ಅವಕಾಶ ನೀಡಬಾರದು. ತನಿಖಾಸಂಸ್ಥೆ ಸ್ಪಷ್ಟ ಮಾಹಿತಿ ಪಡೆದು ಯಾವಾಗ ಬೇಕಾದರೂ ದಾಳಿ ನಡೆಸಿ ಮಹತ್ವ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಅದಕ್ಕೆ ಯಾವುದೇ ರೀತಿಯಲ್ಲೂ ನಿರ್ಬಂಧ ಇಲ್ಲ. ತನಿಖಾಸಂಸ್ಥೆ ಯಾವಾಗ ಬೇಕಾದರೂ ದಾಳಿ ನಡೆಸಬಹುದು. ಆದರೆ ಸಾಮಾನ್ಯ ದಿನಗಳಲ್ಲಿ ದಾಳಿ ನಡೆದರೆ ಜನ ತಲೆ ಕೆಡಿಸಿಕೊಳ್ಳುವುದಿಲ್ಲ. ಅದೇ ದಾಳಿಗಳು ಚುನಾವಣೆ ಕಾಲದಲ್ಲಿ ನಡೆದರೆ ಹಲವು ಸಂದೇಹಗಳು ಮೂಡುವುದು ಸಹಜ. ಇದಕ್ಕೆ ತನಿಖಾ ಸಂಸ್ಥೆಗಳು ಅವಕಾಶ ನೀಡಬಾರದು. ರಾಜಕೀಯ ಕಾರಣಗಳ ಒತ್ತಡಕ್ಕೆ ಮಣಿದು ದಾಳಿ ನಡೆಸಬಾರದು. ತನಿಖಾ ಸಂಸ್ಥೆಗಳು ಈ ವಿಷಯದಲ್ಲಿ ಎಚ್ಚರಿಕೆವಹಿಸುವುದು ಅಗತ್ಯ. ಛತ್ತೀಸಗಢ ರಾಜ್ಯದ ಹಾಗೆ ಹಲವು ರಾಜ್ಯಗಳಲ್ಲಿ ಚುನಾವಣೆ ಸಮೀಪಿಸುತ್ತಿದೆ. ಕರ್ನಾಟಕದಲ್ಲಿ ಇದೀಗ ಮತದಾನ ಮುಕ್ತಾಯಗೊಂಡಿದೆ. ಇನ್ನೂ ಕೆಲವು ರಾಜ್ಯಗಳಲ್ಲಿ ಚುನಾವಣೆ ಕಾಲ ಸಮೀಪ ಇದೆ. ಹೀಗಿರುವಾಗ ಯಾವುದೇ ರೀತಿ ಸಂಶಯಗಳಿಗೆ ಅವಕಾಶ ಮಾಡಿಕೊಡಬಾರದು. ಸಿಬಿಐ ಮುಖ್ಯಸ್ಥರಾಗಿ ಕರ್ನಾಟಕ ಡಿಜಿಪಿ ಪ್ರವೀಣ್ ಸೂದ್ ನೇಮಕಗೊಂಡಿದ್ದಾರೆ. ಅವರು ಜನರ ಭಾವನೆಗಳಿಗೆ ಸ್ಪಂದಿಸಬೇಕು. ಯಾವುದೇ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಅಲ್ಲದೆ ಜನಸಾಮಾನ್ಯರ ವಿಶ್ವಾಸ ಉಳಿಸಿಕೊಳ್ಳುವ ಹಾಗೆ ಕೆಲಸ ಮಾಡಬೇಕು. ಜನಸಾಮಾನ್ಯರಲ್ಲಿ ಮೂಡಿರುವ ಭಾವನೆಗೆ ತಕ್ಕಂತೆ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಎಚ್ಚರಿಕೆಯ ಮಾತುಗಳನ್ನು ಹೇಳಿದೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುವುದು ಬಹಳ ಮುಖ್ಯ. ಭ್ರಷ್ಟಾಚಾರವನ್ನು ಹತ್ತಿಕ್ಕಬೇಕು ಎಂದರೆ ತನಿಖಾಸಂಸ್ಥೆಗಳು ಮುಕ್ತ ಅವಕಾಶ ನೀಡಬೇಕು. ಒಬ್ಬ ಭ್ರಷ್ಟರಿಗೆ ಶಿಕ್ಷೆಯಾದರೂ ಸಾಕು. ಅದರ ಪ್ರಭಾವ ಬೇರೆಯವರ ಮೇಲೂ ಆಗುತ್ತದೆ. ಸರ್ಕಾರಿ ನೌಕರರಲ್ಲಿ ಈ ವಿಷಯದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ. ಅಲ್ಲದೆ ತನಿಖಾಸಂಸ್ಥೆಗಳು ತಮ್ಮ ಕೆಲಸವನ್ನು ವಸ್ತುನಿಷ್ಠವಾಗಿ ಕೈಗೊಳ್ಳಬೇಕು. ಅದಕ್ಕೆ ಆಡಳಿತ ಯಂತ್ರ ಮುಕ್ತ ಅವಕಾಶ ನೀಡಬೇಕು. ಚುನಾವಣೆ ಕಾಲದಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿಗಳ ಕುಟುಂಬದವರ ಮೇಲೆ ದಾಳಿ ನಡೆಸುವುದು ಸರಿಯಾದ ಕ್ರಮವಲ್ಲ. ಇದರಿಂದ ಜನರಲ್ಲಿ ಭೀತಿ ಮೂಡಿಸಿದಂತಾಗುತ್ತದೆ. ತಪ್ಪಿತಸ್ತರನ್ನು ಶಿಕ್ಷಿಸಲು ಕಾನೂನಿನಲ್ಲಿ ಎಲ್ಲ ಅವಕಾಶಗಳನ್ನು ನೀಡಲಾಗಿದೆ. ಆದರೆ ಅಮಾಯಕರನ್ನು ಬೆದರಿಸಲು ಕಾನೂನು ದುರ್ಬಳಕೆ ಆಗದಂತೆ ಎಚ್ಚರವಹಿಸುವುದು ಕೇಂದ್ರದ ಕರ್ತವ್ಯವೂ ಹೌದು. ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ. ಆದರೆ ಅದರಿಂದ ಅಮಾಯಕರಲ್ಲಿ ಭೀತಿ ಹುಟ್ಟಿಸಬಾರದು.