ಅಂತರಾತ್ಮವನ್ನು ಬೆಳೆಸುವುದೇ ಮೌಲ್ಯ

Advertisement

ಸಂಸ್ಕೃತಿಯು ಮಾನವೀಯ ಮೌಲ್ಯಗಳ ಆಧಾರದಿಂದ ಕೂಡಿದ್ದು ಭದ್ರಬುನಾದಿ ಹಾಕುತ್ತದೆ. ಸಂಸ್ಕಾರದಿಂದ ಸಂಸ್ಕರಣ ಉಂಟಾಗಿ ಸಂಸ್ಕೃತಿ ಉಂಟಾಗುತ್ತದೆ. ಸಂಸ್ಕೃತಿ ಎನ್ನುವುದು ಸುರಕ್ಷಿತವಾದ ದಂಡೆಯ ಮಧ್ಯದಲ್ಲಿರುವ ಚಲಿಸುವ ನದಿಯ ನೀರಿನಂತೆ. ಮಾನವೀಯ ಮೌಲ್ಯಗಳು ನದಿಯ ದಂಡೆಯನ್ನು ಸುರಕ್ಷಿತಗೊಳಿಸುವುದರೊಂದಿಗೆ ಸಮಾಜದ ಕಲ್ಮಶವನ್ನು ತೆಗೆದು ನಿರ್ಮಲಗೊಳಿಸುತ್ತದೆ. ಚಿತ್ತಸ್ಥೈರ್ಯ, ಮನೋದಾರ್ಢ್ಯ, ಸಂಕಲ್ಪಗಳು, ಭಾವನೆಗಳು, ಆದರ್ಶಗಳು ಮತ್ತು ಹೆಚ್ಚಿನ ನಿರೀಕ್ಷೆಗಳು ಸಮಾಜದಲ್ಲಿ ಮೌಲ್ಯಗಳನ್ನು ಸೃಷ್ಟಿಸುತ್ತದೆ. ತೈತ್ತೀರಿಯ ಉಪನಿಷತ್ತಿನ ಶಿಕ್ಷಾವಲ್ಲಿಯಲ್ಲಿ ಗುರುವು ಶಿಷ್ಯನ ವಿದ್ಯಾಭ್ಯಾಸ ಸಂಪೂರ್ಣವಾಗಿ ತನ್ನ ಮನೆಗೆ ನಿರ್ಗಮಿಸುವಾಗ ಕೊಡುವ ಸಂದೇಶವೆಂದರೆ; “ತಾಯಿ, ತಂದೆ, ಗುರುವಿನೊಡನೆ ಅತಿಥಿಯನ್ನು ಸೇರಿಸಿ ಎಲ್ಲರನ್ನೂ ದೇವರೆಂದೇ ಭಾವಿಸು” ಎಂದು. ಒಬ್ಬನ ಅಂತರಾತ್ಮವನ್ನು ಯಾವುದು ಬೆಳೆಸುವುದಿಲ್ಲವೋ ಅದಕ್ಕೆ ಮೌಲ್ಯವೆಂದು ಹೇಳಲಾಗುವುದಿಲ್ಲ. ಈ ಕೆಳಗಿನ ಅಂಗಗಳು ಭಾರತೀಯಮೌಲ್ಯಗಳ ಆಧಾರವನ್ನು ಒಳಗೊಂಡಿರುತ್ತದೆ: ಬದುಕಿನಲ್ಲಿ ಶ್ರದ್ಧೆ; ಬುದ್ಧಿಶಕ್ತಿಯ ಪ್ರತಿಫಲನ; ಪ್ರಕೃತಿಯ ಬಗ್ಗೆ ಬೆಳಕು ಚೆಲ್ಲುವುದು; ಸಮಾಜಕಲ್ಯಾಣ ಕಾರ್ಯಗಳು; ವ್ಯಕ್ತಿಯ ಉದಾತ್ತತೆ ಅಥವಾ ಆಂತರಿಕ ವಿಕಾಸ. ವ್ಯಕ್ತಿತ್ವವು ರೂಪುಗೊಳ್ಳಲು ಅನುಕೂಲವಾದ ಪ್ರಾಯದಲ್ಲಿ ಶ್ರೇಷ್ಠವಾದ ವ್ಯಕ್ತಿತ್ವವನ್ನು ರೂಪಿಸುವವನೇ ಗುರು; ಭವ್ಯವ್ಯಕ್ತಿಯಾಗಿ ರೂಪುಗೊಳ್ಳುವ ಕುಮಾರನೇ ಶಿಷ್ಯನು; ವಿಶ್ವವ್ಯಕ್ತಿತ್ವವು ರೂಪುಗೊಳ್ಳುವ ವ್ಯವಸ್ಥೆಯೇ ಬ್ರಹ್ಮಚರ್ಯಾಶ್ರಮ. ಜಗತ್ತಿನಲ್ಲಿ ಸತ್ವದ ಹೆಚ್ಚಳವಾದಾಗ ಸಮಾಜಗಳ ಮತ್ತು ವ್ಯಕ್ತಿಗಳ ಸ್ಥಿತಿ ಉತ್ತಮವಾಗಿ ಸರಳವಾಗುವುದು.
ನೈತಿಕತೆಯನ್ನು ಪ್ರತಿಪಾದಿಸುವ ಗ್ರಂಥಗಳು ಹಣದ ಮೂರು ಅವಸ್ಥೆಗಳನ್ನು ಪ್ರತಿಪಾದಿಸುತ್ತವೆ-ದಾನ, ಭೋಗ ಅಥವಾ ನಾಶ. “ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ”. ನೈತಿಕಮೌಲ್ಯಗಳಲ್ಲಿ ಕರ್ತವ್ಯಪ್ರಜ್ಞೆ, ಪ್ರಾಮಾಣಿಕತೆ, ಸಮರ್ಪಣಾಭಾವ, ತ್ಯಾಗ, ದಾನಪ್ರವೃತ್ತಿ, ಸೇವಾಭಾವನೆ, ಸನ್ನಡತೆ, ನಾಗರಿಕವ್ಯವಸ್ಥೆ, ಸತ್ಯದಲ್ಲಿ ನಂಬಿಕೆ, ಕಾನೂನಿನ ಪದ್ಧತಿಯಲ್ಲಿ ಗೌರವ ಇತ್ಯಾದಿಗಳು ಒಳಗೊಂಡಿರುತ್ತವೆ. ಭಾರತೀಯ ಜೀವನದ ಬೆನ್ನೆಲುಬು ಯಾವುದು ಎಂದು ಪ್ರಶ್ನಿಸಿದರೆ ಅದಕ್ಕೆ ಉತ್ತರವೆಂದರೆ; ಇಹಭೋಗದ ಸುಖದಿಂದ ದೂರವಿರುವುದು. ಇಂದ್ರಿಯಗೋಚರ ಸತ್ಯಕ್ಕಿಂತ ಬೇರೆ ಸತ್ಯವಿಲ್ಲ ಎಂಬ ಭ್ರಮೆ ನಮ್ಮನ್ನು ಕುರುಡರನ್ನಾಗಿ ಮಾಡುತ್ತದೆ. ಆಳವಿಲ್ಲದ ಮನುಷ್ಯರಲ್ಲಿ ಅಲ್ಪಭಾವನೆಗಳೆಂಬ ಮೀನುಗಳು ಮಹಾ ತುಮುಲವನ್ನುಂಟುಮಾಡುತ್ತವೆ; ಸಾಗರದಂತಹ ಮನಸ್ಸುಳ್ಳವರಲ್ಲಿ ಸ್ಫೂರ್ತಿಯ ತಿಮಿಂಗಿಲಗಳು ಕಿರುದೆರೆಯ ಕದಡನ್ನೂ ಉಂಟುಮಾಡದು.
ಆದರ್ಶಗಳ ಅನುಸಾರವಾಗಿಯೇ ಮನುಷ್ಯರ ಗುಣಕರ್ಮಗಳಿರುವುದು. ಮನುಷ್ಯನ ಗುಣಕರ್ಮವಿದ್ದಂತೆ ಅವನ ಸಮಾಜವಾಗುವುದು. ಸಮಾಜ ಹೇಗಿರುತ್ತದೆಯೋ ಹಾಗೆಯೇ ರಾಜ್ಯವಾಗುವುದು. ಪ್ಲೇಟೋನ ‘ರಿಪಬ್ಲಿಕ್’ನ ೬ನೇ ಅಧ್ಯಾಯದಲ್ಲಿ; “ದೂರದ ಯವನರ ರಾಜ್ಯವಿಲ್ಲದ ದೇಶದಲ್ಲಿ ಇಂತಹ ಆದರ್ಶರೂಪದ ಸಮಾಜ ವರ್ತಮಾನವಾಗಿದೆ ಮತ್ತು ಅಲ್ಲಿ ರಾಜಕುಮಾರ ಜ್ಞಾನದ ರಸಿಕನಾಗಿರುವನು” ಎಂದಿದೆ. ಪ್ಲೇಟೋಗಿಂತ ಬಹಳ ಮೊದಲೇ ಕಪಿಲವಸ್ತುವಿನ ಯುವರಾಜ ಭಗವಾನ್ ಬುದ್ಧನ ಉಪದೇಶಕರು ಗ್ರೀಕ್ ದೇಶ ತಲುಪಿದ್ದರು. ಆದ್ದರಿಂದ ಪ್ಲೇಟೋ ಉಲ್ಲೇಖಿಸುವ ಆ ದೂರ ದೇಶ ಭಾರತವೇ ಆಗಿದೆ. ಅಂದರೆ; ಅವನ ‘ರಿಪಬ್ಲಿಕ್’ ಗ್ರಂಥವು ಭಾರತದ ದೈಶಿಕಶಾಸ್ತçದಿಂದ ಪ್ರಭಾವಿತವಾಗಿದೆ ಎಂಬುದು ಸ್ಪಷ್ಟ. ಈ ವಿಷಯದಲ್ಲಿ ಅರಿಸ್ಟಾಟಲನ ಅಭಿಪ್ರಾಯವೂ ತನ್ನ ಗುರುವಾದ ಪ್ಲೇಟೋನ ಅಭಿಪ್ರಾಯದಂತೆಯೇ ಇದೆ. ಇವನ ಅಭಿಪ್ರಾಯದಂತೆಯೇ ಎಲ್ಲರೂ ಒಂದೇ ದೇಶದವರಿದ್ದು, ಪ್ರೇಮತೆಯಿಂದ ಕೂಡಿದ ಜನರಿರುವ ಸಮಾಜವೇ ಸರ್ವೋತ್ತಮವಾಗಿರುವುದು.
ರಾಗಿ ಮತ್ತು ಸಾಸಿವೆಯ ಬೀಜಗಳು ರೂಪ ಮತ್ತು ಬಣ್ಣದಲ್ಲಿ ಒಂದೇ ಸಮಾನವಾಗಿರುವುವು. ಆದರೆ ಸಸ್ಯರೂಪದಲ್ಲಿ ಅದರ ರೂಪಾಂತರವಾಗತೊಡಗಿದಾಗ ಅದರ ಸಹಜ ಸಂಸ್ಕಾರಗಳು ಬೇರೆ ಬೇರೆಯಾದ ಕಾರಣ ಅವು ಒಂದು ಮತ್ತೊಂದರಿಂದ ಸಂಪೂರ್ಣವಾಗಿ ಭಿನ್ನಪ್ರಕಾರದ್ದಾಗಿರುವುದು. ಮನುಷ್ಯ ಮತ್ತು ಪಶುವಿನ ಬಿಂದುವೂ ಪ್ರಾಯಶಃ ಒಂದೇ ಸಮಾನವಾಗಿರುವುದು. ಆದರೆ ಗರ್ಭಾವಸ್ಥೆಯಲ್ಲಿ ಅದರ ಮುಂದಿನ ವೃದ್ಧಿಯಾಗತೊಡಗಿದಾಗ ಸಹಜ ಸಂಸ್ಕಾರಗಳ ಭಿನ್ನತೆಯ ಕಾರಣದಿಂದ ಅವು ಒಂದು ಮತ್ತೊಂದರಿಂದ ಸಂಪೂರ್ಣ ಭಿನ್ನಪ್ರಕಾರದ್ದಾಗಿರುವುದು.
ಒಂದು ಸಂತಾನಕ್ಕೆ ಪಿತೃವಂಶದ ೧೪ ಪೀಳಿಗೆಗಳು ಮತ್ತು ಮಾತೃವಂಶದ ೫ ಪೀಳಿಗೆಗಳ ಸಂಸ್ಕಾರ ವರ್ಗಾವಣೆಯಾಗುತ್ತದೆ. ಪಿತೃವಂಶದ ಕಡೆಯಿಂದ ಶಾರೀರಿಕ ಸಂಸ್ಕಾರ ಹಾಗೂ ಮಾತೃವಂಶದ ಕಡೆಯಿಂದ ಮಾನಸಿಕ ಸಂಸ್ಕಾರ ವರ್ಗಾವಣೆಯಾಗುತ್ತದೆ. ಬಿಂದುರೂಪದಲ್ಲಿ ಮತ್ತು ಗರ್ಭಾವಸ್ಥೆಯಲ್ಲಿ ಪ್ರಾಪ್ತಮಾಡಿಕೊಂಡ ಸಂಸ್ಕಾರಗಳ ಅನುಸಾರವಾಗಿಯೇ ಜೀವದ (ಆತ್ಮದ) ಮನ, ಬುದ್ಧಿ, ಕರ್ಮ ಮತ್ತು ಶರೀರ ನಿರ್ಮಾಣವಾಗುವುದು. ಈ ಸಂಸ್ಕಾರ ಪ್ರಬಲವಾಗಿರುವುದು ಮತ್ತು ಮರಣಕಾಲದವರೆಗೂ ಮುಂದುವರಿಯುತ್ತದೆ.
ನಾವು ಸಮಾನವಾಗಿ ಮನುಷ್ಯರು ಮತ್ತು ದೈವಿಕರೂ ಹೌದು. ಅನಾಹತದ ಕೆಳಗಿನ ಮೂರು ಚಕ್ರಗಳು ನಮ್ಮನ್ನು ಆರೋಗ್ಯಕರ ಮಾನವನಾಗಲು ಸಹಕರಿಸಿದರೆ; ಅನಾಹತದ ಮೇಲಿನ ಮೂರು ಚಕ್ರಗಳು ಅಧ್ಯಾತ್ಮಿಕವಾಗಿ ವಿಕಾಸಗೊಳ್ಳಲು ಸಹಕರಿಸುತ್ತವೆ. ಹಿಂದೂಸಂಪ್ರದಾಯದ ಪ್ರಕಾರ ಮನುಷ್ಯನ ದೇಹದಲ್ಲಿರುವ ೧೦೯ ಚಕ್ರಗಳಲ್ಲಿ ಏಳು ಮೂಲಚಕ್ರಗಳಿದ್ದು (ಮೂಲಾಧಾರ, ಸ್ವಾಧಿಷ್ಠಾನ, ಮಣಿಪುರ, ಅನಾಹತ, ವಿಶುದ್ಧ, ಆಜ್ಞಾ, ಸಹಸ್ರಾರ) ಸೊಂಟದಿಂದ ತಲೆವರೆಗಿನ ಭಾಗದಲ್ಲಿ ಹರಡಿಕೊಂಡಿದ್ದು, ಬೆನ್ನುಮೂಳೆಯಲ್ಲಿ ಅಸ್ತಿತ್ವದಲ್ಲಿರುತ್ತದೆ ಹಾಗೂ ಪ್ರತಿಯೊಂದು ಚಕ್ರವೂ ಒಂದು ಅಂತಃಸ್ರಾವಕ ಗ್ರಂಥಿಗೆ ಸಂಬಂಧಿಸಿದೆ. ಚಕ್ರಗಳು ಮನುಷ್ಯನನ್ನು ವಿವರಿಸುತ್ತವೆ ಮತ್ತು ಸಹಜ ದೈವತ್ವವನ್ನು ಪ್ರದರ್ಶಿಸುತ್ತವೆ. ಮನುಷ್ಯ ಪ್ರಬುದ್ಧನಾಗುತ್ತಾ ಬಂದಂತೆ ದೇಹದೊಳಗಿನ ಚಕ್ರಗಳು ಅಭಿವೃದ್ಧಿ ಹೊಂದುತ್ತವೆ. ಪ್ರತಿಚಕ್ರವೂ ವ್ಯಕ್ತಿಯ ಜೀವನವಿಕಾಸದ ಮಾದರಿಯನ್ನು ಪ್ರತಿನಿಧಿಸುತ್ತದೆ. ಬಹುತೇಕರು ತಮ್ಮ ಭಾವನೆಗಳನ್ನು ನಿರ್ಬಂಧಿಸಿ ದೇಹಕ್ಕೆ ನೈಸರ್ಗಿಕಶಕ್ತಿಯ ಹರಿವನ್ನು ತಡೆಯುವ ಮೂಲಕ ಅನೇಕ ಅಹಿತಕರ ಅನುಭವಗಳಿಗೆ ಈಡಾಗಿ ಚಕ್ರಗಳ ಬೆಳವಣಿಗೆ ಮತ್ತು ಪರಿಪಕ್ವತೆಯ ಮೇಲೆ ಪರಿಣಾಮಬೀರಿ ಮಾನಸಿಕ ಅಸಮತೋಲನಕ್ಕೆ ಗುರಿಯಾಗುತ್ತಾರೆ. ಸಮಯ, ಸಂದರ್ಭ, ಸನ್ನಿವೇಶಗಳಿಗೆ ಮನುಷ್ಯನ ಪ್ರತಿಕ್ರಿಯಿಸುವಿಕೆಯ ವಿಧಾನ ಚಕ್ರಗಳ ಮೇಲೆ ಆ ಮೂಲಕ ತನ್ನದೇ ಅಭಿವೃದ್ಧಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ನೋಡಿ.
ಉದಾಹರಣೆಗೆ; ಇತರರಿಗೆ ಪ್ರೀತಿಯನ್ನು ನೀಡದ ವ್ಯಕ್ತಿ ಬೇರೆಯವರಿಂದಲೂ ಪ್ರೀತಿಯನ್ನು ಪಡೆಯಲಾರ. ಈ ಸ್ಥಿತಿ ನೇರವಾಗಿ ಹೃದಯವನ್ನು ಪ್ರತಿನಿಧಿಸುವ ಅನಾಹತ ಚಕ್ರದ ಮೇಲೆ ತೀವ್ರ ಪರಿಣಾಮಬೀರಿ ಹೃದ್ರೋಗ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕಾರಣ; ಅನಾಹತ ಚಕ್ರಕ್ಕೆ ನೈಸರ್ಗಿಕಶಕ್ತಿಯ ಹರಿವಿಗೆ ತಡೆಯುಂಟಾದ ಪರಿಣಾಮವಿದು. ಭಾವನೆಗಳನ್ನು ನಿರ್ಬಂಧಿಸುವುದೆಂದರೆ ಚಕ್ರಗಳ ಬೆಳವಣಿಗೆಗೆ ತಡೆಯೊಡ್ಡಿದಂತೆಯೇ. ಈ ರೀತಿ ತಡೆಗಳುಂಟಾದಾಗ ಆಯಾ ಚಕ್ರಗಳು ತನ್ನ ಪ್ರಭಾವದಲ್ಲಿರುವ ಅಂಗಾಂಗಗಳ ಮೇಲೆ ನೇರ ಪ್ರಭಾವಬೀರುವುದರಿಂದ ಒಂದೇ ಬಾರಿಗೆ ವಿವಿಧ ವ್ಯಾಧಿಗಳು, ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ. ಅಂತಹ ಸಂದರ್ಭದಲ್ಲಿ ಔಷಧಸೇವನೆಗಿಂತ ಭಾವನೆಗಳನ್ನು ಮುಕ್ತವಾಗಿ ಪ್ರಕಟಿಸಿದಾಗ ಆಯಾ ಸಮಸ್ಯೆ ತನ್ನಿಂತಾನೇ ಪರಿಹಾರವಾಗುತ್ತದೆ. ಇಲ್ಲವಾದಲ್ಲಿ ಮೊದಲೇ ಇರುವ ಸಮಸ್ಯೆ ಜತೆ ಔಷಧಿಯ ಅಡ್ಡಪರಿಣಾಮವೂ ಸೇರಿ ಇನ್ನಷ್ಟು ಜಟಿಲವಾಗುತ್ತದೆ.
ಛಾಂದೋಗ್ಯೋಪನಿಷತ್ತಿನಲ್ಲಿ;
ಅನ್ನಮಶಿತಂ ತ್ರೇಧಾ ವಿಧೀಯತೇ ತಸ್ಯಯಃ
ಸ್ಥವಿಷ್ಠೋಧಾತುಸ್ತತ್ಪುರೀಷಂ ಭವತಿ ಯೋ
ಮಧ್ಯಸ್ತನ್ಮಾಸಂ
ಯೋನಿಷ್ಠೋ ತನ್ನನಃ – ಅಂದರೆ; ಉಂಡ ಆಹಾರದ ಸ್ಥೂಲಭಾಗ ಮಲರೂಪದಲ್ಲಿ ವಿಸರ್ಜಿಸಲ್ಪಡುತ್ತದೆ; ಮಧ್ಯಮಭಾಗವು ಶರೀರವಾಗುತ್ತದೆ ಮತ್ತು ಸೂಕ್ಷ್ಮಭಾಗವು ಮನಸ್ಸಾಗುತ್ತದೆ ಎಂದರ್ಥ. ಸೇವಿಸಿದ ಆಹಾರ ಜೀರ್ಣವಾಗುವುದೆಂದರೆ ಅದು ಶರೀರವಾಗಿ ರೂಪಾಂತರವಾಗುವ ಪ್ರಕ್ರಿಯೆ.