ಅಂತರ್ಜಾತಿ ವಿವಾಹಕ್ಕೆ ಸಮಾಜದಿಂದ ದೂರವಿಟ್ಟ ಆರೋಪ

Advertisement

ಕೊಪ್ಪಳ: ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸಮಾಜದ ಚಟುವಟಿಕೆಗಳಿಂದ ದೂರವಿಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಮೀಪದ ಭಾಗ್ಯನಗರ ಪಟ್ಟಣದ ವಾಲ್ಮೀಕಿ ನಾಯಕ ಸಮಾಜದ ಶಂಕ್ರಪ್ಪ ಬೇವಿನಹಳ್ಳಿಯವರ ಪುತ್ರರು ಅಂತರ್ಜಾತಿ ವಿವಾಹವಾಗಿದ್ದು, ಇದರಿಂದಾಗಿ ಕಳೆದ ಒಂದೂವರೆ ವರ್ಷದಿಂದಲೂ ಸಮಾಜದ ವಿವಿಧ ಕಾರ್ಯಕ್ರಮ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಆಹ್ವಾನಿಸದೇ ದೂರವಿಡಲಾಗಿದೆ.
ನಮ್ಮ ಮಗ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದಕ್ಕಾಗಿ ಸಮಾಜದಿಂದ ಹೊರಗಿಡಲಾಗಿದೆ. ನಮ್ಮನ್ನು ಸಮಾಜದವರ ಕಾರ್ಯಕ್ರಮಗಳಿಗೆ ಹಾಗೂ ಸಮಾಜದ ಕಾರ್ಯಕ್ರಮಕ್ಕೆ ಕಳೆದ ಒಂದೂವರೆ ವರ್ಷದಿಂದಲೂ ಕರೆಯುತ್ತಿಲ್ಲ. ಈ ಕುರಿತು ಸಮಾಜದ ಕೆಲ ಮುಖಂಡರಿಗೆ ಕೇಳಿದರೆ, ೧ ಲಕ್ಷ ರೂ. ನೀಡಬೇಕು ಎಂದು ತಿಳಿಸಿದರು. ನಮ್ಮಿಂದ ಅಷ್ಟೊಂದು ಹಣ ನೀಡಲಾಗುವುದಿಲ್ಲ ಎಂದಿದ್ದಕ್ಕೆ ೫೦ ಸಾವಿರ ರೂ. ನೀಡುವಂತೆ ಕೇಳಿದರು. ನಮ್ಮಿಂದ ಹಣ ನೀಡಲಾಗುವುದಿಲ್ಲ ಎಂದಿದ್ದು, ೨೧ ಸಾವಿರ ರೂಪಾಯಿಯಾದರೂ ನೀಡಬೇಕು. ಇಲ್ಲವಾದಲ್ಲಿ ಸಮಾಜದವರ ಹಾಗೂ ಸಮಾಜದ ಚಟುವಟಿಕೆಗಳಿಂದ ದೂರವಿಡಲಾಗುವುದು ಎಂದು ಸಮಾಜದ ಕೆಲ ಮುಖಂಡರು ಹೇಳಿದರು. ಈ ಕುರಿತು ಮೂರು ಬಾರಿ ಸಭೆ ನಡೆಸಲಾಗಿದ್ದು, ಯಾವುದೇ ಪ್ರಯೋಜ‌ನ ಆಗಿಲ್ಲ ಎನ್ನುತ್ತಾರೆ ಅಂತರ್ಜಾತಿ ವಿವಾಹ ಮಾಡಿಕೊಂಡ ಯುವಕನ ತಂದೆ ಶಂಕ್ರಪ್ಪ ಬೇವಿನಹಳ್ಳಿ.
ಕೆಲ ದಿನಗಳ ಹಿಂದೆ ನ್ಯಾಯ ಕೊಡಿಸುವಂತೆ ಶಂಕ್ರಪ್ಪ ಬೇವಿನಹಳ್ಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಪೊಲೀಸರು ಸಮಾಜದ ಅಧ್ಯಕ್ಷ ಪರಶುರಾಮ ನಾಯಕನನ್ನು ಸಂಪರ್ಕಿಸಿದ್ದು, ನಾವೇ ಇತ್ಯರ್ಥ ಪಡಿಸಿಕೊಳ್ಳುವುದಾಗಿ ತಿಳಿಸಿದ್ದರು. ಬಳಿಕ ನಡೆದ ಸಭೆಯಲ್ಲೂ ಸಮಸ್ಯೆ ಇತ್ಯರ್ಥ ಆಗಿಲ್ಲ ಎನ್ನಲಾಗಿದೆ.
ಶಂಕ್ರಪ್ಪ ಬೇವಿನಹಳ್ಳಿಯವರ ಪುತ್ರ ಅಂತರ್ಜಾತಿ ವಿವಾಹವಾಗಿದ್ದು, ಯಾರೂ ಸಮಾಜದಿಂದ ಬಹಿಷ್ಕರಿಸಿಲ್ಲ. ಈ ಕುರಿತು ಮೂರು ಬಾರಿ ಸಭೆ ನಡೆಸಿದರೂ ಕೆಲವರ ವೈಯಕ್ತಿಕ ಧ್ವೇಷದಿಂದ ಸಮಸ್ಯೆ ಇತ್ಯರ್ಥವಾಗಿಲ್ಲ. ಸಮಾಜದ ಸಭೆಯಲ್ಲಿ ಮುಖಂಡರ ಮನವೊಲಿಸಲು ಪ್ರಯತ್ನಿಸಿದರೂ ವಿಫಲವಾಗಿದೆ. ಹೀಗಾಗಿ ನಾನೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಭಾಗ್ಯನಗರದ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪರಶುರಾಮ ನಾಯಕ ತಿಳಿಸಿದರು.