ಹುಬ್ಬಳ್ಳಿ: ವರಿಷ್ಠರನ್ನು ಭೇಟಿಯಾಗಿ ಎರಡು ದಿನ ಕಳೆದಿವೆ. ಈವರೆಗೂ ಯಾವುದೇ ಸಂದೇಶ ಬಂದಿಲ್ಲ. ನಾಳೆ ಬೆಳಗ್ಗೆ 11ಗಂಟೆಯ ವರೆಗೂ ಕಾದು ನೋಡುತ್ತೇನೆ. ಆಮೇಲೆ ಮುಂದಿನ ಯೋಚನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಾಸಿಟಿವ್ ಆಗಿಯೇ ಇದ್ದೇನೆ. ಈಗಲೂ ಆಶಾಭಾವ ಇದೆ. ನಾಳೆಯೂ ಟಿಕೆಟ್ ಘೋಷಣೆ ಆಗದಿದ್ದಲ್ಲಿ ಅಭಿಮಾನಿಗಳ, ಕಾರ್ಯಕರ್ತರ ಸಭೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ.
ಬೇರೆ ಬೇರೆ ಜಿಲ್ಲೆಯಿಂದಲೂ ಕಾರ್ಯಕರ್ತರು ನಾಳೆ ಬರುತ್ತಿದ್ದಾರೆ. ಮೂರನೇ ಲಿಸ್ಟ್ ಬರುವವರೆಗೂ ಕಾಯಬೇಡಿ ಎನ್ನುತ್ತಿದ್ದಾರೆ. ಎಲ್ಲದಕ್ಕೂ ಒಂದು ಲಿಮಿಟ್ ಇರುತ್ತೆ. ಹೀಗಾಗಿ ನಾಳೆಯವರೆಗೂ ಹೋಪ್ಸ್ ಇದೆ. ಹೀಗಾಗಿ ನಾಳೆ 11ರ ಬಳಿಕ ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದರು.
ಪಕ್ಷ ಈ ರೀತಿ ನಡೆದುಕೊಂಡಿರೋದು ನನಗೆ ಮಾಡಿದ ಅಪಮಾನವಲ್ಲ. ಬದಲಾಗಿ ಮತದಾರರಿಗೂ ಅನ್ಯಾಯ ಮಾಡಿದಂತಾಗಿದೆ. ಈ ವಿಚಾರ ಈಗ ಕೇವಲ ಹುಬ್ಬಳ್ಳಿ-ಧಾರವಾಡಕ್ಕೆ ಸೀಮಿತವಾಗಿಲ್ಲ. ರಾಜ್ಯದ ಮೂಲೆ ಮೂಲೆಯಿಂದ ಫೋನ್ ಕರೆ ಬರುತ್ತಿವೆ. ನಾನು ಕಾಡಿ ಬೇಡಿ ಟಿಕೆಟ್ ಕೇಳುವವನಲ್ಲ. ವರಿಷ್ಠರು ಫೋನ್ ಮಾಡಿದ್ದಕ್ಕೆ, ಅವರಿಗೆ ಗೌರವ ಕೊಟ್ಟು ದೆಹಲಿಗೆ ಹೋಗಿದ್ದೆ ಎಂದು ಅಸಮಾಧಾನ ಹೊರ ಹಾಕಿದರು.
ಪಾಲಿಕೆ ಸದಸ್ಯರು, ನಾಯಕರ ವರ್ತನೆಯಿಂದ ಬೇಸರಗೊಂಡು ರಾಜೀನಾಮೆ ಕೊಟ್ಟಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.