ಹುಬ್ಬಳ್ಳಿ: ವಿಧಾನ ಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದರೂ ಇನ್ನೂ ಪ್ರಮುಖ ಪಕ್ಷಗಳಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಗೊಂದಲ ಬಗೆ ಹರಿದಿಲ್ಲ. ಆದರೆ, ಜನಸಾಮಾನ್ಯರ ಪಕ್ಷ ಎಂದೇ ದೇಶವ್ಯಾಪಿಯಾಗಿ ಹೆಸರು ಗಳಿಸಿರುವ, ದೆಹಲಿ ಮತ್ತು ಪಂಜಾಬ್‌ನಲ್ಲಿ ಸರ್ಕಾರ ರಚನೆ ಮಾಡಿರುವ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪ್ರಚಾರಕ್ಕೆ ಜಿಲ್ಲೆಗೆ ಸ್ಟಾರ್ ಪ್ರಚಾರಕರಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಆಗಮಿಸುತ್ತಿದ್ದಾರೆ.
ಅವರು ಎಪ್ರಿಲ್ ೧೮ರಂದು ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿನ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಪರ ಪ್ರಚಾರ ನಡೆಸಲಿದ್ದಾರೆ.
ಕಿತ್ತೂರು ಕರ್ನಾಟಕದಲ್ಲಿಯೇ ಪ್ರಪ್ರಥಮ ಬಾರಿಗೆ ಧಾರವಾಡ ಜಿಲ್ಲೆಯ ಅಭ್ಯರ್ಥಿಗಳ ಪೈಕಿ ಭಗವಂತ ಮಾನ್ ಅವರು ಪ್ರಚಾರ ಕೈಗೊಳ್ಳುತ್ತಿರುವುದು ವಿಶೇಷವಾಗಿದೆ. ಧಾರವಾಡ ಜಿಲ್ಲೆಯ ಪಶ್ಚಿಮ ಕ್ಷೇತ್ರದ ಅಭ್ಯರ್ಥಿ ಎಂ. ಅರವಿಂದ, ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ವಿಕಾಸ ಸೊಪ್ಪಿನ ಮತ್ತು ಪೂರ್ವ ಕ್ಷೇತ್ರದ ಅಭ್ಯರ್ಥಿ ಬಸವರಾಜ ತೇರದಾಳ ಅವರ ಕ್ಷೇತ್ರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಗೋಕುಲ ರಸ್ತೆಯ ಅಕ್ಷಯ ಪಾರ್ಕ್, ಸಿದ್ಧಾರೂಢ ಮಠ, ಇಂಡಿ ಪಂಪ್‌ನ ಫತೇಹ ಶಾವಲಿ ದರ್ಗಾ, ಹಳೆ ಹುಬ್ಬಳ್ಳಿ ವೃತ್ತದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಆಮ್ ಆದ್ಮಿ ಪಕ್ಷದ ಧಾರವಾಡ ಜಿಲ್ಲಾ ಘಟಕದ ಕಾರ್ಯದರ್ಶಿ ಶಾಮ ನರಗುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷವು ಅಭಿವೃದ್ಧಿ ಆಧಾರದ ಮೇಲೆ ಜನಸಾಮಾನ್ಯರಿಂದ ಮತಯಾಚನೆ ಮಾಡುತ್ತದೆ. ಈ ಯೋಜನೆಯಡಿ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ ಅವರು ಆಮ್ ಆದ್ಮಿ ಪಕ್ಷದ ಧಾರವಾಡ ಜಿಲ್ಲೆಯ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಕೈ ಗೊಳ್ಳಲು ಬರುತ್ತಿದ್ದಾರೆ. ಸಾವಿರಾರು ಕಾರ್ಯಕರ್ತರು, ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.