ʻಮೋದಿಯಿಂದ ದೇಶ ಅಪಾಯದಲ್ಲಿʼ

ಅಶೋಕ ಗೆಹ್ಲೋಟ್
Advertisement

ಬಳ್ಳಾರಿ: ನರೇಂದ್ರ ಮೋದಿ ಸರ್ಕಾರದಿಂದ ದೇಶ ಅಪಾಯದಲ್ಲಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಆತಂಕ ವ್ಯಕ್ತಪಡಿಸಿದರು.
ಐಕ್ಯತಾ ಸಮಾವೇಶದ ಮಾತನಾಡಿದ ಅವರು, ಮೋದಿ ಸರ್ಕಾರ ಬಂದ ಮೇಲೆ ಲೋಕಪಾಲರೂ ಬರಲಿಲ್ಲ; ಸ್ವಿಸ್ ಬ್ಯಾಂಕಿನಿಂದ ಹದಿನೈದು ಲಕ್ಷ ರೂಪಾಯಿಗಳೂ ಬರಲಿಲ್ಲ. ಭಾರತೀಯರ ಕೈಗೆ ಸಿಕ್ಕಿದ್ದು ಗೊರಟವಷ್ಟೇ ಎಂದು ಲೇವಡಿ ಮಾಡಿದರು.
ಬಿಜೆಪಿ ನೇತೃತ್ವದ ಸರ್ಕಾರ ದೇಶದ ಜನರನ್ನು ಎಲ್ಲ ಅರ್ಥದಲ್ಲಿ ಸಂಕಷ್ಟಕ್ಕೆ ಸಿಲುಕಿಸಿದೆ. ಜೊತೆಗೆ ಸಂವಿಧಾನಕ್ಕೆ ಅಪಾಯವನ್ನು ತಂದೊಡ್ಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೋನಿಯಾ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದ ಡಾ.ಮನಮೋಹನ ಸಿಂಗ್ ಅವರ ಸರ್ಕಾರ ದೇಶವಾಸಿಗಳ ಸಮಸ್ಯೆ ನೀಗಿಸಿ ಎಲ್ಲರನ್ನೂ ಬೆಸೆಯುತ್ತಿತ್ತು. ಈ ಸರ್ಕಾರ ಒಡೆದು ಆಳಿ, ಕೋಮುವಾದವನ್ನು ಮಾತ್ರ ಪ್ರಚೋದಿಸುತ್ತಿದೆ. ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಧ್ರುವೀಕರಣ ಮಾತ್ರ ಬಿಜೆಪಿ ಧ್ಯೇಯವಾಗಿದೆ ಎಂದು ಗೆಹ್ಲೋಟ್ ಖಂಡಿಸಿದರು.
ದೇಶದ ಭಾವೈಕ್ಯ ಸಂಸ್ಕೃತಿಯನ್ನು ಉಳಿಸುವುದರ ಜೊತೆಗೆ, ಭಾರತವನ್ನು ಸಂರಕ್ಷಣೆ ಮಾಡುವುದಕ್ಕಾಗಿ ೨೦೨೪ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರನ್ನು ಆಶೀರ್ವದಿಸಿ ಎಂದು ಸಮಾವೇಶದ ಇನ್ನೋರ್ವ ಅತಿಥಿಯಾಗಿದ್ದ ಛತ್ತೀಸ್‌ಗಡ್ ಮುಖ್ಯಮಂತ್ರಿ ಭೂಪೇಶ್ ಬಗೇಲ್ ಜನರನ್ನು ಕೋರಿದರು.