ನವದೆಹಲಿ: ಕಳೆದ ಒಂಬತ್ತೂವರೆ ವರ್ಷಗಳ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಂಚೆ ಸೇವೆಗಳು, ಕಚೇರಿಗಳು ಮತ್ತು ಪೋಸ್ಟ್‌ಮ್ಯಾನ್‌ಗಳು ಕೇವಲ ಅಂಚೆ ಪತ್ರಗಳನ್ನು ವಿತರಣೆಯ ಜೋತೆಗೆ ಸೇವಾ ವಿತರಣೆಯಾಗಿ ಬದಲಾಗಿಸಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಕೇಂದ್ರ ಸರ್ಕಾರ ಸೋಮವಾರ 125 ವರ್ಷಗಳ ಹಿಂದಿನ (1898) ಹಳೆಯದಾದ ಭಾರತೀಯ ಅಂಚೆ ಕಚೇರಿ ಕಾಯಿದೆಯನ್ನು ರದ್ದುಗೊಳಿಸಿ, ಹೊಸದಾದ ವ್ಯವಸ್ಥೆಯನ್ನು ಜಾರಿಗೆ ತರುವ ಅಂಚೆ ಕಚೇರಿ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆ ಅಂಗೀಕರಿಸಿದೆ. 2014 ರಿಂದ 2023 ರ ವರೆಗೆ ಸುಮಾರು 5 ಸಾವಿರ ಅಂಚೆ ಕಚೇರಿಗಳನ್ನು ತೆರೆಯಲಾಗಿದೆ. ಸುಮಾರು 5,746 ಹೊಸ ಕಚೇರಿಗಳನ್ನು ತೆರೆಯುವ ಯೋಜನೆ ಪ್ರಕ್ರಿಯೆಯಲ್ಲಿದೆ, 1.6 ಲಕ್ಷ ಅಂಚೆ ಕಚೇರಿಗಳನ್ನು ಕೋರ್ ಬ್ಯಾಂಕಿಂಗ್ ಮತ್ತು ಡಿಜಿಟಲ್ ಬ್ಯಾಂಕಿಂಗ್ನೊಂದಿಗೆ ಜೋಡಿಸಲಾಗಿದೆ. 434 ಅಂಚೆ ಕಚೇರಿಗಳು 1.25 ಕೋಟಿಗೂ ಹೆಚ್ಚು ಪಾಸ್‌ಪೋರ್ಟ್ ಅರ್ಜಿಗಳನ್ನು ರವಾನಿಸಿದ್ದರೆ, 13,500 ಪೋಸ್ಟ್ ಆಫೀಸ್ ಆಧಾರ್ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು. ಬ್ಯಾಂಕಿಂಗ್ ವ್ಯವಸ್ಥೆಯಂತೆ ಕೆಲಸ ಮಾಡುವ ಅಂಚೆ ಕಚೇರಿಗಳು ಮಹಿಳೆಯರಿಗಾಗಿ 3.5 ಕೋಟಿ ಖಾತೆಗಳನ್ನು ಆರಂಭಿಸಿವೆ ಎಂದಿದ್ದಾರೆ. ಪೋಸ್ಟ್ ಆಫೀಸ್ ಬಿಲ್ 2023 ರ ಮೂಲಕ ನಾಗರಿಕ-ಕೇಂದ್ರಿತ ಸೇವೆಗಳನ್ನು ತಲುಪಿಸುವ ಜಾಲವಾಗಿ ಅಂಚೆ ಕಚೇರಿಗಳನ್ನು ಪರಿವರ್ತಿಸಲು ಕೇಂದ್ರವು ಬಯಸುತ್ತದೆ. ಅಂಚೆ ಕಚೇರಿಗಳನ್ನು ಖಾಸಗೀಕರಣಗೊಳಿಸಲು ಯಾವುದೇ ಅವಕಾಶವಿಲ್ಲ ಎಂದು ವೈಷ್ಣವ್ ಹೇಳಿದ್ದಾರೆ.