ಹುಬ್ಬಳ್ಳಿ: ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದು ಹೈಕಮಾಂಡ್‌ನಿಂದ ಇಂದು ಬೆಳಿಗ್ಗೆ ಕರೆ ಬಂದಿದ್ದು ನಿಜ. 30 ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿದ ನನಗೆ, ವರಿಷ್ಠರ ಸೂಚನೆ ನೋವು ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಬೇಸರ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರು ಬಾರಿ ಗೆಲುವು ಸಾಧಿಸಿದ್ದೇನೆ. ಪ್ರತಿ ಬಾರಿಯೂ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ. ಆದರೂ ಟಿಕೆಟ್ ಕೈತಪ್ಪಿದೆ. ಟಿಕೆಟ್ ಕೈ ತಪ್ಪಿಸಲು ಕಾರಣ ಗೊತ್ತಾಗಬೇಕಿದೆ. ಈವರೆಗೂ ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ಟಿಕೆಟ್ ಕೊಡಬಾರದು ಎಂಬ ಚಿಂತನೆ ಇದ್ದರೆ ಎರಡು-ಮೂರು ತಿಂಗಳ ಹಿಂದೆಯೇ ಹೇಳಬಹುದಿತ್ತು. ಹೀಗಾಗಿ ಕೇಂದ್ರದ ಈ ನಿರ್ಧಾರಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದು ಶೆಟ್ಟರ ಹೇಳಿದರು. ಅಲ್ಲದೇ, ವರಿಷ್ಠರು ಈ ನಿರ್ಧಾರವನ್ನ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಪಕ್ಷದ ಹಾಗೂ ವರಿಷ್ಠರ ಮೇಲೆ ವಿಶ್ವಾಸವಿದ್ದು, ಸ್ಪರ್ಧೆ ಮಾಡಲು ಅವಕಾಶ ನೀಡುತ್ತಾರೆ ಎಂಬ ಅಚಲ ನಂಬಿಕೆ ಇದೆ. ಪಕ್ಷದ ವರಿಷ್ಠರು ಇನ್ನೊಂದು ಬಾರಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ.