ಅಂತ್ಯವಾಗಲಿ ಕುಸ್ತಿಪಟುಗಳ ಮುಸುಕಿನ ಗುದ್ದಾಟ

Advertisement

ಕುಸ್ತಿಪಟುಗಳು ಈಗ ನಡೆಸುತ್ತ ಬಂದಿರುವ ಮುಸುಕಿನ ಗುದ್ದಾಟವನ್ನು ಇನ್ನೂ ಮುಂದುವರಿಸುವುದು ಸರಿಯಲ್ಲ. ಈಗಿನ ಗುದ್ದಾಟ ಕ್ರೀಡಾರಂಗದ ವಾತಾವರಣವನ್ನು ಉತ್ತಮಪಡಿಸುವುದಿಲ್ಲ. ಕ್ರೀಡಾ ಮನೋಭಾವ ಕೇವಲ ಕ್ರೀಡಾಂಗಣದಲ್ಲಿರುವುದು ಮುಖ್ಯವಲ್ಲ. ಎಲ್ಲರೂ ತಮ್ಮ ತಮ್ಮ ಜೀವನದಲ್ಲೂ ಕ್ರೀಡಾ ಮನೋಭಾವ ಅಳವಡಿಸಿಕೊಳ್ಳಬೇಕು. ಈಗ ನಡೆಯುತ್ತಿರುವುದು ಕ್ರೀಡಾರಂಗವನ್ನು ಉತ್ತಮಪಡಿಸುವುದಿಲ್ಲ. ಅಲ್ಲದೆ ಯುವ ಪೀಳಿಗೆಗೆ ಇದು ಉತ್ತೇಜನಕಾರಿಯಲ್ಲ. ಮಹಿಳಾ ಕುಸ್ತಿಪಟುಗಳ ಅಳಲಿಗೆ ಸರ್ಕಾರ ಸ್ಪಂದಿಸುವುದು ಅಗತ್ಯ. ಅಲ್ಲದೆ ಇದೇ ನೆಪ ಮಾಡಿಕೊಂಡು ಅವರನ್ನು ಬಲಿಪಶು ಮಾಡಬಾರದು. ಅವರಿಗೆ ಪರೋಕ್ಷವಾಗಿ ಬೆದರಿಕೆ ಒಡ್ಡುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಇದಕ್ಕೆ ಸರ್ಕಾರ ಅವಕಾಶ ನೀಡಬಾರದು. ಇಡೀ ಹಗರಣದಲ್ಲಿ ರಾಜಕೀಯ ವಾಸನೆ ಕಂಡು ಬರುತ್ತಿದೆ. ಮಹಿಳಾ ಕುಸ್ತಿಪಟುಗಳು ರಾಜಕೀಯ ಶಕ್ತಿಗಳ ದಾಳಗಳಾಗಿ ಬಿಡುವ ಅಪಾಯವಿದೆ.
ಕುಸ್ತಿ ಪಟುಗಳ ಯೋಗಕ್ಷೇಮ ನೋಡಿಕೊಳ್ಳಬೇಕಾದ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರ ಮೇಲೆ ಆರೋಪಗಳು ಕೇಳಿಬಂದಿರುವುದರಿಂದ ತನಿಖೆ ನಡೆಯಬೇಕು. ಆರೋಪಿಯ ಬಂಧನದ ವಿಷಯದಲ್ಲಿ ಅನಗತ್ಯ ರಾಜಕೀಯ ಗೊಂದಲಗಳನ್ನು ಸೃಷ್ಟಿಸುವುದು ಸರಿಯಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗಳಿಸಿದ ಮಹಿಳಾ ಕುಸ್ತಿಪಟುಗಳನ್ನು ಸಮಾಜ ಬಹಳ ಗೌರವದಿಂದ ಕಂಡಿದೆ. ಅಲ್ಲದೆ ಸರ್ಕಾರದ ಸವಲತ್ತುಗಳನ್ನು ಕಲ್ಪಿಸಿಕೊಡಲಾಗಿದೆ. ಹಾಗಿರುವಾಗ ಸಕಲ ಸವಲತ್ತುಗಳನ್ನು ಉಳಿಸಿಕೊಂಡು ಸರ್ಕಾರದ ವಿರುದ್ಧ ಧ್ವನಿ ಎತ್ತುವುದು ಆತ್ಮಸಾಕ್ಷಿಗೆ ವಿರುದ್ಧ ಎಂಬ ವಾದವೂ ಕೇಳಿ ಬರುತ್ತಿದೆ. ಈಗ ಕುಸ್ತಿಪಟುಗಳು ಸರ್ಕಾರಿ ಕೆಲಸಕ್ಕೆ ಹಾಜರಾಗುವುದಾಗಿ ಹೇಳುತ್ತಿದ್ದಾರೆ. ಪದಕಗಳನ್ನು ಗಂಗೆಗೆ ಎಸೆಯಲು ಸಿದ್ಧವಿದ್ದವರು ಸರ್ಕಾರ ನೀಡಿದ ಸವಲತ್ತುಗಳನ್ನು ಬಿಟ್ಟುಕೊಡಲು ಸಿದ್ಧರಿಲ್ಲವೇಕೆ ಎಂಬು ಟೀಕೆಗಳೂ ಇವೆ. ಹೋರಾಟ ನಡೆಸುವವರು ಸರ್ಕಾರಿ ಕೆಲಸದಲ್ಲಿ ಮುಂದುವರಿಯಲು ಬರುವುದಿಲ್ಲ.
ಸಾಮಾನ್ಯವಾಗಿ ಕ್ರೀಡಾಪಟುಗಳಿಗೆ ತಮ್ಮ ಕ್ರೀಡಾಭ್ಯಾಸವನ್ನು ಮುಂದುವರಿಸಲು ಎಲ್ಲ ಸವಲತ್ತು ಕಲ್ಪಿಸಿಕೊಡಲಾಗಿರುತ್ತದೆ. ಅವರ ದೈನಂದಿನ ಜೀವನಕ್ಕೆ ಆರ್ಥಿಕ ಕೊರತೆ ಬರಬಾರದು ಎಂದು ಸರ್ಕಾರಿ ನೌಕರಿ ನೀಡಲಾಗಿದೆ. ಹೀಗಿರುವಾಗ ಪ್ರತಿಭಟನೆಯ ದಾರಿ ಹಿಡಿಯಬೇಕು ಸರ್ಕಾರಿ ಸವಲತ್ತುಗಳನ್ನು ತ್ಯಜಿಸಿ ಹೊರಬರಬೇಕು. ಇಲ್ಲ ಎಂದರೆ ಸರ್ಕಾರಿ ನಿಯಮಗಳನ್ನು ಪಾಲಿಸಲೇಬೇಕು. ಕ್ರೀಡಾಪಟುಗಳಿಗೆ ನೀಡಿರುವ ಸ್ವಾತಂತ್ರ್ಯ ಕ್ರೀಡೆಗೆ ಮಾತ್ರ ಸೀಮಿತವಾಗಿರುತ್ತದೆ. ಉಳಿದ ವಿಷಯಗಳಲ್ಲಿ ಅವರು ಉಳಿದ ಸರ್ಕಾರಿ ನೌಕರರಿಗೆ ಅನ್ವಯಿಸುವ ನಿಯಮಗಳನ್ನು ಪಾಲಿಸಲೇಬೇಕು. ಈಗ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಯ್ಕೆ ಸಮಿತಿ ಮುಂದೆ ಹೋಗಲೇಬೇಕು. ಪದಕ ವಿಜೇತರು ನಮಗೆ ಈಗ ನಿಯಮ ಅನ್ವಯವಾಗುವುದಿಲ್ಲ ಎನ್ನುವುದು ಸರಿಯಲ್ಲ. ಕ್ರೀಡಾಲೋಕಕ್ಕೆ ಎಲ್ಲರೂ ಬರಲು ಸಾಧ್ಯವಾಗುವುದಿಲ್ಲ. ನಿರ್ದಿಷ್ಟ ವಯೋಮಾನದವರೇ ಭಾಗವಹಿಸಬೇಕು. ಈಗ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ಮೂಲಕ ಯುವ ಜನಾಂಗದಲ್ಲಿ ನಿರುತ್ಸಾಹ ತುಂಬ ಬಾರದು. ಸದಾ ಸ್ಪರ್ಧೆಯನ್ನು ಎದುರಿಸುವುದೇ ಕ್ರೀಡಾಪಟುಗಳ ನಿಜ ಜೀವನ.
ಸ್ಪರ್ಧೆಯೇ ಪ್ರತಿಯೊಬ್ಬ ಕ್ರೀಡಾಪಟುವಲ್ಲೂ ಸ್ಫೂರ್ತಿ ತುಂಬುತ್ತದೆ. ಕ್ರೀಡಾಲೋಕದ ವಾತಾವರಣ ಕಲುಷಿತಗೊಳ್ಳದಂತೆ ಎಚ್ಚರವಹಿಸುವುದು ಸರ್ಕಾರ ಮತ್ತು ಕ್ರೀಡಾಪಟುಗಳ ಕರ್ತವ್ಯವೂ ಹೌದು. ಹಿಂದಿನಿಂದಲೂ ನಮ್ಮಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿಗೆ ಕೊರತೆ ಇಲ್ಲ. ಅವರಿಗೆ ಸರಿಯಾದ ಉತ್ತೇಜನಕಾರಿ ವಾತಾವರಣ ಕಲ್ಪಿಸುವುದರಲ್ಲಿ ನಾವು ವಿಫಲರಾಗಿದ್ದೇವೆ. ಅದರಿಂದ ಒಂದು ಹಂತದಲ್ಲಿ ಕ್ರೀಡಾಸಕ್ತಿ ಬೆಳೆಸಿಕೊಂಡವರು ತಮ್ಮ ವೈಯುಕ್ತಿಕ ಬದುಕಿಗೆ ತೊಂದರೆಯಾಗುತ್ತದೆ ಎಂದು ಕ್ರೀಡೆಯಲ್ಲಿ ಮುಂದುವರಿಯುವುದಿಲ್ಲ. ಹೀಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಮೊದಲ ಸಾಲಿನಲ್ಲಿದ್ದವರು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಹೋಗಲು ಇಚ್ಛೆ ಪಡುವುದಿಲ್ಲ. ತಮಗಾಗುವ ನೋವುಗಳನ್ನು ಅವರೇ ನುಂಗಿಕೊಂಡು ಮೌನಕ್ಕೆ ಶರಣಾಗುತ್ತಾರೆ. ಇಂಥ ಸೂಕ್ಷ್ಮ ವಿಷಯಗಳಲ್ಲಿ ಸರ್ಕಾರ ರಾಜಕೀಯ ಮಾಡದೇ ಕ್ರೀಡಾಪಟುಗಳಲ್ಲಿ ಉತ್ಸಾಹ ತುಂಬುವ ಕೆಲಸ ಕೈಗೊಳ್ಳಬೇಕು. ಅವರ ಉತ್ಸಾಹದ ಮೇಲೆ ತಣ್ಣೀರು ಹಾಕುವ ಕೆಲಸ ಮಾಡಬಾರದು.
ಈಗ ಕುಸ್ತಿರಂಗದಲ್ಲಿ ರಾಜಕೀಯ ವಾಸನೆ ಕಂಡು ಬರುತ್ತಿದೆ. ಇದು ನಿಜಕ್ಕೂ ಸರಿಯಾದ ಲಕ್ಷಣವಲ್ಲ. ಮಹಿಳಾ ಕ್ರೀಡಾಪಟುಗಳ ಆರೋಪದ ಸತ್ಯಾಸತ್ಯತೆ ತಿಳಿದುಕೊಳ್ಳುವ ಹಕ್ಕು ಜನ ಸಾಮಾನ್ಯರಿಗಿದೆ. ಅದಕ್ಕೆ ನಿಷ್ಪಕ್ಷಪಾತ ತನಿಖೆ ನಡೆಯುವುದು ಅಗತ್ಯ. ಸುಲಭ ತನಿಖೆಗೆ ನ್ಯಾಯಾಂಗ ಕೂಡ ಅನುವು ಮಾಡಿಕೊಡುವುದು ಅಗತ್ಯ.