ಅಂತರಾಳದ ನಡೆ ನಿಗೂಢ

Advertisement

ವಿಲಾಸ ಜೋಶಿ
ಬೆಳಗಾವಿ: ಲೋಕ ಸಮರದ ಫಲಿತಾಂಶದ ನಂತರ ರಾಜ್ಯ ರಾಜಕಾರಣ ಹೀಗೇ ಸಾಗುತ್ತದೆ ಎಂದು ಹೇಳುವುದು ಕಷ್ಟ ಸಾಧ್ಯವೇ ಸರಿ.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಡೈರೆಕ್ಟರ್' ಕುರಿತ ಆಡಿದ ಮಾತು ಮತ್ತು ಅದಕ್ಕೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ನೀಡಿದ ತೀಕ್ಷ್ಣ ಪ್ರತಿಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜಕಾರಣದ ದಿಕ್ಕು ಯಾವ ದಿಕ್ಕಿನತ್ತ ಹೋಗುತ್ತದೆ ಎನ್ನುವನ್ನು ಊಹಿಸಲು ಆಗದು. ಇದೆಲ್ಲದರ ಮಧ್ಯೆ ಸಚಿವ ಸತೀಶ ಜಾರಕಿಹೊಳಿ ಅವರು ಪುತ್ರಿ, ಸಂಸದೆ ಪ್ರಿಯಾಂಕಾ ಅವರನ್ನು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿಸಿದರು, ಈ ಸಂದರ್ಭದಲ್ಲಿ ಡಿಕೆಶಿ ಅವರು ಪ್ರಿಯಾಂಕಾರನ್ನು ಅಭಿನಂದಿಸಿ ರಾಜಕೀಯದ ಪಾಠ ಮಾಡಿದರು. ಇದನ್ನು ಗಮನಿಸಿದರೆ ಎಲ್ಲವೂ ಸರಿಯಾಗಿದೆ ಎಂದು ಭಾವಿಸಬಹುದು, ಆದರೆ ಅಂತರಾಳದ ರಾಜಕಾರಣದ ನಡೆ ಮಾತ್ರ ನಿಗೂಢ ಎನ್ನುವುದರಲ್ಲಿ ಎರಡು ಮಾತಿಲ್ಲ. ಸತೀಶ ನಡೆ ನಿಗೂಢ ಜಿಲ್ಲಾ ಉಸ್ತುವಾರಿ ಮಂತ್ರಿ ಸತೀಶ ಜಾರಕಿಹೊಳಿ ಅಸಮಾಧಾನದ ಮಾತುಗಳನ್ನು ಆಡಿದ್ದರ ಹಿಂದೆ ಮತ್ತೇನಾದರೂ ಕಾರಣವಿದೆಯೇ? ಸತೀಶ ಜಾರಕಿಹೊಳಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು. ಹೀಗಾಗಿ ಅವರು ಏನೇ ಮಾತನಾಡಿದರೂ ಕೂಡ ಎಲ್ಲರ ಬೊಟ್ಟು ಸಿಎಂರತ್ತ ಹೋಗುತ್ತಿದೆ. ಈ ಕಾರಣದಿಂದ ಸತೀಶ್ ಹೇಳಿಕೆ ರಾಜಕೀಯ ಚರ್ಚೆಗೆ ಕಾರಣವಾಗುತ್ತಿದೆ. ಬೆಳಗಾವಿ ತಾಲೂಕಿನಲ್ಲಿ ಪಿಎಲ್‌ಡಿ ಬ್ಯಾಂಕಿನ ವಿವಾದ ನೆನಪು ಮಾಡಿಕೊಂಡರೆ ಜಾರಕಿಹೊಳಿ ಮತ್ತು ಹೆಬ್ಬಾಳಕರ ನಡುವಿನ ಜಿದ್ದು ಹೇಗಿರುತ್ತದೆ ಎನ್ನುವುದು ಗೊತ್ತಾಗುತ್ತದೆ. ಮುಂದೆ ಇದು ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿತ್ತು. ಈಗ ಸತೀಶ ಜಾರಕಿಹೊಳಿ ಹೆಸರು ಉಲ್ಲೇಖಿಸದೇ ಡಿ.ಕೆ.ಶಿವಕುಮಾರ್ ಆಡಿದ ಮೆಂಟಲ್ ಮಾತು ಸಹಜವಾಗಿ ಮತ್ತೊಂದು ರಾಜಕೀಯ ಸಂಘರ್ಷಕ್ಕೆ ಕಾರಣವಾಗಬಹುದು ಎನ್ನುವ ಮಾತಿದೆ. ದೂರು ಕೊಟ್ಟರಾ ಹೆಬ್ಬಾಳಕರ? ಬೆಳಗಾವಿ ಲೋಕಸಮರದಲ್ಲಿ ಪುತ್ರ ಮೃಣಾಲ್ ಸೋಲಿನ ನಂತರ ಯಾರ ವಿರುದ್ಧವೂ ದೂರು ಕೊಡಲ್ಲ ಎನ್ನುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಮೂವರು ಕೈ ಶಾಸಕರ ವಿರುದ್ಧ ದೂರು ನೀಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಇಲ್ಲಿ ಸಚಿವರು ಬೆಳಗಾವಿ ಉತ್ತರ ಶಾಸಕ ಆಸೀಫ್ ಶೇಠ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮತ್ತು ಸವದತ್ತಿ ಶಾಸಕ ವಿಶ್ವಾಸ ವೈದ್ಯ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿದ್ದಾರೆಂದು ಗೊತ್ತಾಗಿದೆ. ಆದರೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ನಾವು ಯಾರ ವಿರುದ್ಧವೂ ದೂರು ನೀಡಿಲ್ಲ ಎಂದುಸಂಯುಕ್ತ ಕರ್ನಾಟಕ’ಕ್ಕೆ ಸ್ಪಷ್ಟಪಡಿಸಿದ್ದಾರೆ.